ಧ್ಯಾನ,ಜಪ, ಸ್ತೋತ್ರ ತಿಳಿದು ಅನುಷ್ಠಾನ ಮಾಡಿ: ಸ್ವರ್ಣವಲ್ಲೀ ಶ್ರೀ

| Published : Aug 13 2025, 12:30 AM IST

ಧ್ಯಾನ,ಜಪ, ಸ್ತೋತ್ರ ತಿಳಿದು ಅನುಷ್ಠಾನ ಮಾಡಿ: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಂತ ಉತ್ತಮವಾದ ಪ್ರಕಾರ ಎಂದರೆ ಧ್ಯಾನ. ದೇವರಲ್ಲಿ ಮನಸ್ಸನ್ನು ನಿಲ್ಲಿಸಲು ಉತ್ತಮವಾದ ರೀತಿ ಧ್ಯಾನ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಉಭಯ ಶ್ರೀಗಳ ಚಾತುರ್ಮಾಸ್ಯದ ಸೇವೆ ಯಲ್ಲಾಪುರ ತಾಲೂಕಿನ ಹಳವಳ್ಳಿ, ಹಿಲ್ಲೂರು, ಕೊಡ್ಲಗದ್ದೆ ಭಾಗದ ಶಿಷ್ಯ ಭಕ್ತರು ಸಲ್ಲಿಸಿದರು.

ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪಾದುಕಾ ಪೂಜೆ, ಭಿಕ್ಷಾ ಸೇವೆ ಸಮರ್ಪಿಸಿದರು.

ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಮನಸ್ಸನ್ನು ದೇವರಲ್ಲಿ ನಿಲ್ಲಿಸುವ ಹಾಗೆ ಆಗಬೇಕು. ಅದರ ಭಾಗವಾಗಿ ಜಪ ಮತ್ತು ಪೂಜೆ. ಮನಸ್ಸು ತುಂಬ ಚಂಚಲ, ಅಂತಹ ಮನಸ್ಸನ್ನು ನಿಶ್ಚಲವಾಗಿಸಿ ದೇವರಲ್ಲಿ ನಿಲ್ಲಿಸುವುದು ಬಹಳ ದೊಡ್ಡ ಕೆಲಸ. ನಮಗೆ ಜೀವನದಲ್ಲಿ ನೆಮ್ಮದಿ, ಸದ್ಗತಿ, ಮೋಕ್ಷ ಬೇಕು ಇವೆಲ್ಲದಕ್ಕೂ ದೇವರಲ್ಲಿ ಮನಸ್ಸನ್ನು ನಿಲ್ಲಿಸುವಿಕೆ ಎನ್ನುವುದು ಅತ್ಯಂತ ಅಗತ್ಯ ಎಂದರು.

ದೇವರಲ್ಲಿ ಮನಸ್ಸನ್ನು ನಿಲ್ಲಿಸುವುದಕ್ಕೆ ನಮ್ಮಲ್ಲಿ ನಾಲ್ಕು ರೀತಿಗಳು ಇದ್ದಾವೆ. ಧ್ಯಾನ, ಜಪ, ಸ್ತೋತ್ರ ಮತ್ತು ಪೂಜೆ. ಇವುಗಳನ್ನು ತಿಳಿದುಕೊಂಡು ಅನುಷ್ಠಾನ ಮಾಡಬೇಕು. ಇದನ್ನು ತಿಳಿದು ಅನುಷ್ಠಾನ ಮಾಡಿದರೆ ನಮ್ಮ ಪ್ರಾಚೀನ ಪರಂಪರೆಯ ಸಾರ ಗ್ರಹಿಸಿದ ಹಾಗೆ ಆಗುತ್ತದೆ ಎಂದ ಅವರು, ಅತ್ಯಂತ ಉತ್ತಮವಾದ ಪ್ರಕಾರ ಎಂದರೆ ಧ್ಯಾನ. ದೇವರಲ್ಲಿ ಮನಸ್ಸನ್ನು ನಿಲ್ಲಿಸಲು ಉತ್ತಮವಾದ ರೀತಿ ಧ್ಯಾನ. ಧ್ಯಾನ ಎಂದರೆ ಏಕಾಗ್ರತೆಯ ಚಿಂತನೆ. ನಮ್ಮ ಹೃದಯದಲ್ಲಿ ದೇವರು ಇದ್ದಾನೆ. ಹೃದಯದಲ್ಲಿ ದೇವರನ್ನು ಭಾವಿಸಿಕೊಂಡು ಏಕಾಗ್ರತೆಯಿಂದ ನಮ್ಮ ಮನಸ್ಸನ್ನು ದೇವರಲ್ಲಿ ನಿಲ್ಲಿಸಬೇಕು ಇದೇ ಧ್ಯಾನ. ನಿಲ್ಲಿಸುವ ಹಾಗೆ ಆಗಬೇಕು. ಚಂಚಲವಾದ ಮನಸ್ಸನ್ನು ದೇವರಲ್ಲಿ ನಿಲ್ಲಿಸುವುದು ಕಷ್ಟ ಇದನ್ನು ದೇವರಲ್ಲಿ ನಿಲ್ಲುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ೯೫ ಕ್ಕೂ ಹೆಚ್ಚು ಪ್ರತಿಶತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶ್ರೀಗಳು ನೀಡಿದರು. ಮಹನೀಯರು ಗಾಯತ್ರೀ ಜಪಾನುಷ್ಠಾನ, ಮಾತೆಯರು ಶ್ರೀಶಂಕರಸ್ತೋತ್ರ ಪಠಣ, ಲಲಿತಾ ಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಿದರು.

ಸೀಮಾ ಅಧ್ಯಕ್ಷ ರಾಜೇಶ ಹೆಗಡೆ ಮತ್ತು ರಾಮಚಂದ್ರ ಹೆಗಡೆ, ನಾಗಪ್ಪ ಭಟ್ಟ, ಗೋವಿಂದ ಹೆಗಡೆ, ನರಸಿಂಹ ಭಟ್ಟ, ಶ್ರೀಕೃಷ್ಣ ಭಟ್ಟ ಇತರರು ಇದ್ದರು.