ಸಾರಾಂಶ
ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ ಕಮೋಡ್ ದಲ್ಲಿ ಹೆಣ್ಣು ಭ್ರೂಣ ಶವ ಪತ್ತೆಯಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ
ಶಿವಮೊಗ್ಗ: ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ ಕಮೋಡ್ ದಲ್ಲಿ ಹೆಣ್ಣು ಭ್ರೂಣ ಶವ ಪತ್ತೆಯಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಬುಧವಾರ ಸಂಜೆ ಆಸ್ಪತ್ರೆಯ ಹೆರಿಗೆ ವಾರ್ಡ್ ಗೆ ಆಗಮಿಸಿದ ಮಹಿಳೆ, ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ಮನೆಯಲ್ಲಿಯೇ ಅಬಾರ್ಷನ್ ಆಗಿದೆ ಎಂದು ಹೇಳಿ ದಾಖಲಾಗಿದ್ದರು. ಮಹಿಳೆಗೆ ಸೂಕ್ತ ವೈದ್ಯೋಪಚಾರವನ್ನು ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ತನದಂತರ ಮಹಿಳೆಯು ಯಾರಿಗೂ ತಿಳಿಸದೆ ಆಸ್ಪತ್ರೆಯಿಂದ ಹೊರ ತೆರಳಿದ್ದಾಳೆ. ಈ ವೇಳೆ ಮಹಿಳೆ ಹೆಸರು, ನೀಡಿದ ಚಿಕಿತ್ಸೆ ವಿವರ ಒಳಗೊಂಡ ಕೇಸ್ ಶೀಟ್ ಕೂಡ ಕೊಂಡೊಯ್ದಿದ್ದಾಳೆ.
ಮಹಿಳೆಗೆ ಭ್ರೂಣ ಸೇರಿದ್ದಾಗಿದೆಯೇ ಅಥವಾ ಬೇರೆಯವರಿಗೆ ಸಂಬಂಧಿಸಿದ್ದೆ ಎಂಬುದು ಖಚಿತವಾಗಬೇಕಾಗಿದೆ. ಮೆಗ್ಗಾನ್ ಸಿಬ್ಬಂದಿ ಹಾಗೂ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಯ ಪರಿಶೀಲಿಸುತ್ತಿದ್ದಾರೆ. ಭ್ರೂಣ 7 ತಿಂಗಳ ವಯೋಮಾನದ್ದಾಗಿದೆ ಎಂದು ಅಂದಾಜಿಸಲಾಗಿದೆ. ಆಸ್ಪತ್ರೆ ಡಿ ಗ್ರೂಪ್ ಸಿಬ್ಬಂದಿ, ರಾತ್ರಿ ಶೌಚಾಲಯ ಕೊಠಿಡಿಗೆ ತೆರಳಿದ್ದ ವೇಳೆ ಕಮೋಡದಲ್ಲಿ ಭ್ರೂಣ ಪತ್ತೆಯಾಗಿದೆ.
ಯಾರು ಈ ಕೃತ್ಯ ನಡೆಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಹೆರಿಗೆ ವಾರ್ಡ್ ನ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ತಿಮ್ಮಪ್ಪ ತಿಳಿಸಿದ್ದಾರೆ.