ಸಾರಾಂಶ
ಹೊಸಪೇಟೆ: ಮನಸ್ಸು, ದೇಹವನ್ನು ಕಾಡುವ ಎಲ್ಲ ಸಮಸ್ಯೆಗಳಿಗೆ ನಾವೇ ಕಾರಣವಾಗಿದ್ದು, ಇದಕ್ಕೆ ಪರಿಹಾರವೂ ನಮ್ಮಲ್ಲೇ ಇದ್ದು ಅದನ್ನು ಕಂಡುಕೊಳ್ಳಲು ಧ್ಯಾನ ಏಕೈಕ ಮಾರ್ಗವಾಗಿದೆ ಎಂದು ಧ್ಯಾನ ಸಾಧಕಿ ಮೀನಾ ಕಾಕುಬಾಳ ತಿಳಿಸಿದರು.ನಗರದ ಫ್ರೀಡಂ ಪಾರ್ಕ್ ನಲ್ಲಿ ಪತಂಜಲಿ ಯೋಗ ಸಮಿತಿ, ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಸಹಯೋಗದಲ್ಲಿ ಶನಿವಾರ ನಡೆದ ಪ್ರಥಮ ವಿಶ್ವ ಧ್ಯಾನ ದಿನದ ಸಮಾರಂಭದಲ್ಲಿ ಮಾತನಾಡಿ, ಧ್ಯಾನ ನಮ್ಮ ಮಾನಸಿಕ ನೆಮ್ಮದಿಯ ಜೊತೆ ಎಲ್ಲವನ್ನು ಸಮಾನವಾಗಿ ಸ್ವೀಕರಿಸುವ ಮತ್ತು ಎದುರಿಸು ಸಾಮರ್ಥ್ಯವನ್ನು ತಂದುಕೊಡುತ್ತದೆ. ಮನಸ್ಸಿನ ನಿಗ್ರಹ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಹಾಗೂ ನಮ್ಮನು ಆತ್ಮಾವಲೋಕನಕ್ಕೆ ಒಳಪಡುವಂತೆ ಮಾಡಿ ಮಾನಸಿಕ ನೆಮ್ಮದಿಗೆ ಅಣಿಮಾಡುತ್ತದೆ ಎಂದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಸಮಿತಿ ಸದಸ್ಯ ಬಾಲಚಂದ್ರಶರ್ಮಾ ಮಾತನಾಡಿ , ಯೋಗದ ಮಹತ್ವ ವಿಶ್ವಕ್ಕೆ ಪರಿಚಯಿಸಲು ಬಾಬಾ ರಾಮದೇವ ಪಡುತ್ತಿರುವ ಶ್ರಮ ಅದರ ಲಾಭ ವಿಶ್ವಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಧ್ಯಾನಕ್ಕೂ ಇರುವ ಮಹತ್ವ ವಿಶ್ವಕ್ಕೆ ತಿಳಿಸುವ ಆ ಮೂಲಕ ನಮ್ಮ ಹಾಗೂ ವಿಶ್ವಶಾಂತಿಗೆ ಕಾರಣವಾಗಲು ನಾವೆಲ್ಲಾ ಹೆಚ್ಚು ಜನರನ್ನು ಈ ಸಾಧನೆಯ ಹಾದಿಗೆ ತರಬೇಕಾಗಿದೆ. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಡಾ.ಎಫ್.ಟಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಯುವ ಪ್ರಭಾರಿ ಕಿರಣ್ ಕುಮಾರ, ಮಹಿಳಾ ಪ್ರಭಾರಿ ಮಂಗಳಕ್ಕ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಿವಮೂರ್ತಿ, ಶ್ರೀಧರ, ಶ್ರೀನಿವಾಸ್ ಮಂಚಿಕಟ್ಟಿ, ಹುಲಿಗಿಯ ವೆಂಕಟೇಶ, ಡಾ.ಸುಮಂಗಲಾದೇವಿ, ಚಂದ್ರಿಕಾ, ಪ್ರಮೀಳಮ್ಮ, ವೆಂಕಟೇಶ, ರಾಮಚಂದ್ರ ಕಂಬದ ಸೇರಿದಂತೆ ಹೊಸಪೇಟೆಯ ಯೋಗ ಕೇಂದ್ರಗಳ ಸಂಚಾಲಕರು, ಮುಖ್ಯಸ್ಥರು ಪಾಲ್ಗೊಂಡಿದ್ದರು.
ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಅನಂತ ಜೋಶಿ, ಸುಜಾತಾ ಕರ್ಣಂ, ಸಂಚಾಲಕ ಶ್ರೀರಾಮ ನಿರ್ವಹಿಸಿದರು.ಹೊಸಪೇಟೆಯ ಫ್ರೀಡಂ ಪಾರ್ಕ್ ನಲ್ಲಿ ಪತಂಜಲಿ ಯೋಗ ಸಮಿತಿ, ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಸಹಯೋಗದಲ್ಲಿ ಪ್ರಥಮ ವಿಶ್ವ ಧ್ಯಾನ ದಿನದ ಸಮಾರಂಭ ನಡೆಸಲಾಯಿತು.