ಸಿಡಿಲಿಗೆ ಮೆಹತರ್ ಮಹಲ್ ಮಿನಾರ್ ಕುಸಿತ

| Published : Apr 19 2024, 01:01 AM IST

ಸಾರಾಂಶ

ನಗರದಲ್ಲಿ ಗುರುವಾರ ಸಂಜೆ ಗುಡುಗಿನೊಂದಿಗೆ ಅರ್ಧ ಗಂಟೆಗೂ ಅಧಿಕವಾಗಿ ಧಾರಾಕಾರ ಮಳೆ ಸುರಿಯಿತು. ಅಲ್ಲದೇ ಸಿಡಿಲಿನ ಹೊಡೆತಕ್ಕೆ ನಗರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಆದಿಲ್ ಶಾಹಿ ಕಾಲದ ಐತಿಹಾಸಿಕ ಮೆಹತರ್ ಮಹಲ್ (ಬಂಗಿ ಮಹಲ್)ನ ಮಿನಾರ್ (ಗೋಪುರ) ಕುಸಿದು ಬಿದಿದ್ದೆ. ಈ ವೇಳೆ ಕಾರೊಂದು ಜಖಂಗೊಂಡಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಗುರುವಾರ ಸಂಜೆ ಗುಡುಗಿನೊಂದಿಗೆ ಅರ್ಧ ಗಂಟೆಗೂ ಅಧಿಕವಾಗಿ ಧಾರಾಕಾರ ಮಳೆ ಸುರಿಯಿತು. ಅಲ್ಲದೇ ಸಿಡಿಲಿನ ಹೊಡೆತಕ್ಕೆ ನಗರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಆದಿಲ್ ಶಾಹಿ ಕಾಲದ ಐತಿಹಾಸಿಕ ಮೆಹತರ್ ಮಹಲ್ (ಬಂಗಿ ಮಹಲ್)ನ ಮಿನಾರ್ (ಗೋಪುರ) ಕುಸಿದು ಬಿದಿದ್ದೆ. ಈ ವೇಳೆ ಕಾರೊಂದು ಜಖಂಗೊಂಡಿದೆ.

ಸಿಡಿಲು ಬಡಿದ ಪರಿಣಾಮ ನಗರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಆದಿಲ್ ಶಾಹಿ ಕಾಲದ ಐತಿಹಾಸಿಕ ಮೆಹತರ್ ಮಹಲ್(ಬಂಗಿ ಮಹಲ್)ನ ಮಿನಾರ್(ಗೋಪುರ) ಕುಸಿದಿದೆ. ಸಿಡಿಲ ಹೊಡೆತಕ್ಕೆ ಮಿನಾರ್‌ನ ಮೇಲ್ಭಾಗದಲ್ಲಿದ್ದ ಒಂದು ಬದಿಯ ಗೋಪುರದ ಕಲ್ಲುಗಳು ಬಿದ್ದ ಪರಿಣಾಮ, ಕೆಳಗಡೆ ನಿಂತಿದ್ದ ಕಾರೊಂದು ಸಂಪೂರ್ಣವಾಗಿ ಜಖಂಗೊಂಡಿದೆ. ರಸ್ತೆಯ ಮೇಲೆಲ್ಲ ಕಲ್ಲುಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಸ್ವಲ್ಪ ಅಡೆತಡೆ ಉಂಟಾಯಿತು. ಘಟನಾ ಸ್ಥಳಕ್ಕೆ ನಗರದ ಪೊಲೀಸರು ಧಾವಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿದರು.

ಅರ್ಧಗಂಟೆ ಕಾಲ ಸುರಿದ ಮಳೆ:

ನಗರದಲ್ಲಿ ಸಂಜೆ ೬ ಗಂಟೆಗೆ ಮಳೆ ಆರಂಭವಾಯಿತು. ಸುಮಾರು ಅರ್ಧ ಗಂಟೆಗಳ ಕಾಲ ಅಧಿಕ ಗಾಳಿ, ಗುಡುಗು ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಚರಂಡಿ ಉಕ್ಕಿ ರಸ್ತೆ ನೀರು ಹರಿಯಿತು. ತಗ್ಗು ಪ್ರದೇಶದಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂದಿತು. ಜನ, ವಾಹನ ಸಂಚಾರಕ್ಕೆ ಅಡೆತಡೆಯಾಯಿತು. ಬಬಲೇಶ್ವರ ನಾಕಾ ಬಳಿ ಗಾಳಿಗೆ ಬೃಹತ್ ಪ್ರಮಾಣದ ಗಿಡ ಉರುಳಿದೆ. ನಗರದಲ್ಲಿ ಮಳೆ ಸುರಿಯುವ ಸಂದರ್ಭದಲ್ಲಿ ಬಿರುಗಾಳಿಗಿಂತ ಸಿಡಿಲಿನ ಅಬ್ಬರ ಜೋರಾಗಿತ್ತು. ಇನ್ನೊಂದೆಡೆ ಬಬಲೇಶ್ವರ ನಾಕಾದ ಬಳಿ ಇರುವ ಬೃಹತ್ ಮರವೊಂದು ಗಾಳಿಗೆ ಉರುಳಿಬಿದ್ದಿದೆ. ರಸ್ತೆ ಮೇಲೆ ಮರ ಉರುಳಿಬಿದ್ದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.

ಉತ್ತಮ ಮಳೆಯಾಗಿರುವುದಕ್ಕೆ ಜನ ಖುಷಿಯಾದರು. ಕೊಲ್ಹಾರ, ಬಸವನವಾಗೇವಾಡಿಯ ಮನಗೊಳಿಯಲ್ಲಿ ಭಾರೀ ಮಳೆಗೆ ಗಿಡವೊಂದು ವಿದ್ಯುತ್‌ ಕಂಬದ ಮೇಲೆ ಬಿದ್ದು ವಿದ್ಯುತ್‌ ಕಂಬ ಧರೆಗೆ ಉರುಳಿದ ಬಿದ್ದ ಘಟನೆ ನಡೆದಿದೆ. ಹೀಗಾಗಿ ಗ್ರಾಮದಲ್ಲಿ ಕೆಲವು ಗಂಟೆಗಳ ಕಾಲ ವಿದ್ಯುತ್‌ ಸ್ಥಗಿತಗೊಂಡಿತ್ತು.

ಜಿಲ್ಲೆಯಲ್ಲಿ ಕೆಲವುದಿನಗಳಿಂದ ಗುಡಿಗಿನ ಆರ್ಭಟ ಹೆಚ್ಚಾಗಿರುವ ಕಾರಣಕ್ಕೆ ಈಗಾಗಲೇ ನಾಲ್ಕು ಜನರು ಸಿಡಿಲಿಗೆ ಬಲಿಯಾಗಿದ್ದಾರೆ. ಇಷ್ಟೇ ಅಲ್ಲದೇ ಜಾನುವಾರುಗಳು ಸಿಡಿಲಿಗೆ ಮೃತಪಟ್ಟಿವೆ.