ಮುಂಡಗೋಡ ಜನೌಷಧ ಕೇಂದ್ರ, ಕ್ಯಾಂಟೀನ್ ಮೇಲೆ ವೈದ್ಯಾಧಿಕಾರಿ ತಂಡ ದಾಳಿ

| Published : Jul 31 2025, 12:47 AM IST

ಮುಂಡಗೋಡ ಜನೌಷಧ ಕೇಂದ್ರ, ಕ್ಯಾಂಟೀನ್ ಮೇಲೆ ವೈದ್ಯಾಧಿಕಾರಿ ತಂಡ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡಗೋಡ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರ ಹಾಗೂ ಆಸ್ಪತ್ರೆ ಕ್ಯಾಂಟೀನ್ ಮೇಲೆ ಬುಧವಾರ ದಿಢೀರ್‌ ದಾಳಿ ನಡೆಸಿದ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳ ತಂಡ ಅವ್ಯವಸ್ಥೆ ಹಾಗೂ ಲೋಪ-ದೋಷ ಕಂಡು ಅಲ್ಲಿಯ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಮುಂಡಗೋಡ: ಇಲ್ಲಿಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರ ಹಾಗೂ ಆಸ್ಪತ್ರೆ ಕ್ಯಾಂಟೀನ್ ಮೇಲೆ ದಿಢೀರ್‌ ದಾಳಿ ನಡೆಸಿದ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳ ತಂಡ ಅವ್ಯವಸ್ಥೆ ಹಾಗೂ ಲೋಪ-ದೋಷ ಕಂಡು ಅಲ್ಲಿಯ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು.

ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಆರೋಗ್ಯ ಇಲಾಖೆ ತಂಡಕ್ಕೆ ಕ್ಯಾಂಟೀನ್‌ನಲ್ಲಿ ಸ್ವಚ್ಛತೆಯ ಕೊರತೆ, ಟೆಂಡರ್‌ದಾರರ ಬದಲು ಬೇರೆಯವರು ಕ್ಯಾಂಟೀನ್ ನಡೆಸುತ್ತಿರುವುದು ಹಾಗೂ ಕ್ಯಾಂಟೀನ್ ನಡೆಸುತ್ತಿರುವವರ ಫೋನ್ ಪೇ ಸ್ಕ್ಯಾನರ್ ಇರುವುದನ್ನು ಕಂಡು ಬಂತು. ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ, ಅವರು ಈ ಬಗ್ಗೆ ಅಲ್ಲಿಯ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಸಿಗಲಿಲ್ಲ. ಇದರಿಂದ ಅಸಮಾಧಾನಗೊಂಡ ಆರೋಗ್ಯಾಧಿಕಾರಿಗಳು, ಕ್ಯಾಂಟೀನ್ ಟೆಂಡರ್ ಪಡೆದವರಿಗೆ ನೋಟಿಸ್ ಜಾರಿಗೊಳಿಸುವುದಾಗಿ ತಿಳಿಸಿದರು.

ಬಳಿಕ ಜನೌಷಧ ಕೇಂದ್ರದಲ್ಲಿ ಜನೌಷಧಿ ಹೊರತುಪಡಿಸಿ ಇತರ ಖಾಸಗಿ ಕಂಪನಿಯ ಔಷಧಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಖಾಸಗಿ ಕಂಪನಿಯ ಔಷಧಿ ಏಕೆ ಮಾರಾಟ ಮಾಡುತ್ತೀರಿ? ಹೀಗಾದರೆ ಜನ ಔಷಧಿ ಹೆಸರೇಕೆ ಇರಬೇಕು ಎಂದು ಜನ ಔಷದಿ ಕೇಂದ್ರದ ಸಿಬ್ಬಂದಿಯನ್ನು ಪ್ರಶ್ನಿಸಿದರು. ಅಲ್ಲದೇ ನೋಟಿಸ್ ಜಾರಿ ಮಾಡುವ ಎಚ್ಚರಿಕೆ ನೀಡಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ, ಉಮೇಶ ಪುದಳೆ, ಸಂಜಯ ಕಟಾವಕರ, ವಿನಾಯಕ, ವಿಶಾಲ ಹಾಗೂ ವಾಸೀಮ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ಎರಡೂ ಕಡೆ ದಾಳಿ ನಡೆಸಿದಾಗ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಹಾಗಾಗಿ ಈ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಿ ಅವರ ಸಲಹೆ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ ಹೇಳಿದರು.