ವೈದ್ಯಕೀಯ ವೃತ್ತಿ ಜಾತ್ಯಾತೀತವಾದದು: ಹಿರೇಮಗಳೂರು ಕಣ್ಣನ್

| Published : Jul 03 2024, 12:19 AM IST

ಸಾರಾಂಶ

ಅತ್ಯುತ್ತಮ ವೈದ್ಯ ಪ್ರಶಸ್ತಿ ಸ್ವೀಕರಿಸಿದ ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮನೋಜ್ ಸಾಲ್ಡಾನ ಅವರನ್ನು ಮಂಗಳವಾರ ಗೌರವಿಸಲಾಯಿತು.

ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮನೋಜ್ ಸಾಲ್ಡಾನಗೆ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವೈದ್ಯಕೀಯ ವೃತ್ತಿ ಜಾತ್ಯಾತೀತವಾಗಿದ್ದು, ಜೀವರಾಶಿಯ ಪ್ರಾಣವನ್ನು ಸಂರಕ್ಷಿಸುವ ಕ್ಷೇತ್ರ, ಕಾಯಕದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಿರಂತರವಾಗಿ ಮುನ್ನಡೆಯಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು.

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅತ್ಯುತ್ತಮ ವೈದ್ಯ ಪ್ರಶಸ್ತಿ ಸ್ವೀಕರಿಸಿದ ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮನೋಜ್ ಸಾಲ್ಡಾನ ಅವರಿಗೆ ಮಂಗಳವಾರ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಪಂಚವೇ ಕೊರೋನಾದಿಂದ ಬಳಲುತ್ತಿರುವ ಸಂದರ್ಭದಲ್ಲಿ ವೈದ್ಯರು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ತಿಂಗಳುಗಟ್ಟಲೇ ಕುಟುಂಬ ತೊರೆದು ಜನಸಾಮಾನ್ಯರ ಬದುಕಿಗಾಗಿ ಹೋರಾಡಿದವರು ಎಂದು ಹೇಳಿದರು.

ಸಹಜವಾಗಿ ಮನುಷ್ಯನ ಆರೋಗ್ಯವು ಹದಗೆಟ್ಟ ಕೂಡಲೇ ವೈದ್ಯರ ಬಳಿಗೆ ತೆರಳುವರು. ಸಹನೆ, ತಾಳ್ಮೆಯಿಂದ ರೋಗಿಗಳನ್ನು ಆರೈಸುವ ಕೆಲಸ ಸಾಮಾನ್ಯವಲ್ಲ. ತುರ್ತು ಪರಿಸ್ಥಿತಿ ಅಥವಾ ಇನ್ಯಾವುದೇ ಪ್ರಕರಣಗಳಲ್ಲಿ ರೋಗಿಗಳನ್ನು ಗುಣಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವ ವೈದ್ಯರ ಸೇವೆ ಅವಿಸ್ಮರಣೀಯ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಎಸ್‌ಸಿ ಘಟಕದ ಕಾರ್ಯದರ್ಶಿ ಸೀತರಾಮ ಭರಣ್ಯ ಮಾತನಾಡಿ, ವೈದ್ಯರ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಅತ್ಯುತ್ತಮ ವೈದ್ಯರೆಂಬ ಪ್ರಶಸ್ತಿ ನೀಡಿ ಡಾ.ಮನೋಜ್‌ ರನ್ನು ಗೌರವಿಸಿರುವುದು ಜಿಲ್ಲೆಗೆ ಕೀರ್ತಿ ತಂದಿದೆ. ಜೊತೆಗೆ ಹಿರೇಮಗಳೂರು ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಸ್ಥರಿಗೆ ಇನ್ನಷ್ಟು ಖುಷಿ ನೀಡಿದೆ ಎಂದರು.

ಈ ವೇಳೆ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ವಕ್ತಾರ ಎಚ್.ಎಸ್ ಪುಟ್ಟಸ್ವಾಮಿ, ಗ್ರಾಮಾಂತರ ಸಹ ವಕ್ತಾರ ಹಂಪಯ್ಯ, ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ನಗರ ಮಂಡಲ ಉಪಾಧ್ಯಕ್ಷ ಬಿ.ರೇವನಾಥ್, ಮಾಜಿ ಸಿ.ಡಿ.ಎ ಸದಸ್ಯ ರಾಜಕುಮಾರ, ನಗರ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧನಂಜಯ್, ನಗರ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಬೂತ್ ಅಧ್ಯಕ್ಷ ನಂದನ್ ಕುಮಾರ್, ವಕೀಲ ಶಿವಣ್ಣ, ಮುಖಂಡರುಗಳಾದ ಅರುಣ್, ಶಿವಕುಮಾರ್, ರವಿಕುಮಾರ್, ಸುರೇಶ್, ಪ್ರಕಾಶ್, ಶ್ರೀಕಾಂತ್ ಉಪಸ್ಥಿತರಿದ್ದರು.