ದಾವಣಗೆರೆ ಜಿಲ್ಲೆಯ ಬರಗಾಲದ ಪರಿಸ್ಥಿತಿ, ಮಳೆ ಅಭಾವ, ಕುಡಿಯುವ ನೀರು, ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲು ತಾವು, ಜಿಪಂ ಸಿಇಒ ಸೇರಿದಂತೆ ಅಧಿಕಾರಿಗಳ ತಂಡ ಬೆಂಗಳೂರಿಗೆ ತೆರಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
- ಬರ, ಮಳೆ ಅಭಾವ, ವಿವಿಧ ಅಭಿವೃದ್ಧಿ ಬಗ್ಗೆ ಚರ್ಚೆ: ಡಿಸಿ ಗಂಗಾಧರ ಸ್ವಾಮಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲೆಯ ಬರಗಾಲದ ಪರಿಸ್ಥಿತಿ, ಮಳೆ ಅಭಾವ, ಕುಡಿಯುವ ನೀರು, ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲು ತಾವು, ಜಿಪಂ ಸಿಇಒ ಸೇರಿದಂತೆ ಅಧಿಕಾರಿಗಳ ತಂಡ ಬೆಂಗಳೂರಿಗೆ ತೆರಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ ಶೇ.45ರಷ್ಟು ಮಳೆ ಕೊರತೆಯಾಗಿದ್ದು, ಕೇವಲ ಶೇ.32ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 2.26 ಲಕ್ಷ ಹೆಕ್ಟೇರಲ್ಲಿ ಬಿತ್ತನೆ ಆಗಬೇಕಾಗಿದ್ದು, ಈವರೆಗೆ 90 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಮೆಕ್ಕೆಜೋಳ, ರಾಗಿ ಹೆಚ್ಚು ಬಿತ್ತನೆಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಬರಪ್ರದೇಶ ಘೋಷಣೆಗೆ ಆಯಾ ನಿಯಮಾವಳಿ ಪಾಲಿಸಬೇಕಾಗುತ್ತದೆ. ತಹಸೀಲ್ದಾರರಿಗೆ ಗ್ರೌಂಡ್ ಟ್ರೂಥಿಂಗ್ ಬಗ್ಗೆ ತರಬೇತಿ ನೀಡಿದ್ದು, ಅಧಿಕಾರಿಗಳು ಹಂತ ಹಂತವಾಗಿ ಪರಿಶೀಲಿಸುತ್ತಾರೆ ಎಂದು ಹೇಳಿದರು.
ಗ್ರಾಮೀಣ ಶುದ್ಧ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಆರ್‌ಡಿಪಿಆರ್ ಸಚಿವರ ಗಮನಕ್ಕೆ ತರಲಾಗಿದೆ. ಜಿಲ್ಲೆಯಲ್ಲಿ ಒಟ್ಟು 799 ಘಟಕಗಳ ಪೈಕಿ 97 ಘಟಕಗಳು ದುರಸ್ತಿ ಹಂತದಲ್ಲಿವೆ. ಈ ಪೈಕಿ 26-27 ಘಟಕ ಪ್ರಮುಖ ದುರಸ್ತಿ ಆಗಬೇಕಿದೆ. ತಾಲೂಕುವಾರು ಟೆಂಡರ್ ಕರೆದು, ದುರಸ್ತಿ ನಡೆಸಿ, ಬಳಿಕ ಗ್ರಾಪಂಗಳಿಗೆ ನಿರ್ವಹಣೆಗೆ ಹಸ್ತಾಂತರಿಸುವ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.ಜಿಪಂ ಸಿಇಓ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಗುಳೇ ಹೋಗುವುದನ್ನು ತಡೆಯಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ವಿಬಿಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಕಡ್ಡಾಯವಾಗಿ ನೀಡಲಾಗುತ್ತಿದೆ. ಯಾವುದೇ ಭಾಗದಲ್ಲೂ ಕೆಲಸದ ಕೊರತೆ ಆಗದಂತೆ ನಿಗಾ ವಹಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ವಾರ್ತಾಧಿಕಾರಿ ಧನಂಜಯಪ್ಪ ಇತರರು ಇದ್ದರು.- - -
* ದಾವಣಗೆರೆ ಜಿಲ್ಲೆ ಶೇ.99 ಮತದಾರರ ಪಟ್ಟಿ ಡಿಜಿಟಲೀಕರಣ- ಮಾಯಕೊಂಡ ಕ್ಷೇತ್ರದಲ್ಲಿ ಅತಿ ಹೆಚ್ಚು ಡಿಜಿಟಲೀಕರಣ: ಜಿಲ್ಲಾಧಿಕಾರಿ ಮಾಹಿತಿ ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ಶೇ.99ರಷ್ಟು ಮತದಾರರ ಪಟ್ಟಿಯ ಡಿಜಿಟಲೀಕರಣ ಪ್ರಕ್ರಿಯೆ ಯಶಸ್ವಿಯಾಗಿದ್ದು, ಒಟ್ಟು 12,96,244 ಮತದಾರರ ಮಾಹಿತಿ ಡಿಜಿಟಲೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲೀಕರಣದ ಪ್ರಕ್ರಿಯೆಯಲ್ಲಿ ಯಾವುದೇ ಸೂಕ್ತ ದಾಖಲೆಗಳಿಲ್ಲದ 30 ಸಾವಿರಕ್ಕೂ ಹೆಚ್ಚು ಮತದಾರರ ಹೆಸರು ಕಂಡುಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಂತದಲ್ಲಿ ಪರಿಶೀಲನೆ ನಡೆಸಿ, ಅಗತ್ಯ ತಿದ್ದುಪಡಿ ಮತ್ತು ಸರಿಪಡಿಸುವ ಕಾರ್ಯ ಕೈಗೊಳ್ಳಲು ಸರ್ಕಾರದಿಂದ ಸೂಚನೆ ನೀಡಲಾಗಿದೆ ಎಂದರು.
ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಸಿದ್ಧಪಡಿಸಲಾದ ಎಎಸ್‌ಡಿ (ಗೈರು, ಸ್ಥಳ ಬದಲಾವಣೆ ಮತ್ತು ನಿಧನ) ಪಟ್ಟಿಯನ್ನು ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಪ್ರತಿನಿಧಿಗಳಿಗೆ ಹಂಚಿಕೆ ಮಾಡಲಾಗಿದೆ. ಪಟ್ಟಿಯಲ್ಲಿ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಮತ್ತು ನಕಲಿ ಮತದಾರರ ವಿವರಗಳಿವೆ. ಮೃತಪಟ್ಟ ಮತ್ತು ನಕಲಿ ಮತದಾರರ ಹೆಸರನ್ನು ನಿಯಮಾನುಸಾರ ತೆಗೆದು ಹಾಕಲಾಗುತ್ತದೆ ಎಂದು ಹೇಳಿದರು.ಶಾಶ್ವತವಾಗಿ ಸ್ಥಳಾಂತರಗೊಂಡವರು ಅಥವಾ ಬೇರೆಡೆ ಇರುವ ಮತದಾರರಿಗೆ ಫಾರಂ-6 ಸಲ್ಲಿಸುವ ಮೂಲಕ ಅಥವಾ ಸೂಕ್ತ ದಾಖಲೆ ನೀಡಿ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಇನ್ನೂ ಅವಕಾಶವಿದೆ. ದಾಖಲೆಗಳ ಕೊರತೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸರ್ಕಾರವು ಉಚಿತವಾಗಿ ಪ್ರಮಾಣ ಪತ್ರ ಮುದ್ರಿಸಿ ನೀಡುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 13 ಲಕ್ಷಕ್ಕೂ ಹೆಚ್ಚು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಉಚಿತವಾಗಿ ಮುದ್ರಿಸಿದ್ದು, ಬಿಎಲ್‌ಒ ಮೂಲಕ ಮನೆ ಮನೆಗೆ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲೇ ಅತ್ಯಂತ ಹೆಚ್ಚು ಡಿಜಿಟಲೀಕರಣ ಸಾಧಿಸಿದ ಕ್ಷೇತ್ರಗಳಲ್ಲಿ ಮಾಯಕೊಂಡ (ಶೇ.93.69) ಮುಂಚೂಣಿಯಲ್ಲಿದೆ. ಹರಿಹರ, ಮಾಯಕೊಂಡ, ಹೊನ್ನಾಳಿ ಕ್ಷೇತ್ರಗಳಲ್ಲಿ ಶೇ.100ರಷ್ಟು ಕೆಲಸ ಪೂರ್ಣವಾಗಿದೆ. ಚನ್ನಗಿರಿಯಲ್ಲಿ ಕೇವಲ 400 ಹಾಗೂ ದಾವಣಗೆರೆ ಉತ್ತರಲ್ಲಿ ಸುಮಾರು 10 ಸಾವಿರದಿಂದ 11 ಸಾವಿರ ಅರ್ಜಿ ಬಾಕಿ ಇದೆ. ಅವುಗಳನ್ನು ಶೀಘ್ರವೇ ಅಖೈರುಗೊಳಿಸಲಾಗುವುದು ಎಂದು ಅವರು ತಿಳಿಸಿದರು.ತಕರಾರು ಸಲ್ಲಿಕೆಗೆ 60 ದಿನದ ಕಾಲಾವಕಾಶ ಇರುತ್ತದೆ. ಈವರೆಗೆ ಯಾವುದೇ ಅರ್ಹ ಮತದಾರರ ಹೆಸರು ಅನಗತ್ಯವಾಗಿ ಬಿಟ್ಟು ಹೋಗಿರುವ ಬಗ್ಗೆ ದೂರು ಬಂದಿಲ್ಲ. ರಾಜಕೀಯ ಪಕ್ಷಗಳು ಹಾಗೂ ಬಿಎಲ್‌ಎಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಾರ ವಾರವೂ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದರಿಂದ ಇಂತಹ ಪ್ರಗತಿ ಸಾಧ್ಯವಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗುವುದು. ತದನಂತರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಸಾರ್ವಜನಿಕರು ಅಥವಾ ಮತದಾರರು ತಮ್ಮ ಹೆಸರು ಕುರಿತು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಏನಾದರೂ ಸಮಸ್ಯೆಗಳಿದ್ದರೆ ನೇರವಾಗಿ ಇಆರ್‌ಒ ಕಚೇರಿ, ಬಿಎಲ್‌ಒ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಡಿಸಿ ಗಂಗಾಧರ ಸ್ವಾಮಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ಎಸ್ಪಿ ಡಾ. ಎಚ್.ಟಿ.ಶೇಖರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಧನಂಜಯಪ್ಪ ಇದ್ದರು.
- - -