ಜು.13ರಂದು ಮೆಗಾ ಲೋಕ ಅದಾಲತ್

| Published : Jun 21 2024, 01:06 AM IST

ಸಾರಾಂಶ

ಜಿಲ್ಲೆಯಲ್ಲಿ ಒಟ್ಟು 40,408 ಪ್ರಕರಣಗಳು ಬಾಕಿಯಿರುತ್ತದೆ. ಈ ಪೈಕಿ ಅದಾಲತ್‌ಗೆ ಜೂನ್ 20 ಕ್ಕೆ ಅನ್ವಯವಾಗುವಂತೆ 1,150 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಬಾರಿಯ ಅದಾಲತ್‌ಗೆ ಸದ್ಯ 5,325 ಪ್ರಕರಣಗಳು ದಾಖಲಾಗಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಇದ್ದು ಇತ್ಯರ್ಥಪಡಿಸಲು ಅವಕಾಶವಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಕೀಲರು ಮತ್ತು ಕಕ್ಷಿದಾರರ ಪರಸ್ಪರ ಸಹಕಾರದೊಂದಿಗೆ ಜುಲೈ 13ರಂದು ನಡೆಯಲಿರುವ ರಾಷ್ಟ್ರೀಯ ಮೆಗಾ ಅದಾಲತ್‌ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಲಾಗುತ್ತಿದ್ದು, ಸಾರ್ವಜನಿಕರು ಅದಾಲತ್‌ನ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.

ನಿಗದಿತ ಪ್ರಕರಣಗಳ ಇತ್ಯರ್ಥ

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಅದಾಲತ್‌ನಲ್ಲಿ ಜಿಲ್ಲಾ ನ್ಯಾಯಾಲಯವೂ ಸೇರಿದಂತೆ ವಿವಿಧ ಹಂತದ ನ್ಯಾಯಾಲಯಗಳಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಲ್ಲಿನ ಪ್ರಕರಣ ಸೇರಿದಂತೆ ನಿಗದಿತ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು. ಸದ್ಯ ಜಿಲ್ಲೆಯಲ್ಲಿ ಒಟ್ಟು 40,408 ಪ್ರಕರಣಗಳು ಬಾಕಿಯಿರುತ್ತದೆ. ಈ ಪೈಕಿ ಅದಾಲತ್‌ಗೆ ಜೂನ್ 20 ಕ್ಕೆ ಅನ್ವಯವಾಗುವಂತೆ 1,150 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಬಾರಿಯ ಅದಾಲತ್‌ಗೆ ಸದ್ಯ 5,325 ಪ್ರಕರಣಗಳು ದಾಖಲಾಗಿವೆ. ಕಳೆದ ಬಾರಿಗಿಂತ ಹೆಚ್ಚು ಸಂಖ್ಯೆಯ ಪ್ರಕರಣಗಳನ್ನು ಈ ಬಾರಿಯ ಅದಾಲತ್‌ನಲ್ಲಿ ವಿಲೇವಾರಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಕಾನೂನು ಸೇವಾ ಸಮಿತಿ ಸಂಪರ್ಕಿಸಿ

ಜುಲೈ 13 ರ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾರ್ವಜನಿಕರು ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾ.ಕೆ.ಬಿ.ಉಮೇಶ್ ಇದ್ದರು.