ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಆರೇಳು ದಶಕಗಳಿಂದ ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸರಕಾರದ ಮಟ್ಟದಲ್ಲಿ ಸಭೆ ನಡೆಸಿ ರೈತರ ಪರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ಕಡೂರು ಪಟ್ಟಣದಲ್ಲಿ ಮಂಗಳವಾರ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಜಿಲ್ಲಾ ಮಟ್ಟದ 5ನೇ ಜನಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಜನರ ಅಹವಾಲುಗಳನ್ನು ಆಲಿಸಿ ಮಾತನಾಡಿದರು. ಸಲ್ಲಿಕೆ ಆಗಿರುವ ಬಹುತೇಕ ಅರ್ಜಿಗಳಲ್ಲಿ ರೈತರಿಗೆ ಸಂಭಂದಿಸಿದ್ದು, ಬಹಳಷ್ಟು ವರ್ಷಗಳಿಂದ ಕಡೂರು ತಾಲೂಕು ಸೇರಿದಂತೆ ವಿವಿಧ ತಾಲೂಕುಗಳಲ್ಲೂ ರೈತರು ಬಹಳ ವರ್ಷದಿಂದ ಉಳುಮೆ ಮಾಡುತಿದ್ದರೂ ಕೂಡ ಸಾಗುವಳಿ ಚೀಟಿ ನೀಡಲು ಕಾನೂನಿನ ತೊಡಕಿನಿಂದಾಗಿ ಸಾಧ್ಯವಾಗುತ್ತಿಲ್ಲ ಎಂಬ ಕೂಗು ಇದೆ. ರಾಜ್ಯದ ಎಲ್ಲೆಡೆ ಇರುವ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಕಟಾರಿಯರವರು ಮತ್ತು ನಾನು ಮುಖ್ಯಮಂತ್ರಿ ಜೊತೆ ಸಭೆ ನಡೆಸಿ ಚರ್ಚಿಸುತ್ತೇನೆ ಎಂದರು.
ಜನಸೇವಕರಾದ ನಾವು ಹಿಂದುಳಿದ ಮತ್ತು ಅಶಕ್ತ ಜನರ ಪರವಾಗಿ ಕೆಲಸ ಮಾಡಿ ಮಾನವೀಯತೆಯಿಂದ ವರ್ತಿಸಬೇಕು. ಅವರಿಗೆ ಶಕ್ತಿ ಕೊಡುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ. ಜನರ ನೋವನ್ನು ನೋಡಿ ನಮಗೆ ತಡೆದುಕೊಳ್ಳಲು ಆಗುವುದಿಲ್ಲ. ಶಾಸಕರಾದ ಆನಂದ್ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾವು 6 ಬಾರಿ ಶಾಸಕರಾಗಿ 1989ರಲ್ಲಿ ಮಂತ್ರಿಯಾಗಿ ಜನರ ಸಂಕಷ್ಟದ ಅರಿವು ತಮಗಿದೆ ಎಂದರು.ಇನ್ಸ್‌ಪೆಕ್ಟರ್ ಗಣಪತಿ ವಿಷಯದಲ್ಲಿ ನನ್ನ ಮೇಲೆ ಆರೋಪ ಬಂದಾಗ ನಾನು ರಾಜೀನಾಮೆ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಆರೋಪಗಳು ಬರುವುದು ಸಹಜ. ಎದುರಿಸಲು ಸಿದ್ಧರಾಗಬೇಕು. ಇಲ್ಲಿಯ ಅಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು.
ಶಾಸಕ ಕೆ.ಎಸ್.ಆನಂದ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹು ಮುಖ್ಯವಾಗಿ ಕ್ಷೇತ್ರದ ಎಮ್ಮೆದೊಡ್ಡಿ ಭಾಗದಲ್ಲಿ ಸುಮಾರು 70 ವರ್ಷದಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಸರ್ವೆ ನಂ.70-72 ರಲ್ಲಿ ಸಾಗುವಳಿ ಚೀಟಿ ನೀಡಿಲ್ಲ. ಇದರಿಂದ ಬಡ ರೈತರಿಗೆ ಜೀವನ ನಡೆಸಲು ಕಷ್ಟವಾಗುತ್ತಿದ್ದು ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಸರಕಾರವು ಕ್ರಮ ವಹಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.ಸಭೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಕೀರ್ತನಾ, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಂ ಆಮಟೆ, ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಸಿ.ಆರ್ ಪ್ರವೀಣ್, ಮಾಲತಿ, ಪುರಸಭಾದ್ಯಕ್ಷ ಭಂಡಾರಿ ಶ್ರೀನಿವಾಸ್, ಅನಿತಾ ಮಧು, ಗ್ಯಾರಂಟಿ ಅನುಷ್ಟಾನ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಆಸಂದಿ ಕಲ್ಲೇಶ್, ಜಿ.ಅಶೋಕ್ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.