ರಾಜ್ಯದಲ್ಲಿ 80 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿದ್ದು, ಅನಾರೋಗ್ಯ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಸಂವಿಧಾನದ 21ನೇ ಕಲಂನಲ್ಲಿ ಹಿರಿಯ ನಾಗರಿಕರು ಬದುಕುವ ಹಕ್ಕು ಇದೆ.

ಹುಬ್ಬಳ್ಳಿ:

ವೃದ್ಧಾಪ್ಯ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ರಾಜ್ಯ ಪ್ರಶಸ್ತಿ ಪುರಸ್ಕೃತ ರೈತ ಮುಖಂಡ ಡಿ.ಟಿ. ಪಾಟೀಲ ನೇತೃತ್ವದಲ್ಲಿ ನಗರದ ನೆಹರು ಮೈದಾನದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿಯು ಅಜಂತಾ ಹೊಟೇಲ್‌, ಸ್ಟೇಶನ್‌ ರಸ್ತೆ, ಬಿ.ಆರ್‌. ಅಂಬೇಡ್ಕರ್‌ ಸರ್ಕಲ್‌ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ವರೆಗೆ ಆಗಮಿಸಿ ಸಮಾವೇಶಗೊಂಡಿತು.

ಈ ವೇಳೆ ಹಿರಿಯ ನಾಗರಿಕರ ಸಂಘದ ಮುಖಂಡರು ಮಾತನಾಡಿ, ರಾಜ್ಯದಲ್ಲಿ 80 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿದ್ದು, ಅನಾರೋಗ್ಯ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಸಂವಿಧಾನದ 21ನೇ ಕಲಂನಲ್ಲಿ ಹಿರಿಯ ನಾಗರಿಕರು ಬದುಕುವ ಹಕ್ಕು ಇದೆ. ಆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಸಂಘದ ವತಿಯಿಂದ ಬೆಳಗಾವಿ ಸುವರ್ಣಸೌಧದ ಎದುರು ಅಧಿವೇಶನದ ವೇಳೆ ನಿರಂತರ ಧರಣಿ ಸತ್ಯಾಗ್ರಹ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ. ಮುಂಬರುವ ಚುನಾವಣೆಯಲ್ಲಿ ಯಾರು ನಮ್ಮ ಬೇಡಿಕೆ ಈಡೇರಿಸುತ್ತಾರೋ ಅವರಿಗೆ ಮಾತ್ರ ನಮ್ಮ ಮತ ನೀಡುತ್ತೇವೆ ಎಂದು ಎಚ್ಚರಿಸಿದರು.

ಬೇಡಿಕೆಗಳು:

ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು. ಸಂವಿಧಾನ ಬದ್ಧ ದೇಶವ್ಯಾಪಿ ವೃದ್ಧಾಪ್ಯ ವೇತನ ಹಾಗೂ ಎಲ್ಲ ಸೌಲಭ್ಯ ನೀಡಬೇಕು. ಕೇಂದ್ರ ಹಾಗೂ ರಾಜ್ಯಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಚಿವಾಲಯ ಹಾಗೂ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು. ಬಿಪಿಎಲ್‌ ಕಾರ್ಡ್‌ ಹೊಂದಿದ ಹಿರಿಯ ನಾಗರಿಕರಿಗೆ ಮಾಸಿಕ ₹5 ಸಾವಿರ ವೃದ್ಧಾಪ್ಯ ವೇತನ, ಕೇಂದ್ರದಿಂದ ₹10 ಸಾವಿರ ಮಾಸಿಕ ವೃದ್ಧಾಪ್ಯ ವೇತನ, ಪುರುಷ ಹಿರಿಯ ನಾಗರಿಕರಿಗೆ ಉಚಿತ ಬಸ್‌ಪಾಸ್‌ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಲಾಯಿತು.

ಈ ವೇಳೆ ಹುಬ್ಬಳ್ಳಿ ಎರಡೆತ್ತಿನ ಮಠದ ಶ್ರೀ, ಎಂ.ಪಿ. ಕಂಬಾರ, ಮಹಿಳಾ ಅಧ್ಯಕ್ಷೆ ಸುನಂದಾ ಬೆನ್ನೂರ, ಪ್ರಕಾಶ ಕವಟೆ, ಮಹಾಂತೇಶ ಡಿ, ಕರಿಯಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.