ರೋಗಿಗಳ ಚೇತರಿಕೆಯಲ್ಲಿ ಔಷಧಿ ನಿರ್ಣಾಯಕ ಪಾತ್ರ

| Published : Aug 25 2024, 01:53 AM IST

ಸಾರಾಂಶ

ರೋಗಿಗಳ ಚೇತರಿಕೆಯಲ್ಲಿ ಔಷಧಿಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಸಿದ್ಧಗಂಗಾ ವೈದ್ಯಕೀಯ ವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್‌ ಎಸ್.‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುರೋಗಿಗಳ ಚೇತರಿಕೆಯಲ್ಲಿ ಔಷಧಿಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಸಿದ್ಧಗಂಗಾ ವೈದ್ಯಕೀಯ ವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್‌ ಎಸ್.‌ ತಿಳಿಸಿದರು.ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನ್ಯಾಷನಲ್‌ ಫಾರ್ಮಾಕೋಲಜಿ ದಿನದ ಅಂಗವಾಗಿ ನಡೆದ ʼಫಾರ್ಮಾಕೋಥೆರಪ್ಯೂಟಿಕ್ಸ್ ಬೆಳವಣಿಗೆʼಗಳ ಕುರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಔಷಧಿಗಳ ಅಧ್ಯಯನ ಕ್ಷೇತ್ರವೂ ವೇಗ ಪಡೆದುಕೊಳ್ಳಬೇಕಿದೆ. ಒಂದು ಔಷಧಿ ಬಳಕೆಗೆ ಬರುವ ಮುನ್ನ ಹತ್ತಾರು ವರ್ಷಗಳ ಕ್ಲಿನಿಕಲ್‌ ಪ್ರಯೋಗಗಳ ದಾಟಿ ರೋಗಿಯ ಕೈ ಸೇರುತ್ತದೆ. ಆದ್ದರಿಂದ ಫಾರ್ಮಾಕೋಲಜಿಸ್ಟ್‌ಗಳ ಪಾತ್ರ ಅತ್ಯಂತ ಜವಾಬ್ದಾರಿಯುತವಾಗಿದೆ ಎಂದರು.

ಪ್ರಾಚಾರ್ಯ ಡಾ.ಶಾಲಿನಿ ಮಾತನಾಡಿ, ಪ್ಲೇಗ್‌, ಡೆಂಘೀ, ಕಾಲರ, ಕರೋನಾದಂತಹ ಪಿಡುಗುಗಳ ವಿರುದ್ಧ ಔಷಧಿ ಕಂಡು ಹಿಡಿದು, ಅದರ ನಿಖರ ಪರಿಣಾಮಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡ ಫಾರ್ಮಾಕಾಲಜಿಸ್ಟ್‌ಗಳು ಹಾಗೂ ಅದಕ್ಕೆ ಭಾಗಿಯಾದ ಸ್ವಯಂ ಸೇವಕರನ್ನು ನಾವು ಸದಾ ಸ್ಮರಿಸಬೇಕು. ವಯೋವೃದ್ಧರಲ್ಲಿ ಮರೆವಿನ ಕಾಯಿಲೆಗಳು ಹಾಗೂ ಔಷಧಿಗಳ ಬಳಕೆ ಕುರಿತು ಉಪನ್ಯಾಸ ನೀಡಿದರು.ಔಷಧಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪ್ರಿಯದರ್ಶಿ ಮಾತನಾಡಿ, ಭಾರತೀಯ ಔಷಧಿಶಾಸ್ತ್ರದ ಪಿತಾಮಹ ಡಾ.ರಾಮನಾಥ್‌ ಚೋಪ್ರಾ ಔಷಧಿ ಶಾಸ್ತ್ರ ಭಾರತದಲ್ಲಿ ಆರಂಭವಾಗಲು ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಅವುಗಳ ನಿರಂತರ ಅಧ್ಯಯನಕ್ಕೆ ನಾಂದಿಯಾದರು ಎಂದು ತಿಳಿಸಿದರು.ಸಿದ್ಧಗಂಗಾ ವೈದ್ಯಕೀಯ ಅಧಿಕ್ಷಕ ಡಾ.ನಿರಂಜನಮೂರ್ತಿ, ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಔಷಧಿಶಾಸ್ತ್ರದ ಮುಖ್ಯಸ್ಥೆ ಡಾ.ಪದ್ಮಜ ಉದಯ್‌ ಕುಮಾರ್‌, ಔಷಧಿ ಶಾಸ್ತ್ರದ ಉಪನ್ಯಾಸಕರಾದ ಡಾ.ಪ್ರದೀಪ್‌ ಕುಮಾರ್‌, ಡಾ.ಪ್ರಶಾಂತ್‌, ಡಾ.ಪ್ರದೀಪ, ಡಾ.ಇಂದು ಶ್ರೀ, ಡಾ.ಮೋಹಿತ್ ಇತರ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.