ಸಾರಾಂಶ
ಶಿವಮೊಗ್ಗ: ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಶುಕ್ರವಾರ ಮೆಗ್ಗಾನ್ ಆಸ್ಪತ್ರೆ ಮತ್ತು ಆರ್‌ಟಿಒ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ಅಲ್ಲಿನ ಅಧಿಕಾರಿಗಳ ಕಾರ್ಯ ವೈಖರಿಯ ಪರಿಶೀಲನೆ ನಡೆಸಿದರು.ಅವ್ಯವಸ್ಥೆಯ ಆಗರ ಎನ್ನುವ ಹಣೆಪಟ್ಟೆ ಹೊತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಹೆಚ್ಚು ಸಮಯ ವಿವಿಧ ವಿಭಾಗಗಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿವೀಕ್ಷಣೆ ನಡೆಸಿದ ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೂರು ದಿನಗಳ ಶಿವಮೊಗ್ಗ ಭೇಟಿ ಸಂತಸ ತಂದಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಮಧ್ಯಮ ಸ್ಥಿತಿಯಲ್ಲಿದೆ ಎಂದರು.ಮೆಗ್ಗಾನ್ ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ತೀವ್ರ ಬೇಸರ ಹೊರ ಹಾಕಿದ ಅವರು, ಮೆಗ್ಗಾನ್ ಆಸ್ಪತ್ರೆಯ ಸ್ಥಿತಿ ಸರಿಯಿಲ್ಲ. ಕುಡಿಯುವ ನೀರು, ಶೌಚಾಲಯ ಯಾವುದೇ ಮೂಲಭೂತ ಸೌಕರ್ಯಗಳು ಸರಿಯಿಲ್ಲ. ಹೆರಿಗೆ ವಾರ್ಡ್‌ಗಳಲ್ಲಿ ಬಾಣಂತಿಯರಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆ ಕೂಡಾ ಇಲ್ಲ. ಮೆಗ್ಗಾನ್ ಆಸ್ಪತ್ರೆ ಬಹಳ ಅವ್ಯವಸ್ಥೆಯಿಂದ ಕೂಡಿದೆ ಎಂದು ತಿಳಿಸಿದರು.ಆಸ್ಪತ್ರೆಯಲ್ಲಿ ಔಷಧಿಗಳಿಗೆ ರೋಗಿಗಳನ್ನು ಹೊರಗೆ ಕಳಿಸಲಾಗುತ್ತಿದೆ. ಅಂತಹ ವೈದ್ಯರ ಬಗ್ಗೆ ದೂರುಗಳು ಬಂದಿವೆ. ಅವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು. ಅಲ್ಲಿನ ಸಾಕಷ್ಟು ವೈದ್ಯರು ರೋಗಿಗಳನ್ನು ನೋಡಲು ನಿರ್ಲಕ್ಷ್ಯ ಮಾಡಿದ್ದಾರೆ. ನರ್ಸ್‌ಗಳಿಗೆ ಅಲ್ಲಿ ಬೇಡಿಕೆ ಹೆಚ್ಚಿದೆ. ಒಟ್ಟಾರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ನಿರ್ಲಕ್ಷ್ಯ ತೋರಿದ ಡಾಕ್ಟರ್‌ಗಳ ಬಗ್ಗೆ ಮಾಹಿತಿ ತಿಳಿಸಲು ಹೇಳಿದ್ದೇನೆ ಎಂದರು.ಆಸ್ಪತ್ರೆಯ ವೇಳೆಯೇ ಅಲ್ಲಿನ ವೈದ್ಯರು ಖಾಸಗಿ ಕ್ಲಿನಿಕ್‌ಗಳಿಗೆ ಹೋಗುತ್ತಾರೆನ್ನುವ ದೂರುಗಳು ಕೂಡ ಬಂದಿವೆ. ಅಲ್ಲಿನ ವೈದ್ಯರು ಆಸ್ಪತ್ರೆಯಲ್ಲಿನ ತಮ್ಮ ಅವಧಿ ಮುಗಿದ ನಂತರ ತಮ್ಮ ಕ್ಲಿನಿಕ್ ಗೆ ಹೋಗಬೇಕು. ಆಸ್ಪತ್ರೆಯ ವೇಳೆ ಹೋಗಿ ಕ್ಲಿನಿಕ್ ಹೋಗಿ ಅಲ್ಲಿ ಕುಳಿತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಮೆಗ್ಗಾನ್ ಡ್ರೈನೇಜ್ ಅನ್ನು ಮೊದಲು ಸರಿಪಡಿಸಬೇಕು, ಇಲ್ಲಿ ವೈಜ್ಞಾನಿಕ ತನಿಖೆ ನಡೆಸಿ, ಸರಿಪಡಿಸಬೇಕು. ಸರ್ಕಾರದ ಪಾಲಿಸಿಯನ್ನು ಅನುಸರಿಸಬೇಕಾಗುತ್ತದೆ. ದುರುದ್ದೇಶದಿಂದ ಮಾಡದೇ ಇದ್ದರೆ ಅದು ತಪ್ಪು, ಆದರೆ ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ದರೆ ಏನೂ ಮಾಡಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ಕೈ ಬರಹದ ದಾಖಲೆಗಳಿವೆ. ಯಾವ ದಾಖಲಾತಿ ಎಲ್ಲಿ ಎಂದು ಕೇಳಿದರೆ ಹೇಳಲು ಉತ್ತರ ಇಲ್ಲ. ಏಜೆಂಟ್ ಮೂಲಕ ಬಂದಿರುವ ದಾಖಲೆಗಳನ್ನು ತೋರಿಸಲಾಗುತ್ತದೆ. ಇನ್ನು ಆರ್‌ಟಿಒ ಆಫೀಸ್‌ನಲ್ಲಿ 10 ಸಾವಿರ ವಾಹನಗಳು ಎಫ್‌ಸಿ ಇಲ್ಲದ ವಾಹಗಳಿವೆ. ಏನೇ ಕೇಳಿದರೂ ಸಿಬ್ಬಂದಿಗಳಿಲ್ಲ ಎಂದು ಉತ್ತರ ಹೇಳುತ್ತಾರೆ ಎಂದು ಉಪ ಲೋಕಾಯುಕ್ತರು ಬೇಸರ ಹೊರ ಹಾಕಿದರು. ಶಿವಮೊಗ್ಗ ನಗರಕ್ಕೆ ಬಂದ ನಂತರದ ಪರಿಶೀಲನೆ ವೇಳೆ ಕಂಡ ಲೋಪದೋಷಗಳಲ್ಲಿ ಇದುವರೆಗೂ 16 ಸುಮೋಟೋ ಕೇಸ್ ದಾಖಲಿಸಲಾಗಿದೆ. ಸಮಸ್ಯೆಯ ಪರಿಹಾರ ಅಗತ್ಯ. ದುರುದ್ದೇಶವಿದ್ದರೆ ಮುಲಾಜಿಲ್ಲದೆ ಲೋಕಾಯುಕ್ತ ಇಲಾಖೆ ಕ್ರಮ ಕೈಗೊಳ್ಳಲಿದೆ. ಸೆಕ್ಸನ್ 12(1), ಸೆಕ್ಷನ್ 12 (3)ರಲ್ಲಿ ನಮಗೆ ಹೇಳಲು ಅಧಿಕಾರ ಇದೆ. ಆದರೆ ಅನುಷ್ಠಾನಕ್ಕೆ ಅಧಿಕಾರ ಇಲ್ಲ, ಆದರೂ ಲೋಪದೋಷ ತೋರಿಸಿ, ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವುದು ನಮ್ಮ ಜವಾಬ್ದಾರಿ.- ನ್ಯಾ. ಕೆ.ಎನ್.ಫಣೀಂದ್ರ, ಉಪ ಲೋಕಾಯುಕ್ತರು485 ಪ್ರಕರಣಗಳು ದಾಖಲುಶಿವಮೊಗ್ಗ ಲೋಕಾಯುಕ್ತದಲ್ಲಿ ಇದೂವರೆಗೂ 485 ಪ್ರಕರಣಗಳು ದಾಖಲಾಗಿವೆ. 181 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದೇವೆ. ಉಳಿದ 111 ಪ್ರಕರಣಗಳಿಗೆ ಸಮಯದ ಅಭಾವದ ಕಾರಣ ವಿಚಾರಿಸಲು ಸ್ಥಳೀಯ ಎಸ್‌ಪಿ ಅವರಿಗೆ ಹೇಳಿದ್ದೇವೆ. 11 ಕೇಸ್ ಅಬ್ಸೆಂಟ್ ಆಗಿವೆ. 10 ಪ್ರಕರಣಗಳನ್ನು ಅಲ್ಲಿಯೇ ಮುಗಿಸಿದ್ದೇವೆ. ೪ ಪ್ರಕರಣಗಳನ್ನು ಬೇರೆ ಇಲಾಖೆಗಳಿಗೆ ರೆಫರ್ ಮಾಡಿದ್ದೇವೆ ಎಂದು ಉಪ ಲೋಕಾಯುಕ್ತರು ತಿಳಿಸಿದರು.