ಹಾವೇರಿ ಹಾಲು ಒಕ್ಕೂಟ ಉಳಿವಿಗಾಗಿ ಸಭೆ 11ರಂದು: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

| Published : Apr 08 2025, 12:31 AM IST

ಹಾವೇರಿ ಹಾಲು ಒಕ್ಕೂಟ ಉಳಿವಿಗಾಗಿ ಸಭೆ 11ರಂದು: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಹೆಚ್ಚು ಉತ್ಪಾದನೆ ಆಗುತ್ತಿರುವ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮುಂಬೈ ಹಾಗೂ ಹುಬ್ಬಳ್ಳಿಯಲ್ಲಿ ಹಾಲು ಮಾರಾಟ ಮಾಡಿ ನಷ್ಟ ತಪ್ಪಿಸಲು ಚಿಂತನೆ ನಡೆಸಲಾಗಿದೆ.

ಹಾವೇರಿ: ನಷ್ಟದಲ್ಲಿರುವ ಹಾವೇರಿ ಹಾಲು ಒಕ್ಕೂಟವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಏ. 11ರಂದು ಬೆಂಗಳೂರಿನಲ್ಲಿ ಕೆಎಂಎಫ್ ಅಧ್ಯಕ್ಷರೊಂದಿಗೆ ಸಭೆ ನಡೆಸಲಾಗುತ್ತಿದೆ. ಒಕ್ಕೂಟ ನಷ್ಟದಿಂದ ಹೊರಬರಬೇಕು, ರೈತರಿಗೂ ಉತ್ತಮ ದರ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಾವೇರಿ ಹಾಲು ಒಕ್ಕೂಟ ನಷ್ಟದಿಂದ ಹೊರಬಂದು, ರೈತರಿಗೆ ಹಾಗೂ ಗ್ರಾಹಕರಿಗೂ ಸಹಕಾರಿಯಾಗಬೇಕು. ಆ ನಿಟ್ಟಿನಲ್ಲಿ ಮಾರ್ಗ ಕಂಡುಕೊಳ್ಳುವ ಕುರಿತು ಹಾವೇರಿ ಹಾಲು ಒಕ್ಕೂಟಕ್ಕೆ ಮಾರ್ಗದರ್ಶನ ಮಾಡಿದ್ದೇನೆ. ಜತೆಗೆ ಹಾವೇರಿ ಹಾಲು ಒಕ್ಕೂಟ ಉಳಿಸುವ ನಿಟ್ಟಿನಲ್ಲಿ ಏ. 11ರಂದು ಬೆಂಗಳೂರಿನಲ್ಲಿ ಕೆಎಂಎಫ್ ಅಧ್ಯಕ್ಷರೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಹೆಚ್ಚು ಉತ್ಪಾದನೆ ಆಗುತ್ತಿರುವ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮುಂಬೈ ಹಾಗೂ ಹುಬ್ಬಳ್ಳಿಯಲ್ಲಿ ಹಾಲು ಮಾರಾಟ ಮಾಡಿ ನಷ್ಟ ತಪ್ಪಿಸಲು ಚಿಂತನೆ ನಡೆಸಲಾಗಿದೆ. ಈ ಹಿಂದಿನ ಆಡಳಿತ ಮಂಡಳಿ ಅಧಿಕಾರವಧಿಯಲ್ಲಿ ₹18 ಕೋಟಿ ರು. ನಷ್ಟವಾಗಿದ್ದು, ನೂತನ ಆಡಳಿತ ಮಂಡಳಿ ಕೂಡ ನಷ್ಟದಲ್ಲಿ ಮುಂದುವರಿಯಬಾರದು ಎಂಬುದು ನನ್ನ ಕಳಕಳಿಯಾಗಿದೆ ಎಂದರು. ಬಿಜೆಪಿ ಜನವಿರೋಧಿ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಯಾವುದೇ ಯಾತ್ರೆ ಮಾಡಲು ಬೇಡ ಅಂದಿಲ್ಲ. ಅದರಲ್ಲಿ ಹುರುಳು ಇದ್ದರೆ ಮಾಡಲಿ. ಕೇಂದ್ರ ಸರ್ಕಾರದಲ್ಲಿ ಬೆಲೆ ಏರಿಕೆ ಆದಾಗ ನಾವು ಪ್ರತಿಭಟನೆ ಮಾಡಿಲ್ಲವೇ, ಅವರು ಮಾಡಲಿ. ಅದರಲ್ಲಿ ತಪ್ಪೇನಿದೆ ಎಂದರು. ಜಿಲ್ಲೆಯ ಅಕ್ರಮ ಮಣ್ಣು ಗಣಿಗಾರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಬಜೆಟ್‌ನಲ್ಲಿ ಘೋಷಿಸಿದ್ದ ಜವಳಿ ಪಾರ್ಕ್‌ ಸ್ಥಾಪನೆ ಇಲ್ಲ: ಸಚಿವ ಶಿವಾನಂದ ಪಾಟೀಲ

ರಾಣಿಬೆನ್ನೂರು: ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ತಾಲೂಕಿಗೆ ಘೋಷಣೆಯಾಗಿದ್ದ ಜವಳಿ ಪಾರ್ಕ್‌ ಅನ್ನು ಸರ್ಕಾರ ಸ್ಥಾಪಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಳಿ ಪಾರ್ಕ್‌ ಅನ್ನು ಪಿಪಿಪಿ (ಖಾಸಗಿ, ಸರ್ಕಾರಿ ಸಹಭಾಗಿತ್ವ) ಮಾದರಿಯಲ್ಲಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಜವಳಿ ಪಾರ್ಕ್ ಸ್ಥಾಪನೆಗೆ ಹೂಡಿಕೆ ಮಾಡಲು ಖಾಸಗಿಯವರು ಯಾರೂ ಮುಂದೆ ಬಾರದಿರುವ ಹಿನ್ನೆಲೆ ಹಾಗೂ ಅದನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿರುವುದರಿಂದ ಸರ್ಕಾರ ಸ್ಥಾಪನೆ ಮಾಡುವುದಿಲ್ಲ ಎಂದರು.

ಹಾವೇರಿ ಹಾಲು ಮುಂಬೈಗೆ: ಹಾವೆಮುಲ್‌ನಲ್ಲಿ ಉತ್ಪಾದನೆಯಾಗುವ ಹಾಲನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಲು ಪ್ರಯತ್ನಿಸಲಾಗುತ್ತಿದೆ. ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಸಚಿವರ ಜತೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಚರ್ಚೆ ನಡೆಸಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಡಸ, ಆಣೂರು, ಹಂಸಭಾವಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ 540 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗುತ್ತದೆ. ಶೀಘ್ರದಲ್ಲಿಯೇ ಆಣೂರು ಯೋಜನೆ ಪ್ರಾರಂಭಿಸಲಾಗುತ್ತಿದ್ದು, ನೀರು ಪಂಪ್ ಮಾಡುವ ಪ್ರಕ್ರಿಯೆ ಅನುಷ್ಠಾನಗೊಳ್ಳಲಿದೆ ಎಂದರು.

ಶಾಸಕ ಪ್ರಕಾಶ ಕೋಳಿವಾಡ, ಹಾವೆಮುಲ್ ಅಧ್ಯಕ್ಷ ಎಂ.ಎಚ್. ಪಾಟೀಲ, ಜಿಲ್ಲಾಧಿಕಾರಿ ಡಾ. ವಿಜಯಕುಮಾರ ದಾನಮ್ಮನವರ, ಎಸ್‌ಪಿ ಅಂಶುಕುಮಾರ ಸುದ್ದಿಗೋಷ್ಠಿಯಲ್ಲಿದ್ದರು.