ಸದಸ್ಯರ ಗಮನಕ್ಕೆ ತಾರದೇ ಸಭೆ: ಸಹಕಾರಿ ನಿಬಂಧಕರಿಗೆ ದೂರು

| Published : Jun 03 2024, 12:30 AM IST

ಸದಸ್ಯರ ಗಮನಕ್ಕೆ ತಾರದೇ ಸಭೆ: ಸಹಕಾರಿ ನಿಬಂಧಕರಿಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಆರು ಸದಸ್ಯರಿಗೆ ನೋಟಿಸ್ ನೀಡುವುದು ಬೇಡ ಎಂದು ನನಗೆ ಬೆದರಿಕೆ ಹಾಕಿ, ಮೀಟಿಂಗ್ ಪುಸ್ತಕ ಹೊರಗಡೆ ತರಿಸಿ ನಡಾವಳಿ ಪುಸ್ತಕದಲ್ಲಿ ಬರೆಯಿಸಿದ್ದಾರೆ.

ಕೂಡ್ಲಿಗಿ: ತಾಲೂಕಿನ ಅಮಲಾಪುರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ 13 ಸದಸ್ಯರಿದ್ದು, ಉಪಾಧ್ಯಕ್ಷರು ಸೇರಿದಂತೆ 6 ಸದಸ್ಯರಿಗೆ ನೋಟಿಸ್ ನೀಡದೇ ಅಧ್ಯಕ್ಷರು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸದಸ್ಯರು ಹೊಸಪೇಟೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಾಹಕರಿಗೆ, 6 ನಿರ್ದೇಶಕರಿಗೆ ಸಭೆಯ ನೋಟಿಸ್ ನೀಡದೇ ಸಭೆ ನಡೆಸಿರುವುದರ ಉದ್ದೇಶ ಏನು? ಸಂಘದ ಕಚೇರಿಯಲ್ಲಿ 2 ಸಭೆಗಳು ನಡೆದಿಲ್ಲ. 7 ನಿರ್ದೇಶಕರ ಸಹಿ ಮಾಡಿಸಿಕೊಂಡು ಕೋರಂ ತೋರಿಸಿ ಮನ ಬಂದಂತೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ಸಹಕಾರ ಸಂಘದ ಉಪಾಧ್ಯಕ್ಷ ಚಿತ್ತಯ್ಯ, ನಿರ್ದೇಶಕರಾದ ಎ. ವೀರೇಶ್, ಸುದರ್ಶನ್, ರತ್ನಮ್ಮ, ಬಸವರಾಜ, ಸಣ್ಣ ದೊಡ್ಡಪ್ಪ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಅಮಲಾಪುರ ಕೃಷಿ ಸಹಕಾರ ಸಂಘದ ಅಧ್ಯಕ್ಷರು, ಆರು ಸದಸ್ಯರಿಗೆ ನೋಟಿಸ್ ನೀಡುವುದು ಬೇಡ ಎಂದು ನನಗೆ ಬೆದರಿಕೆ ಹಾಕಿ, ಮೀಟಿಂಗ್ ಪುಸ್ತಕ ಹೊರಗಡೆ ತರಿಸಿ ನಡಾವಳಿ ಪುಸ್ತಕದಲ್ಲಿ ಬರೆಯಿಸಿದ್ದಾರೆ. ಎಲ್ಲ ಸದಸ್ಯರ ಗಮನಕ್ಕೆ ತಾರದೇ ನಡಾವಳಿ ಬರೆಯುವುದು ಬೇಡ ಎಂದರೂ ಕೇಳಿಲ್ಲ. 7 ಸದಸ್ಯರ ಕೋರಂ ಇದೆ, ನೀನು ನಡಾವಳಿ ಬರೆಯಲೇಬೇಕು. ಇಲ್ಲದಿದ್ದರೆ ಸಂಘದಿಂದ ನಿನ್ನನ್ನು ತೆಗೆದು ಹಾಕುತ್ತೇನೆ ಎಂದು ಹೇಳಿ ಬರೆಯಿಸಿದ್ದಾರೆ. ಆದರೆ ವಾಸ್ತವವಾಗಿ ಸಭೆ ನಡೆದಿಲ್ಲ ಎಂದು ಅಮಲಾಪುರ ಕೃಷಿ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವೈ.ಮೂಗಪ್ಪ ಹೊಸಪೇಟೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಪತ್ರದ ಮುಖೇನ ತಿಳಿಸಿದ್ದಾರೆ.