ಮಾನಸಿಕ ನೆಮ್ಮದಿಗೆ ಧ್ಯಾನ ಮುಖ್ಯ: ಯೋಗಿ ಸದಾನಂದಗಿರಿ ಸ್ವಾಮೀಜಿ

| Published : Oct 01 2024, 01:35 AM IST

ಮಾನಸಿಕ ನೆಮ್ಮದಿಗೆ ಧ್ಯಾನ ಮುಖ್ಯ: ಯೋಗಿ ಸದಾನಂದಗಿರಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ಸಾಮಾನ್ಯ ವ್ಯಕ್ತಿ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು, ನೆಮ್ಮದಿ, ಆರೋಗ್ಯಕರ ಜೀವನಕ್ಕೆ ಹಾಗೂ ಅತ್ಯುತ್ತಮ ವ್ಯಕ್ತಿಯಾಗಿ ಬದಲಾಗಲು ಧ್ಯಾನ ಮುಖ್ಯವಾಗಿದೆ.

ದೇವಿಕ್ಯಾಂಪಿನ ಶ್ರೀಸಾಯಿ ಓಂಕಾರೇಶ್ವರ ಸಂಜೀವಿನಿ ಪಿರಮಿಡ್ ಧ್ಯಾನಕೇಂದ್ರಕ್ಕೆ ಶ್ರೀ ಭೇಟಿ

ಕನ್ನಡಪ್ರಭ ವಾರ್ತೆ ಕಾರಟಗಿ

ಧ್ಯಾನ ಎಂದರೆ ಪರ್ವತದ ಮೇಲೆ, ನೀಲಿ ಮೋಡಗಳ ಕೆಳಗೆ ನಿಂತಿರುವ ಯೋಗಿಗಳೆಂದು ಎಲ್ಲರ ತಲೆಗೆ ಬರುವುದು ಸಹಜ. ಧ್ಯಾನ ಬರೀ ಯೋಗಿಗಳಿಗಷ್ಟೇ ಸಂಬಂಧಿಸಿದ್ದಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು, ನೆಮ್ಮದಿ, ಆರೋಗ್ಯಕರ ಜೀವನಕ್ಕೆ ಹಾಗೂ ಅತ್ಯುತ್ತಮ ವ್ಯಕ್ತಿಯಾಗಿ ಬದಲಾಗಲು ಧ್ಯಾನ ಮುಖ್ಯವಾಗಿದೆ. ಧ್ಯಾನ ಪ್ರತಿಯೊಂದು ಜೀವಿಗೂ ಸಂಬಂಧಿಸಿದ್ದಾಗಿದೆ ಎಂದು ಹಿಮಾಲಯ ಯೋಗಿ ಸದಾನಂದಗಿರಿ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ದೇವಿಕ್ಯಾಂಪಿನ ಶ್ರೀಸಾಯಿ ಓಂಕಾರೇಶ್ವರ ಸಂಜೀವಿನಿ ಪಿರಮಿಡ್ ಧ್ಯಾನಕೇಂದ್ರಕ್ಕೆ ಭೇಟಿ ನೀಡಿ ಸತ್ಸಂಗದಲ್ಲಿ ಮಾತನಾಡಿದರು.ಇತ್ತೀಚಿನ ಒತ್ತಡದ ಜೀವನಕ್ಕೆ ಧ್ಯಾನ ಅವಶ್ಯಕ. ನಮ್ಮ ಗಮನ ಬೇರೆಡೆಗೆ ಹೋಗದಂತೆ, ಶಾಂತ ಮನಸ್ಸು, ಭಾವನೆಗಳು ಮತ್ತು ಆಲೋಚನೆಗಳ ಸ್ಪಷ್ಟತೆ, ನವ ಯೌವನ ಪಡೆಯುವುದು, ಆಂತರಿಕ ಶಕ್ತಿ ಮತ್ತು ಒತ್ತಡದ ಸಂದರ್ಭಗಳಲ್ಲಿಯೂ ಕೂಡ ಭಾವನೆಗಳನ್ನು ಸಮತೋಲನದಲ್ಲಿಡುವ ಸಾಮರ್ಥ್ಯವನ್ನು ನಾವು ಧಾನ್ಯದಿಂದ ಪಡೆದುಕೊಳ್ಳಬಹುದು ಎಂದರು.

ಇದರ ಜೊತೆಗೆ, ಧ್ಯಾನವು ಖಿನ್ನತೆ ಮತ್ತು ಆತಂಕದಿಂದ ಎದುರಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ನೀವು ಧ್ಯಾನದ ಅಭ್ಯಾಸ ಮುಂದುವರಿಸಲು ಸಾಧ್ಯವಾಗದಿರಲು ಕಾರಣ ಹುಡುಕುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಧ್ಯಾನದ ಅಭ್ಯಾಸ ಮುಂದುವರೆಸಲು ಪ್ರಯತ್ನಿಸಿ, ಮನಸ್ಸು ಹತೋಟಿಗೆ ಬರಲು ಹಾಗೂ ದೇಹ ವಿಶ್ರಾಂತಿ ಸ್ಥಿತಿಗೆ ಬರಲು ಸಮಯ ಬೇಕಾಗುತ್ತದೆ. ಧ್ಯಾನಕ್ಕೆ ಇಂತಹದ್ದೇ ಸ್ಥಳ ಬೇಕೆಂದಿಲ್ಲ. ಯಾವುದೇ ಗದ್ದಲವಿಲ್ಲದೆ ಪ್ರಶಾಂತವಾಗಿರುವ ಸ್ಥಳವಾದರೆ ಸಾಕು ಎಂದರು.

ಬಳ್ಳಾರಿಯ ಪಿರಮಿಡ್ ಧ್ಯಾನ ಕೇಂದ್ರದ ನಾಗಿರೆಡ್ಡಿ ಮಾತನಾಡಿ, ೧೧೦ ವಯಸ್ಸಿನ ಹಿಮಾಲಯ ಯೋಗಿ ಸದಾನಂದಗಿರಿ ಸ್ವಾಮೀಜಿ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿನ ಆಗಿನ ರಾಜ ಜಕಾರಿಯ ಕಾಲೇಜಿನಲ್ಲಿ ೧೯೩೮ರಲ್ಲಿ ಮಾಸ್ಟರ್ ಡಿಗ್ರಿ ಪಡೆಯುತ್ತಾರೆ, ೧೯೪೪ರಲ್ಲಿ ಸನ್ಯಾಸತ್ವ ಪಡೆದ್ದು, ಅಲ್ಲಿಂದ ಇಲ್ಲಿಯವರೆಗೆ ಧ್ಯಾನ, ಧರ್ಮ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.

ದೇವಿಕ್ಯಾಂಪಿನ ಪಿರಮಿಡ್ ಧ್ಯಾನ ಕೇಂದ್ರದ ಮುಖ್ಯಸ್ಥೆ ಹಾಗೂ ಪುರಸಭೆ ಸದಸ್ಯೆ ಜಿ.ಅರುಣಾದೇವಿ, ಉದ್ಯಮಿ ವಿಶ್ವನಾಥ ಜವಳಿ, ಸಿ.ಎಚ್. ಸುಬ್ಬಾರಾವ್ ಸದಾನಂದಗಿರಿ ಸ್ವಾಮೀಜಿಗೆ ಸನ್ಮಾನಿಸಿದರು.

ಈ ಸಂದರ್ಭ ಬಳ್ಳಾರಿಯ ಗೀತಾ ಯಾದವ್, ಶಿರುಗುಪ್ಪ ಹನುಮೇಶ ಶ್ರೇಷ್ಠಿ, ಪ್ರವೀಣ್ ಪಾಟೀಲ್, ಡಾ. ಶಿಲ್ಪಾ ದಿವಟರ್, ನಿರ್ಮಲಾ ಜಡಿಯಪ್ಪ ಸಾಲಗುಂದಿ, ಬಿ.ಲಕ್ಷ್ಮೀ, ಗಂಗಣ್ಣ, ಪವನ್‌ಕುಮಾರ್, ಶೀಲ್ಪಾ, ರವಿಶಂಕರ್, ಭಾರತಿ, ಮೀನಾಕ್ಷಿ ಮಾನ್ವಿ, ಮಾರುತಿ, ರಮೇಶ, ಶರಣಪ್ಪ, ದುರಗಪ್ಪ, ಅರ್ಪಿತಾ, ನಾಗಮಣಿ, ಸೂರ್ಯವತಿ, ಪರಿಮಳ, ಶ್ರೀದೇವಿ ಗೂನಾಳ ಸೇರಿದಂತೆ ಇತರರಿದ್ದರು.