ಸಾರಾಂಶ
ಧ್ಯಾನದಿಂದ ದುಶ್ಚಟಗಳು ತಾನಾಗಿಯೇ ದೂರವಾಗುತ್ತವೆ.
ಕನ್ನಡಪ್ರಭ ವಾರ್ತೆ ಹನುಮಸಾಗರ
ಧ್ಯಾನದಿಂದ ದುಶ್ಚಟಗಳು ತಾನಾಗಿಯೇ ದೂರವಾಗುತ್ತವೆ ಎಂದು ಪಿಎಸ್ಎಸ್ಎಮ್(ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂವ್‌ಮೆಂಟ್) ಮಾಸ್ಟರ್ ಇ.ಜಿ. ಮೇದಿಕೆರಿ ಹೇಳಿದರು.ಗ್ರಾಮದ ರಾಯಲ್ ಫೌಂಡೇಶನ್ ಸೇವಾ ಸಂಸ್ಥೆ ಹಾಗೂ ಮೇದಿಕೆರಿ ಆರ್ಟ್ ಗ್ಯಾಲರಿ ಸಹಯೋಗದಲ್ಲಿ ಕುರುಬಗೇರಾ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ಧ್ಯಾನ ದಿನಾಚರಣೆಯ ಅಂಗವಾಗಿ ನಡೆದ ಆನಾಪಾನಸತಿ ಧ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರಂತರವಾಗಿ ಧ್ಯಾನ ಮಾಡುವುದರಿಂದ ನಮ್ಮಲ್ಲಿ ಇರುವ ದುಶ್ಚಟಗಳು ತಾನಾಗಿಯೇ ಹೋಗುವುದರ ಜೊತೆಗೆ ಮನಸ್ಸು ಸದಾ ಉಲ್ಲಾಸವಾಗುತ್ತದೆ, ಮನಸ್ಸು ಶಾಂತವಾಗುತ್ತದೆ. ಧ್ಯಾನ ಮಾಡಬೇಕಾದರೆ ಎರಡು ಕೈ ಜೋಡಿಸಿಕೊಂಡು ಎರಡು ಕಣ್ಣುಗಳನ್ನು ಮುಚ್ಚಿ, ಸಹಜವಾಗಿ ನಡೆಯುತ್ತಿರುವ ಉಸಿರಾಟ ಗಮನಿಸುತ್ತಿರಬೇಕು. ಯಾವ ಮಂತ್ರ ಜಪ ಅಥವಾ ನಾಮಸ್ಮರಣೆ ಇರಬಾರದು. ಯಾವ ದೈವಿ ಕಲ್ಪನೆಗಳ ಅಗತ್ಯವಿಲ್ಲ. ಸಹಜವಾಗಿಯೇ ನಡೆಯುತ್ತಿರುವ ಉಸಿರಾಟ ಗಮನಿಸಿ. ಆ ಸಹಜವಾದ ಉಸಿರಾಟದ ಮೇಲೆ ಗಮನವಿಡುತ್ತಿದ್ದರೆ ಕ್ರಮೇಣ ಆಲೋಚನಾ ರಹಿತ ಸ್ಥಿತಿ ಉಂಟಾಗುತ್ತದೆ. ಇದೇ ಧ್ಯಾನದ ಸ್ಥಿತಿ. ಆ ಧ್ಯಾನದ ಸ್ಥಿತಿಯಲ್ಲಿ ಅಪಾರವಾಗಿ ವಿಶ್ವಮಯ ಪ್ರಾಣಶಕ್ತಿ (ಕಾಸ್ಮಿಕ್ ಎನರ್ಜಿ) ಶರೀರದಲ್ಲಿ ಪ್ರವೇಶಿಸಿ ನಾಡೀಮಂಡಲ ಶುದ್ಧಿಯಾಗಿ ಸಂಪೂರ್ಣ ಆರೋಗ್ಯ ದೊರಕುತ್ತದೆ. ಪ್ರತಿ ದಿನ ನಿಯಮಬದ್ಧವಾಗಿ ಧ್ಯಾನ ಮಾಡುವುದರಿಂದ ದೇಹದಲ್ಲಿ ಪ್ರಾಣಶಕ್ತಿಯ ಮಟ್ಟ ಹೆಚ್ಚಿ ಸೂಪ್ತ ಚೇತನಗಳು ಜಾಗೃತಿಯಾಗುತ್ತವೆ. ಕ್ರಮೇಣ ನಮ್ಮಲ್ಲಿನ ದಿವ್ಯಚಕ್ಷು ಉತ್ತೇಜನಗೊಳ್ಳುತ್ತದೆ. ಪಿರಮಿಡ್ ಶಕ್ತಿ ಲಭ್ಯವಿದ್ದಡೆ ಪಿರಮಿಡ್‌ಗಳನ್ನು ಬಳಸಿ ಧ್ಯಾನ ಮಾಡಿದರೆ, ಧ್ಯಾನ ಸ್ಥಿತಿಗೆ ಬೇಗ ತಲುಪುತ್ತೇವೆ. ಧ್ಯಾನದ ಶಕ್ತಿ ಅಪಾರವಾಗಿ ಹೆಚ್ಚುತ್ತದೆ ಎಂದರು.ಮುಖ್ಯ ಶಿಕ್ಷಕ ಚಂದಪ್ಪ ಹಕ್ಕಿ, ವಸಂತ ಸಿನ್ನೂರ ಮಾತನಾಡಿದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಂದ ೧೫ ನಿಮಿಷ ಆನಾಪಾನಸತಿ ಧ್ಯಾನ ಮಾಡಿಸಲಾಯಿತು.ದೈಹಿಕ ಶಿಕ್ಷಕಿ ಗೌರಮ್ಮ ತಳವಾರ, ಜರಿನಾ ಬೇಗಂ, ಮಧುಮತಿ ಗುಬ್ಬಣ್ಣವರ, ವಿದ್ಯಾ ಮಾವಿನಕಟ್ಟಿ, ತುಂಗಾ ಶಿರಗುಂಪಿ, ವಿದ್ಯಾರ್ಥಿಗಳು ಇತರರು ಇದ್ದರು.