ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಕೆಗೆ ಉನ್ನತಾಧಿಕಾರಿಗಳ ಸಭೆ

| Published : Dec 13 2023, 01:00 AM IST

ಸಾರಾಂಶ

ಕಾರಂಜಾ ಸಂತ್ರಸ್ತರ ಬೇಡಿಕೆಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಣಿತರ, ಉನ್ನತ ಮಟ್ಟದ ಅಧಿಕಾರಿಗ ಳೊಂದಿಗೆ, ಬೀದರ್‌ ಜಿಲ್ಲೆಯ ಸಚಿವ, ಶಾಸಕರನ್ನೊಳಗೊಂಡು ಸಭೆ ನಡೆಸಿ, ಸಂತ್ರಸ್ತರ ಬೇಡಿಕೆ ಈಡೇರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಭರವಸೆ ನೀಡಿದರು ಎಂದು ಕಾರಂಜಾ ಸಂತ್ರಸ್ತರ ಹೋರಾಟ ಸಮಿತಿ ತಿಳಿಸಿದೆ.

ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಭರವಸೆಸಂತ್ರಸ್ಥರಿಗೆ ವಿಶೇಷ ಪ್ಯಾಕೇಜ್‌ನಲ್ಲಿ ಪರಿಹಾರಕ್ಕೆ ಖಂಡ್ರೆ ಮನವಿ ಕನ್ನಡಪ್ರಭ ವಾರ್ತೆ ಬೀದರ್‌

ಕಾರಂಜಾ ಸಂತ್ರಸ್ತರ ಬೇಡಿಕೆಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಣಿತರ, ಉನ್ನತ ಮಟ್ಟದ ಅಧಿಕಾರಿಗ ಳೊಂದಿಗೆ, ಬೀದರ್‌ ಜಿಲ್ಲೆಯ ಸಚಿವ, ಶಾಸಕರನ್ನೊಳಗೊಂಡು ಸಭೆ ನಡೆಸಿ, ಸಂತ್ರಸ್ತರ ಬೇಡಿಕೆ ಈಡೇರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಭರವಸೆ ನೀಡಿದರು ಎಂದು ಕಾರಂಜಾ ಸಂತ್ರಸ್ತರ ಹೋರಾಟ ಸಮಿತಿ ತಿಳಿಸಿದೆ.ಬೆಳಗಾವಿಯ ಸುವರ್ಣ ಸೌಧದಲ್ಲಿ ಮಂಗಳವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕಾರಂಜಾ ಸಂತ್ರಸ್ತರ ಬೇಡಿಕೆ ಬಗ್ಗೆ ಸಂತ್ರಸ್ತರ ಮುಖಂಡರೊಂದಿಗೆ ಚರ್ಚೆ ನಡೆಸಿ, ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಗಳ ಜೊತೆ ಜಿಲ್ಲೆಯ ಸಚಿವರು, ಶಾಸಕರು ಆದಷ್ಟು ಶೀಘ್ರ ಸಮಾಲೋಚನೆ ನಡೆಸಲು ತಿಳಿಸಿದರು. ಸಭೆಯಲ್ಲಿ ನಿಯೋಗದ ನೇತೃತ್ವ ವಹಿಸಿದ್ದ ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ಮಾತನಾಡಿ, ಕಾರಂಜಾ ನೀರಾವರಿ ಯೋಜನೆಗೆ ಜಮೀನು ಕೊಟ್ಟ ಸಹಸ್ರಾರು ರೈತರ ಕುಟುಂಬಗಳು ನಿರ್ಗತಿಕರಾಗಿ ಮುಂಬೈ, ಪೂನಾ, ಬೆಂಗಳೂರು ಕಡೆ ಗೂಳೆ ಹೋಗಿದ್ದಾರೆ. ಸಂತ್ರಸ್ತರಿಗೆ ಸಮರ್ಪಕ, ವೈಜ್ಞಾನಿಕ ಆಧಾರದದಂತೆ ಪರಿಹಾರ ಸಿಗದ ಕಾರಣ, ನಿರಂತರ ಗುಳೆ ಹೋಗುವುದು ನಡೆದಿದೆ. ಕಾರಂಜಾ ಸಂತ್ರಸ್ತರ ನ್ಯಾಯಯುತ ವಾದ ಬೇಡಿಕೆ ಈಡೇರಿಸಲು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಅತ್ಯಲ್ಪ ಪರಿಹಾರವನ್ನಷ್ಟೇ ನೀಡಲಾಗಿದ್ದು, ನ್ಯಾಯಾಲಯದಲ್ಲಿ ಪ್ರಶ್ನಿಸಿದವರಿಗೆ ಹೆಚ್ಚುವರಿ ಪರಿಹಾರ ನೀಡಲಾಗಿದೆ. ಹೀಗಾಗಿ ಒಂದು ಬಾರಿಯ ಪ್ಯಾಕೇಜ್ ಘೋಷಿಸಿ, ಅನ್ಯಾಯಕ್ಕೆ ಒಳಗಾದ ಅನ್ನದಾತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಸಿದರು.ಕಾರಂಜಾ ಜಲಾಶಯಕ್ಕಾಗಿ 1970ರ ದಶಕದಲ್ಲಿ ಭೂಮಿ ಮತ್ತು ಮನೆ ಕಳೆದುಕೊಂಡಿರುವ ಜನರು ನ್ಯಾಯಕ್ಕಾಗಿ 50 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ತಮ್ಮ ತಾತ, ಮುತ್ತಾನ ಕಾಲದಿಂದ ವಂಶ ಪಾರಂಪರ್ಯವಾಗಿ ಬಂದ ಅತ್ಯಮೂಲ್ಯವಾದ ಮತ್ತು ಬೆಲೆ ಕಟ್ಟಲಾಗದ ಜಮೀನು, ಮನೆಯನ್ನು ಕಳೆದುಕೊಂಡಿದ್ದಾರೆ ಎಂದರು.ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗದ ಅಶಕ್ತ ರೈತರ ಜಮೀನು ನ್ಯಾಯಾಲಯಕ್ಕೆ ಹೋದವರ ಅಕ್ಕಪಕ್ಕದಲ್ಲೇ ಇದ್ದರೂ ಪರಿಹಾರ ಲಭಿಸಿರುವುದು ಅತ್ಯಲ್ಪ. ಹೀಗಾಗಿ ಪರಿಹಾರ ನೀಡಿಕೆಯಲ್ಲಿ ಅವರಿಗೆ ಅನ್ಯಾಯವಾಗಿದೆ. ಸ್ವಾಭಾವಿಕ ನ್ಯಾಯದಡಿಯಲ್ಲಿ ಈ ಅಶಕ್ತ ರೈತರಿಗೂ ಹೆಚ್ಚಿನ ಪರಿಹಾರ ನೀಡುವುದು ನ್ಯಾಯೋಚಿತವಾಗಿದೆ. ಕೋರ್ಟ್‌ ತೀರ್ಪಿನ ಅನ್ವಯ ಗರಿಷ್ಠ ಪರಿಹಾರ ನೀಡಿರುವ ರೀತಿಯಲ್ಲಿಯೇ ಒಂದು ಬಾರಿಯ ವಿಶೇಷ ಪ್ಯಾಕೇಜ್ ಘೋಷಿಸಿ, ಕಾರಂಜಾ ಯೋಜನೆಗಾಗಿ, ಭೂಮಿ, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಕೋರಿದರು.

ಇದಕ್ಕೆ ಜಿಲ್ಲೆಯ ಸಚಿವರಾದ ರಹೀಮ್‌ ಖಾನ್‌ ಸೇರಿದಂತೆ ಶಾಸಕರುಗಳಾದ, ಶೈಲೇಂದ್ರ ಬೆಲ್ದಾಳೆ, ಚಂದ್ರಶೇಖರ್‌ ಪಾಟೀಲ್‌, ಭೀಮರಾವ್‌ ಪಾಟೀಲ್‌, ಅರವಿಂದಕುಮಾರ್‌ ಅರಳಿ, ಶರಣು ಸಲಗರ, ಸಿದ್ದಲಿಂಗ ಪಾಟೀಲ್‌ ಪಕ್ಷಾತೀತವಾಗಿ ಒಮ್ಮತದಿಂದ ಖಂಡ್ರೆ ಅವರ ಧ್ವನಿಗೆ ಧ್ವನಿಗೂಡಿಸಿದರು.

ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್‌ ಅವರು ಮಾತನಾಡಿ, ದೀರ್ಘ ಕಾಲದಿಂದ ನಡೆದಿರುವ ನಮ್ಮ ನ್ಯಾಯಯುತವಾದ ಹೋರಾಟಕ್ಕೆ ಸ್ಪಂದಿಸಿ ನಮಗೆ ಕರೆಯಿಸಿ, ಸಮಸ್ಯೆ ಬಗ್ಗೆ ಚರ್ಚಿಸಿದ್ದಕ್ಕೆ ಅವರು ಸ್ವಾಗತಿಸಿದ ಅವರು, ನಮ್ಮ ಬೇಡಿಕೆಗಳನ್ನು ಆದಷ್ಟು ಶೀಘ್ರವಾಗಿ ಈಡೇರಿಸಲು ಕೋರಿದರು.ಸಭೆಯಲ್ಲಿ ಮುಖಂಡರಾದ ನಾಗಶೆಟ್ಟಿ ಹಂಚೆ, ವಿನಯ ಮಾಳಗೆ, ರೋಹನಕುಮಾರ, ಮಲ್ಲಿಕಾರ್ಜುನ ಬೂಸೋನೋರ, ಮಹೇಶ ಮೂಳಗೆ, ಕೇದಾರನಾಥ ಪಾಟೀಲ, ರಾಜಪ್ಪ ಕಮಲ್ಪೂರ, ವೀರಶೆಟ್ಟಿ ಮೂಲಗೆ, ರಾಮರೆಡ್ಡಿ ಪಾಟೀಲ, ಭೀಮರೆಡ್ಡಿ, ಪ್ರಕಾಶ ಖೇಣಿ, ಈಶ್ವರಯ್ಯ ಸ್ವಾಮಿ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.