ಸಾರಾಂಶ
ಹುಬ್ಬಳ್ಳಿ: ಉಣಕಲ್‌ನಲ್ಲಿರುವ ಪುರಾತನ ಕಾಲದ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ₹25 ಕೋಟಿಯ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಮಂಗಳವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನವನ್ನು ಮೇಲ್ದರ್ಜೆಗೇರಿಸಿ ಕಾರಿಡಾರ್ ಮಾಡುವ ಕುರಿತು ಮಹತ್ವದ ಚರ್ಚೆ ಮಾಡಲಾಯಿತು.ಶಾಸಕ ಟೆಂಗಿನಕಾಯಿ ಮಾತನಾಡಿ, ಪುರಾತನ ತತ್ವ ಇಲಾಖೆಯವರು ದೇವಸ್ಥಾನವನ್ನು ಕಾರಿಡಾರ್ ಮಾಡುವ ನಿಟ್ಟಿನಲ್ಲಿ ಶೀಘ್ರ ಎನ್‌ಒಸಿ ನೀಡಬೇಕು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಪುರಾತನ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದೇವಸ್ಥಾನದ ಸೌಂದರ್ಯೀಕರಣಕ್ಕೆ ₹25 ಕೋಟಿ ನೀಡಬೇಕೆಂದು ಜಂಟಿ ಸಮೀಕ್ಷೆ ನಂತರ ಬೆಂಗಳೂರಿನ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಕಳುಹಿಸಲು ತಿರ್ಮಾನಿಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಹುಬ್ಬಳ್ಳಿಯ ವಿಶ್ವೇಶ್ವರನಗರದ ರಕ್ಷಣಾ ಇಲಾಖೆಗೆ ಸಂಬಂಧಪಟ್ಟಿರುವ 7 ಎಕರೆ ಭೂಮಿಗೆ ಬದಲಾಗಿ ಬೊಮ್ಮಸಂದ್ರದಲ್ಲಿ 33 ಎಕರೆ ಭೂಮಿಯನ್ನು ರಕ್ಷಣಾ ಇಲಾಖೆಗೆ ನೀಡುವ ಕುರಿತು ಇದೇ ಜು. 31ರಂದು ಬೆಂಗಳೂರಿನಲ್ಲಿ ಶಾಸಕ ಟೆಂಗಿನಕಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ರಕ್ಷಣಾ ಇಲಾಖೆಯ ಅಧಿಕಾರಿಗಳು, ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಲಾಯಿತು.ಸಾಯಿನಗರ ಸಿಸಿ ರಸ್ತೆ: ಉಣಕಲ್‌ನ ಸಾಯಿ ನಗರದ 300 ಮೀಟರ್ ಬಾಕಿ ರಸ್ತೆಯ ಕಾಮಗಾರಿ ಮತ್ತು ಭೂಸ್ವಾಧೀನಪಡಿಸಿಕೊಂಡ ಫಲಾನುಭವಿಗಳಿಗೆ ಪರಿಹಾರ ವಿತರಿಸಿ ಶೀಘ್ರ ರಸ್ತೆ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಶಾಸಕರು ಸೂಚಿಸಿದರು.
ಬೀದಿ ದೀಪ: ನಮ್ಮ ಕ್ಷೇತ್ರ ಹುಬ್ಬಳ್ಳಿಗೆ ಸಂಬಂಧಪಟ್ಟಂತೆ ಬೀದಿ ದೀಪಗಳ ಕುರಿತಂತೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಪಾಲಿಕೆ ಆಯುಕ್ತರು ಗಮನಹರಿಸಬೇಕೆಂದು ಸೂಚಿಸಿದರು.ಸಭೆಯಲ್ಲಿ ಎಸಿ ಶಾಲಂಹುಸೇನ್, ಪುರಾತನ ತತ್ವ ಇಲಾಖೆ ಆಯುಕ್ತ ರಮೇಶ್ ಮೂಲಿಮನಿ, ಪಾಲಿಕೆ ಸದಸ್ಯರಾದ ಉಮೇಶ್ ಗೌಡ ಕೌಜಗೇರಿ, ಬೀರಪ್ಪ ಖಂಡೇಕರ್, ರವಿ ನಾಯಕ ವಿವಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.