ಸಾರಾಂಶ
ಚಾಮನಳ್ಳಿ ಮೂಲ ಗ್ರಾಮದಿಂದ ದಾಖಲೆ ರಹಿತ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮವಾಗಿ ಬೇರ್ಪಡಿಸುವ ನೂತನ ಕಂದಾಯ ಗ್ರಾಮಕ್ಕೆ ಹೆಸರು ಅಂತಿಮಗೊಳಿಸುವ ಸಭೆಗೆ ಗ್ರಾಮಸ್ಥರು ಹಾಜರಾಗಲು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರು ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ಚಾಮನಳ್ಳಿ ಮೂಲ ಗ್ರಾಮದಿಂದ ದಾಖಲೆ ರಹಿತ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮವಾಗಿ ಬೇರ್ಪಡಿಸುವ ನೂತನ ಕಂದಾಯ ಗ್ರಾಮಕ್ಕೆ ಹೆಸರು ಅಂತಿಮಗೊಳಿಸುವ ಸಭೆಗೆ ಗ್ರಾಮಸ್ಥರು ಹಾಜರಾಗಲು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರು ಮನವಿ ಮಾಡಿದ್ದಾರೆ.ಈ ಸಭೆಯನ್ನು ಜೂ.29 ರಂದು 11 ಗಂಟೆಗೆ ಚಾಮನಳ್ಳಿ ತಾಂಡಾದ ಗೌಠಾಣಿಯಲ್ಲಿ ನಿಗದಿ ಪಡಿಸಲಾಗಿದ್ದು, ಸ್ಥಳೀಯರು, ಗ್ರಾಮಸ್ಥರು ಹಾಗೂ ನೂತನ ಕಂದಾಯ ಗ್ರಾಮಕ್ಕೆ ಹೆಸರು ಅಂತಿಮಗೊಳಿಸುವ ಕುರಿತು ನಿರ್ಧರಿಸುವ ಆಸಕ್ತಿವುಳ್ಳವರು ತಪ್ಪದೆ ಸಭೆಗೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.
ಸದರಿ ಪ್ರದೇಶಕ್ಕೆ ಸೇರಿದ ಖಾಸಗಿ ಜಮೀನಿನ ಗ್ರಾಮಠಾಣಾ ವಿಸ್ತೀರ್ಣಕ್ಕೆ 2-ಇ ಅಧಿಸೂಚನೆ ಹೊರಡಿಸುವ ಹಂತದಲ್ಲಿ ಗ್ರಾಮಸ್ಥರ ಕೋರಿಕೆಯಂತೆ "ಭವಾನಿ ನಗರ " ಎಂದು ತದನಂತರ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ‘ಪರಶುರಾಮ ನಗರ’ ಎಂದು ಹಾಗೂ ಅಂತಿಮ ಅಧಿಸೂಚನೆ ಹೊರಡಿಸಲು ಸಲ್ಲಿಸಲಾದ ಪ್ರಸ್ತಾವನೆಯಲ್ಲಿ ‘ಮರಿಯಮ್ಮ ನಗರ’ ಎಂದು ಸ್ಥಳೀಯರ ಅಭಿಪ್ರಾಯದಂತೆ ಹೆಸರನ್ನು ಬದಲಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.ಸದರಿ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸಿ ಗ್ರಾಮದ ಹೆಸರು ಸೂಚನೆ ವಿಚಾರವಾಗಿ ಪ್ರತಿ ಹಂತದಲ್ಲಿಯೂ ಆಕ್ಷೇಪಣೆಗಳು ಕಂಡು ಬಂದಿದ್ದು, ಅಧಿಸೂಚನೆ ಹೊರಡಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ನಂತರ ಯಾವುದೇ ಬದಲಾವಣೆಗೆ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಅಲ್ಲದೆ ಯಾವುದೇ ಒಂದು ಬದಲಾವಣೆ ಇದ್ದಲ್ಲಿ ತಿದ್ದುಪಡಿ ಅನುಸೂಚನೆಗಳನ್ನು ಹೊರಡಿಸಬೇಕಾಗಿರುತ್ತದೆ. ಆದ್ದರಿಂದ ಪ್ರಸ್ತಾಪಿತ ಗ್ರಾಮದ ಹೆಸರು ಸೂಚನೆ ಬಗ್ಗೆ, ಮತ್ತೊಮ್ಮೆ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ನಿಯಮಾನುಸಾರ ಅಂತಿಮ ಅಧಿಸೂಚನೆಗೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.