ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಪೂರ್ವಭಾವಿ ಸಭೆ ಆಯೋಜಿಸಿದ್ದು, ಅದ್ಧೂರಿ ಹಾಗೂ ಅರ್ಥಪೂರ್ಣ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಗುಡಿಬಂಡೆ ಪ್ರಭಾರಿ ತಹಸೀಲ್ದಾರ್ ರವಿ, ಕನ್ನಡ ಸಾಹಿತ್ಯ ಸಮ್ಮೇಳನ ಎಂಬುದು ಹಬ್ಬವಿದ್ದಂತೆ. ಈ ಕಾರ್ಯಕ್ರಮ ಎಲ್ಲರನ್ನೂ ಜೊತೆಗೂಡಿಸಿಕೊಂಡು ಮಾಡಬೇಕಾದ ಕಾರ್ಯಕ್ರಮವಾಗಿದೆ. ಆದ್ದರಿಂದ ಎಲ್ಲಾ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಜೊತೆಗೆ ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಕಸಾಪ ಆಡಳಿತ ಮಂಡಳಿ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು. ಗಡಿ ಭಾಗದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ತುಂಬಾ ಮುಖ್ಯವಾಗಿದೆ. ಆದ್ದರಿಂದ ಎಲ್ಲರೂ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.
ನಂತರ ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ಗುಡಿಬಂಡೆ ತಾಲೂಕು ಚಿಕ್ಕದಾದರೂ, ಗಡಿ ಭಾಗದಲ್ಲಿದ್ದರೂ ಈ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಈ ಬಾರಿಯೂ ಸಹ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಶೀಘ್ರದಲ್ಲೇ ಸಮ್ಮೇಳನದ ದಿನಾಂಕವನ್ನು ನಿಗದಿಪಡಿಸಿ ತಿಳಿಸಲಾಗುವುದು ಎಂದರು.ಸಾರ್ವಜನಿಕವಾಗಿ ಸಮ್ಮೇಳನಾಧ್ಯಕ್ಷರನ್ನು ಘೋಷಣೆ ಮಾಡಲು ಒತ್ತಾಯ:
ಇನ್ನು ಸಭೆಯಲ್ಲಿ ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಕಸಾಪ ಆಡಳಿತ ಮಂಡಳಿ, ಕನ್ನಡಪರ ಸಂಘಟನೆಗಳು ಸೇರಿ ಇತರೆ ಸಂಘ, ಸಂಸ್ಥೆಗಳ ಸಮ್ಮುಖದಲ್ಲಿ ಆಯ್ಕೆ ಮಾಡಬೇಕು. ಅಧ್ಯಕ್ಷರನ್ನು ಆಯ್ಕೆ ಮಾಡಲು ಯಾವುದೇ ಅರ್ಜಿಗಳನ್ನು ಪಡೆಯಬಾರದು. ಎಲ್ಲರೂ ಆಯ್ಕೆ ಮಾಡುವಂತಹ ಅರ್ಹ ಹಾಗೂ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಒತ್ತಾಯ ಮಾಡಲಾಯಿತು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿರೆಡ್ಡಿ, ಪಪಂ ಮುಖ್ಯಾಧಿಕಾರಿ ಸಭಾ ಶಿರೀನ್, ಶಿಕ್ಷಣ ಇಲಾಖೆಯ ಮುರಳಿ, ರಾಘವೇಂದ್ರ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಸ.ನ.ನಾಗೇಂದ್ರ, ಕಸಪಾ ಪದಾಧಿಕಾರಿಗಳಾದ ವಾಹಿನಿ ಸುರೇಶ್, ರಾಜೇಶ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.