ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯುಕೆಪಿ ಸಂತ್ರಸ್ತರ ಕುರಿತು ಚರ್ಚೆ ನಡೆಸಲು ಸಿಎಂ ಅಧ್ಯಕ್ಷತೆಯಲ್ಲಿ ನೀರಾವರಿ ಸಚಿವರು ಹಾಗೂ ಬಾಗಲಕೋಟೆ-ವಿಜಯಪುರ ಎರಡು ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳ ಸಭೆಯನ್ನು ಡಿ.11ರಂದು ಸಂಜೆ 4ಕ್ಕೆ ಬೆಳಗಾವಿಯ ಸುವರ್ಣಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾಹಿತಿ ನೀಡಿದರು.ಇಲ್ಲಿನ ಜಿಲ್ಲಾಡಳಿತದ ಎದುರು ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 6ನೇ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೋರಾಟದಲ್ಲಿ ನಾನೊಂದು ಹೇಳುವುದು ನಂತರ ಸಭೆಯಲ್ಲಿ ಸಿಎಂ ಮತ್ತೊಂದು ಹೇಳುವುದು ಬೇಡ. ಆ ಸಭೆಯಲ್ಲಿ ಹೋರಾಟ ಸಮಿತಿ ಮುಖಂಡರು ಪಾಲ್ಗೊಳ್ಳಿ. ಸಿಎಂ ಎದುರೇ ಮಾತುಕತೆ ಮಾಡೋಣ ಎಂದು ಮನವಿ ಮಾಡಿದರು.
ಇಲ್ಲಿಯವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳಿಂದ ತಪ್ಪಾಗಿರುವ ಕಾರಣ ಇಂದು ಸಂತ್ರಸ್ತರು ಹೋರಾಟ ಪ್ರಾರಂಭಿಸಿದ್ದಾರೆ. ನಾನು ಸರ್ಕಾರದ ಒಂದು ಭಾಗವಾಗಿರಬಹುದು. ಆದರೆ, ಮೊದಲು ನಾನು ಸಂತ್ರಸ್ತರ ಜಿಲ್ಲೆಯವನು. ನಾನು ಸದಾ ಸಂತ್ರಸ್ತರೊಂದಿಗೆ ಇರುತ್ತೇನೆ. ಜತೆಗೆ ಸರ್ಕಾರದ ಭಾಗವಾಗಿ ನಾನು ಕೆಲಸ ಮಾಡಬೇಕಾಗುತ್ತದೆ. ಕಾರಣ ನಾನು ಸದ್ಯ ಏನನ್ನೂ ಹೇಳುವುದಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಹೋರಾಟದ ಹಾಗೂ ನಿಮ್ಮ ಬೇಡಿಕೆ ಬಗ್ಗೆ ಮಾಹಿತಿ ನೀಡಿದ್ದೇನೆ. ಡಿ.11ರಂದು ಸಹ ಎಲ್ಲರೂ ಸೇರಿ ನಮ್ಮ ಸಮಸ್ಯೆಯನ್ನು ಸಿಎಂ ಹಾಗೂ ನೀರಾವರಿ ಸಚಿವರ ಎದುರು ಹೇಳೋಣ ಎಂದರು.ಅಧಿಕಾರ ಇಲ್ಲದಿದ್ದಾಗ ನಾನು ಎಕರೆಗೆ ಅಷ್ಟು ಕೊಡಿ, ಇಷ್ಟು ಕೊಡಿ ಎಂದಿದ್ದೇನೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಆ ರೀತಿ ಹೇಳಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಚರ್ಚೆಯಾಗಬೇಕೆಂದು ಸಭಾಪತಿಗಳಿಗೆ ಮನವಿ ಮಾಡಿದ್ದೇನೆ. ಡಿ.11ರಂದು ಸಭೆ ಕರೆದಿದ್ದಾರೆ. ಸಭೆ ವಿಜಯಪುರ ಹಾಗೂ ಬಾಗಲಕೋಟೆ ಶಾಸಕರು ಹಾಗೂ ವಿಪ ಸದಸ್ಯರಿಗೆ ಮಾತ್ರ ಅವಕಾಶವಿದೆ. ಆದರೆ, ಸರ್ಕಾರ 7 ಜಿಲ್ಲೆಯ ಶಾಸಕರ ಸಭೆ ಕರೆಯಬೇಕಿತ್ತು. ಏನೇ ಇರಲಿ ಸರ್ಕಾರ ಇನ್ನಾದರೂ ಯುಕೆಪಿ ಪೂರ್ಣಗೊಳಿಸುವ ಬಗ್ಗೆ ಕಾಲಹರಣ ಮಾಡುವುದನ್ನು ಬಿಟ್ಟು ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿ, ಉತ್ತರ ಕರ್ನಾಟಕದವರಿಗೆ ಮಲತಾಯಿ ಧೋರಣೆ ಮುಂದುವರೆದಿದೆ. ಉತ್ತರ ಕರ್ನಾಟಕದ ಹೋರಾಟಕ್ಕೆ ಯಾವುದೇ ರೀತಿ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ನಮ್ಮ ಭಾಗದ ಎಲ್ಲ ಶಾಸಕರು ಸದನದಲ್ಲಿ ಇದರ ಬಗ್ಗೆ ಮಾತನಾಡಬೇಕು. ಇಡೀ ಏಷ್ಯಾದಲ್ಲಿ ಹೆಚ್ಚು ಮುಳಗಡೆಯಾದ ನಗರ ಎಂದರೆ ಬಾಗಲಕೋಟೆ. ಬಿಟಿಡಿಎಯಲ್ಲಿದ್ದ ಕಾರ್ಪಸ್ ಫಂಡ್‌ನ್ನು ಸರ್ಕಾರ ತೆಗೆದುಕೊಂಡಿದ್ದು ಅದನ್ನು ವಾಪಸ ನೀಡಬೇಕು ಎಂದು ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಬಾಗಲಕೋಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವಿ ಕುಮಟಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಪ್ರಕಾಶ ಅಂತರಗೊಂಡ, ಅಶೋಕ ಲಾಗಲೋಟಿ, ಸಿಂಗ್ ಗೋಡಿ, ನಿಂಗಪ್ಪ ಚೌವ್ಹಾಣ ಸೇರಿದಂತೆ ಇತರರಿದ್ದರು.ಹೋರಾಟಕ್ಕೆ 150 ಮಠಾಧೀಶರ ಸಾಥ್ ಇಂದು
ಬಾಗಲಕೋಟೆ ಜಿಲ್ಲಾಡಳಿತದ ಎದುರು ಹಮ್ಮಿಕೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯ 7ನೇ ದಿನವಾದ ಸೋಮವಾರ ಚರಂತಿಮಠದ ಪ್ರಭು ಸ್ವಾಮೀಜಿ, ಗದಗದ ತೋಂಟದಾರ್ಯ ಸ್ವಾಮೀಜಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಒಟ್ಟು 150 ವಿವಿಧ ಮಠಾಧೀಶರು ನಮ್ಮ ಹೋರಾಟದಲ್ಲಿ ಪಾಲ್ಗೊಂಡು ಸಂತ್ರಸ್ತರ ಹೋರಾಟಕ್ಕೆ ಬೆಂಬಲ ನೀಡಿ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸರ್ಕಾರ ಒತ್ತಾಯಿಸಲಿದ್ದಾರೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಮಾಹಿತಿ ನೀಡಿದರು.ಲಕ್ಷ ರು. ದೇಣಿಗೆ ನೀಡಿದ ಡಾ.ಆರ್.ಟಿ.ಪಾಟೀಲ
ರೈತರು ಜಿಲ್ಲಾಡಳಿತದ ಎದುರು ಚಕ್ಕಡಿ ಬಂಡಿ ಕಟ್ಟಿ ಪ್ರತಿಭಟನೆ ನಡೆಸಿದರು. ಸಂತ್ರಸ್ತರ ಹೋರಾಟ ಬೆಂಬಲಿಸಿ ವಿಜಯಪುರ ವಕೀಲ ಸಂಘದ ಅಧ್ಯಕ್ಷ ಹಾಗೂ ಸದಸ್ಯರು ಮತ್ತು ಬಾಗಲಕೋಟೆ ವರ್ತಕರ ಸಂಘದಿಂದ ವೇದಿಕೆಗೆ ಬಂದು ಬೆಂಬಲ ಸೂಚಿಸಿದರು. ನವನಗರ ಶಾಂತಿ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾದಯಾತ್ರೆ ಮೂಲಕ ನಡೆಸಿ ಬೆಂಬಲಿಸಿದರು. ಜತೆಗೆ ಶಾಂತಿ ಆಸ್ಪತ್ರೆ ಮುಖ್ಯಸ್ಥ ಡಾ. ಆರ್.ಟಿ.ಪಾಟೀಲ ಹೋರಾಟಕ್ಕೆ ನೆರವಾಗುವ ದೃಷ್ಟಿಯಿಂದ 1 ಲಕ್ಷ ರು. ದೇಣಿಗೆಯನ್ನು ಸಮಿತಿಗೆ ನೀಡಿದರು.ನಾನು ಹೋರಾಟದ ವೇದಿಕೆಗೆ ರಾಜಕೀಯ ಮಾತನಾಡಲು ಬಂದಿಲ್ಲ. ರಾಜಕೀಯ ಮಾತನಾಡಬೇಕಾದರೇ ಮಾಧ್ಯಮಗಳ ಎದುರು ಮಾತನಾಡುವೆ. ಹೋರಾಟದ ಭಾಗವಾಗಿ ನಾನು ಬಂದಿದ್ದೇನೆ. ನಿಮ್ಮ ಬೇಡಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಲಾಗಿದೆ. ಸಂತ್ರಸ್ತರ ಕುರಿತು ಚರ್ಚೆ ನಡೆಸಲು ಸಿಎಂ ಅಧ್ಯಕ್ಷತೆಯಲ್ಲಿ ಎರಡು ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳ ಸಭೆ ಡಿ.11ರಂದು ಸಂಜೆ 4ಕ್ಕೆ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಲಿದೆ.
ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಸಚಿವ