ದೇಗುಲ ರಕ್ಷಣೆ, ಧಾರ್ಮಿಕ ಶಿಕ್ಷಣ ಬಗ್ಗೆ ಸಭೆ: ಹಿಂದೂ ಜಾಗೃತಿ ಸಮಿತಿಯ ಗುರುಪ್ರಸಾದ ಗೌಡ

| Published : Feb 08 2025, 12:34 AM IST

ದೇಗುಲ ರಕ್ಷಣೆ, ಧಾರ್ಮಿಕ ಶಿಕ್ಷಣ ಬಗ್ಗೆ ಸಭೆ: ಹಿಂದೂ ಜಾಗೃತಿ ಸಮಿತಿಯ ಗುರುಪ್ರಸಾದ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಅನಾದಿಯಿಂದಲೂ ಇರುವ ದೇವಸ್ಥಾನಗಳ ಸಂರಕ್ಷಣೆಗಾಗಿ ದೇವಸ್ಥಾನಗಳ ವ್ಯಾಪಕ ಸಂಘಟನೆಯನ್ನು ರಾಜ್ಯವ್ಯಾಪಿ ಕರ್ನಾಟಕ ಮಂದಿರ ಮಹಾಸಂಘ ಮಾಡುತ್ತಿದ್ದು, ದೇವಸ್ಥಾನಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವುದು ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಫೆ.9ರಂದು ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ಹಮ್ಮಿಕೊಳ್ಳಲಾಗಿದೆ

ನಾಳೆ ದಾವಣಗೆರೆ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ । ಅನೇ ವಿಷಯ ಚರ್ಚೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅನಾದಿಯಿಂದಲೂ ಇರುವ ದೇವಸ್ಥಾನಗಳ ಸಂರಕ್ಷಣೆಗಾಗಿ ದೇವಸ್ಥಾನಗಳ ವ್ಯಾಪಕ ಸಂಘಟನೆಯನ್ನು ರಾಜ್ಯವ್ಯಾಪಿ ಕರ್ನಾಟಕ ಮಂದಿರ ಮಹಾಸಂಘ ಮಾಡುತ್ತಿದ್ದು, ದೇವಸ್ಥಾನಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವುದು ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಫೆ.9ರಂದು ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿ ಸಮನ್ವಯಕ ಗುರುಪ್ರಸಾದ ಗೌಡ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ಕ್ಕೆ ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಧರ್ಮದರ್ಶಿ ಬಿ.ಸಿ.ಉಮಾಪತಿ, ಮಲೆಬೆನ್ನೂರಿನ ಬಿ.ಚಿದಾನಂದಪ್ಪ, ಗುರುಪ್ರಸಾದ ಗೌಡ ಸೇರಿದಂತೆ ಅನೇಕರು ಭಾಗವಹಿಸಲಿದ್ದು, ಉದ್ಘಾಟನೆ ನಂತರ ಅನೇಕ ಗೋಷ್ಠಿಗಳು, ಚರ್ಚೆಗಳು, ದೇವಸ್ಥಾನಗಳ ಸಂರಕ್ಷಣೆ, ಧರ್ಮ ಸಂರಕ್ಷಣೆ ಬಗ್ಗೆ ಚರ್ಚೆ ನಡೆಯಲಿವೆ ಎಂದರು.

ದೇವಸ್ಥಾನಗಳಲ್ಲಿ ಸಾಮೂಹಿಕ ಆರತಿ, ವಸ್ತ್ರ ಸಂಹಿತೆ ಜಾರಿ, ದೇವಸ್ಥಾನಗಳ ಮೇಲಾಗುವ ಅನ್ಯಾಯ ತಡೆಯುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು. ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಕೆಲ ತಾಲೂಕುಗಳಿಂದ ಸುಮಾರು 300ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು ಹಾಗೂ ಪುರೋಹಿತರು ಅಧಿವೇಶನದಲ್ಲಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.

ದೇವಸ್ಥಾನಗಳನ್ನು ಸರ್ಕಾರದ ವಶದಿಂದ ಸಮಿತಿಗಳು, ಭಕ್ತರ ವಶಕ್ಕೆ ನೀಡಬೇಕು ಎಂಬುದೂ ಸೇರಿದಂತೆ ದೇವಸ್ಥಾನಗಳ ಮೂಲಕ ವ್ಯಾಪಕ ಧರ್ಮ ಪ್ರಚಾರ ಮಾಡುವುದು ಹೇಗೆಂಬ ಬಗ್ಗೆ, ದೇವಸ್ಥಾನಗಳ ಸಂಘಟನೆ ಅವಶ್ಯಕತೆ, ಆದರ್ಶ ವ್ಯವಸ್ಥಾಪನೆ, ದೇವಸ್ಥಾನಗಳಿಗೆ ಬರುವ ಕಾನೂನು ಅಡಚಣೆಗಳಿಗೆ ವಕೀಲರಿಂದ ಸೂಕ್ತ ಕಾನೂನು ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

ನಮ್ಮ ದೇವಸ್ಥಾನಗಳೇ ಸನಾತನ ಹಿಂದೂ ಧರ್ಮದ ಆದಾರ ಸ್ತಂಭಗಳಾಗಿದ್ದವು. ಆದರೆ, ಪಾಶ್ಚಿಮಾತ್ಯ ಶಿಕ್ಷಣ ಮತ್ತು ಜಾತ್ಯತೀತ ವ್ಯವಸ್ಥೆಯ ಹೆಸರಿನಲ್ಲಿ ನಮ್ಮ ದೇವಸ್ಥಾನಗಳ ಸ್ಥಾಪನೆಯ ಮೂಲ ಉದ್ದೇಶವೇ ಅರ್ಥವನ್ನು ಕಳೆದುಕೊಳ್ಳಲಾರಂಭಿಸಿತು. ದೇವಸ್ಥಾನಗಳನ್ನು ಪ್ರವಾಸಿ ತಾಣಗಳಾಗಿ ಮಾಡುವ ಮೂಲಕ ಹಿಂದು ಧರ್ಮದ ಮೂಲ ಆದಾರ ಸ್ತಂಭಗಳನ್ನೇ ನಾಶಪಡಿಸುವ ಷಡ್ಯಂತ್ರ ಆರಂಭವಾಯಿತು ಎಂದು ದೂರಿದರು.

ಹಿಂದೂ ದೇವಸ್ಥಾನಗಳನ್ನು ಸರಂಕ್ಷಣೆ ಮಾಡುವ ಉದ್ದೇಶದಿಂದ ಹಿಂದು ಜನ ಜಾಗೃತಿ ಸಮಿತಿಯು 2016ರಂದು ಮಂದಿರ ಮಹಾಸಂಘ ಸ್ಥಾಪಿಸಿದ್ದು, ಈ ಮಹಾ ಸಂಘದ ಮೂಲಕ 9 ವರ್ಷದಿಂದ ನಿರಂತರ ದೇವಸ್ಥಾನಗಳ ಸಂರಕ್ಷಣೆ ದೃಷ್ಟಿಯಿಂದ ಅನೇಕ ಯಶಸ್ವಿ ಅಭಿಯಾನ ನಡೆಸಲಾಗುತ್ತಿದೆ. ಕಳೆದ 2 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ದೇವಸ್ಥಾನ ವಿಶ್ವಸ್ಥರು, ಪುರೋಹಿತರು ಮತ್ತು ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವಕೀಲರನ್ನು ಸೇರಿಸಿ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಮಂದಿರ ಅಧಿವೇಶನ ನಡೆಸಲಾಗುತ್ತಿದೆ ಎಂದರು.

ಮಹಾ ಸಂಘದ ಎನ್.ಮಲ್ಲೇಶ್, ಆರ್.ಜಿ.ನಾಗೇಂದ್ರ ಪ್ರಸಾದ, ಸೋಮಶೇಖರ, ಸುರೇಶ, ಮುತ್ತುವೇಲು ಇತರರು ಇದ್ದರು.