ಮುಖ್ಯಮಂತ್ರಿಗಳೊಂದಿಗೆ ಅತಿವೃಷ್ಟಿ ಹಾನಿ ಕುರಿತ ಸಭೆ

| Published : Sep 09 2025, 01:01 AM IST

ಮುಖ್ಯಮಂತ್ರಿಗಳೊಂದಿಗೆ ಅತಿವೃಷ್ಟಿ ಹಾನಿ ಕುರಿತ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿಯೇ ಮೊದಲನೆಯದಾಗಿ ಧಾರವಾಡ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಹಾನಿಯನ್ನು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳ ತಂಡದಿಂದ ಜಂಟಿ ಸಮೀಕ್ಷೆಯನ್ನು ಪೂರೈಸಿದೆ.

ಧಾರವಾಡ: ಜಿಲ್ಲೆಯಲ್ಲಿ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಸೇರಿ ಸುಮಾರು 93,496 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಜಂಟಿ ಸಮಿತಿ ಮೂಲಕ ಸಮೀಕ್ಷೆ ಮಾಡಿ, ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದತ್ತಾಂಶಗಳನ್ನು ದಾಖಲಿಸಲು ವೆಬ್‌ಸೈಟ್ ಓಪನ್ ಮಾಡಿ, ಪರಿಹಾರ ಬಿಡುಗಡೆಗೆ ತಕ್ಷಣ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಮುಖ್ಯಮಂತ್ರಿಗಳೊಂದಿಗೆ ಸೋಮವಾರ ಧಾರವಾಡ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿ, 2025ರ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಠಿಯಿಂದ ಆದ ಹಾನಿಗಳ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಜರುಗಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು.

ರಾಜ್ಯದಲ್ಲಿಯೇ ಮೊದಲನೆಯದಾಗಿ ಧಾರವಾಡ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಹಾನಿಯನ್ನು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳ ತಂಡದಿಂದ ಜಂಟಿ ಸಮೀಕ್ಷೆಯನ್ನು ಪೂರೈಸಿದೆ. ಅಲ್ಲದೇ ಸಮೀಕ್ಷೆಯ ಅಂತಿಮ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯೊಂದಿಗೆ ಸಲ್ಲಿಸಿದೆ. ಮುಖ್ಯಮಂತ್ರಿಗಳು ಈ ಕುರಿತು ಪರಿಶೀಲಿಸಿ, ರೈತರಿಗೆ ಅನುಕೂಲವಾಗುವಂತೆ ತಕ್ಷಣ ಪರಿಹಾರ ಬಿಡುಗಡೆ ಮಾಡಲು ಸೂಕ್ತ ಕ್ರಮವಹಿಸುವಂತೆ ಸಚಿವ ಲಾಡ್‌ ವಿನಂತಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಬೆಳೆ ಹಾನಿ ಮಾಹಿತಿ ದಾಖಲಿಸಲು ವೆಬ್‌ಸೈಟ್ ಓಪನ್ ಮಾಡಿದರೆ, ದತ್ತಾಂಶ ದಾಖಲಿಸುವದನ್ನು ಪೂರ್ಣಗೊಳಿಸಲಾಗುವುದು. ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಪಿಡಿ ಖಾತೆ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರ ಪಿಡಿ ಖಾತೆಯಲ್ಲಿ ₹2713.05 ಲಕ್ಷಗಳ ಅನುದಾನ ಲಭ್ಯವಿದೆ ಎಂದರು.