ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಗಣಿಗಾರಿಕೆ ಸಂಬಂಧ ಫೆ.19ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ತಾಲೂಕಿನ ಹೊಸಕೋಟೆ ಹಾಗೂ ಮೇನಾಗರ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 90 ಲಕ್ಷ ರು. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈ ಯೋಜನೆಯಿಂದ ಮನೆಮನೆಗಳಿಗೆ ಕಾವೇರಿ ನೀರು ಪೂರೈಕೆ ಮಾಡುವುದಕ್ಕೆ ಅನುಕೂಲವಾಗಿದೆ. ಎಲ್ಲ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗಣಿಗಾರಿಕೆ ಕುರಿತು ನಡೆಯುವ ಸಭೆಯಲ್ಲಿ ರೈತಸಂಘ ಮುಖಂಡರು, ಕಾರ್‍ಯಕರ್ತರು ಸೇರಿದಂತೆ ಎಲ್ಲರು ಸೇರಿ ಬೇಬಿಬೆಟ್ಟದ ಭಾಗದಲ್ಲಿ ಕೈಕುಳಿ ಕೆಲಸಗಾರರಿಗೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎನ್ನುವ ಬಗ್ಗೆ ಚರ್ಚಿಸಲಾಗುವುದು ಎಂದರು.8 ಪಂಚಾಯ್ತಿಯ ಜನರು ಗಣಿಗಾರಿಕೆ ವೃತ್ತಿ ಮೇಲೆಯೇ ಆಧಾರಿತವಾಗಿರುವುದಿಂದ ಅದಕ್ಕೆ ನಾವು ಯಾವರೀತಿ ಕ್ರಮವಹಿಸಿ ಆ ಭಾಗದ ಜನರಿಗೆ ಯಾವ ರೀತಿ ನ್ಯಾಯ ಒದಗಿಸಿಕೊಡಬೇಕು ಎನ್ನುವುದನ್ನು ಕುಳಿತು ಚರ್ಚಿಸುತ್ತೇವೆ ಎಂದರು.
ಗಣಿಗಾರಿಕೆಗೆ ರೈತಸಂಘ ವಿರೋಧಿಸುತ್ತಾ ಬಂದಿದೆ. ಆದರೆ, ಕೈಕುಳಿ ಮಾಡುವವರಿಗೆ ನಮ್ಮ ತಂದೆ ಪುಟ್ಟಣ್ಣಯ್ಯ, ಕೆಂಪೂಗೌಡ ಸೇರಿದಂತೆ ಎಲ್ಲರು ಬೆಂಬಲವಾಗಿ ನಿಂತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ ಯೋಜನೆಗಳು ಕ್ಷೇತ್ರಕ್ಕೆ ಮಂಜೂರಾಗಿಲ್ಲದೆ ಇದ್ದರೂ ಜಿಲ್ಲೆಗೆ ಮಂಜೂರಾಗಿರುವ ಕಂದಾಯ, ಕೃಷಿ, ನೀರಾವರಿ ಯೋಜನೆಗಳಲ್ಲಿ ಕ್ಷೇತ್ರವೂ ಸಾಕಷ್ಟು ಅನುದಾನ ಬಂದಿದೆ. ಬಜೆಟ್‌ನಲ್ಲಿ ನೀರಾವರಿ, ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿರುವುದರಿಂದ ನಮಗೂ ಸಾಕಷ್ಟು ಅನುಕೂಲವಾಗಲಿದೆ. ಕೃಷಿಗೆ ಪೂಕರವಾದ ಹಲವು ಯೋಜನೆಗಳಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಎಇಇ ಮಹದೇವಸ್ವಾಮಿ, ಎಇ ಕುಮಾರ್, ರೈತಸಂಘ ಮಹಿಳಾ ಘಟಕದ ಅಧ್ಯಕ್ಷೆ ಕೋಕಿಲಜ್ಞಾನೇಶ್, ಹೊಸಕೋಟೆ ಗ್ರಾಮದ ಮುಖಂಡರಾದ ಸುರೇಶ್, ಡೇರಿ ಅಧ್ಯಕ್ಷ ನಾರಾಯಣಗೌಡ, ರಮೇಶ್, ಕೃಷ್ಣ, ಆನಂದ, ರಾಮಲಿಂಗೇಗೌಡ, ಯ.ನರಸಿಂಹೇಗೌಡ, ನಂದೀಶ್, ನಿಂಗೇಗೌಡ, ಮಂಜುನಾಥ್, ಮೇನಾಗ್ರ ಗ್ರಾಮದ ಮುಖಂಡರಾದ ಗ್ರಾಪಂ ಸದಸ್ಯ ಕುಮಾರ್, ಮಾಜಿ ಸದಸ್ಯ ಜವರೇಗೌಡ, ಕೋಕಿಲ ಜ್ಞಾನೇಶ್, ಚಲುವೇಗೌಡ, ಸತೀಶ್, ಪುನೀತ್, ಜ್ಞಾನೇಶ್, ಕೃಷ್ಣೇಗೌಡ, ಹಳೇಬೀಡು ಕುಮಾರ, ಗುತ್ತಿಗೆದಾರ ಹರ್ಷ ಸೇರಿದಂತೆ ಹಲವರು ಇದ್ದರು.