ಮೇಕೆದಾಟು ಯೋಜನೆ: ಜಿಲ್ಲೆಯ 1079 ಹೆಕ್ಟೇರ್ ಅರಣ್ಯ ಮುಳುಗಡೆ

| Published : Nov 21 2025, 01:15 AM IST

ಮೇಕೆದಾಟು ಯೋಜನೆ: ಜಿಲ್ಲೆಯ 1079 ಹೆಕ್ಟೇರ್ ಅರಣ್ಯ ಮುಳುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಕಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ ಅರಣ್ಯ ಇಲಾಖೆಗೆ ನೀಡಬೇಕು. ಅಧಿಕಾರಿಗಳು ತಾಲೂಕುವಾರು ತಂಡ ರಚಿಸಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ 15 ದಿನಗಳೊಳಗಾಗಿ ಸೂಕ್ತತೆ ಪ್ರಮಾಣ ಪಡೆಯಬೇಕು. ಉಪ ಮುಖ್ಯಮಂತ್ರಿಗಳು ಪ್ರತಿ 15 ದಿನಗಳಿಗೊಮ್ಮೆ ಮೇಕೆದಾಟು ಯೋಜನೆ ಕುರಿತು ಸಭೆ ನಡೆಸುವುದಾಗಿ ತಿಳಿಸಿದ್ದಾರೆ .

ಕನ್ನಡಪ್ರಭ ವಾರ್ತೆ ಮಂಡ್ಯ

ಮೇಕೆದಾಟು ಯೋಜನೆ ಪ್ರಾರಂಭಿಸಲು ಮಳವಳ್ಳಿ ತಾಲೂಕಿನ 5 ಗ್ರಾಮಗಳಲ್ಲಿ 1079 ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಹೇಳಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆ ಜಾರಿಗೆ 1079 ಹೆಕ್ಟೇರ್ ಜಾಗದ ಅವಶ್ಯಕತೆ ಇದೆ. ಆ ಪ್ರಕಾರ ಮಳವಳ್ಳಿ ತಾಲೂಕಿನ 5 ಗ್ರಾಮಗಳಲ್ಲಿ 1079 ಹೆಕ್ಟೇರ್‌ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಅದಕ್ಕೆ ಬದಲಿಯಾಗಿ 1:2 ಅನುಪಾತದಲ್ಲಿ ಜಿಲ್ಲೆಯ 2204 ಹೆಕ್ಟೇರ್ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ಜಾಗ ಗುರುತಿಸಲಾಗಿತ್ತು. ಈ ಹಿಂದೆ ಗುರುತಿಸಲಾದ 2204 ಹೆಕ್ಟೇರ್ ಜಾಗವನ್ನು ತೆಗೆದುಕೊಳ್ಳಲಾಗುತ್ತಿಲ್ಲ ಎಂದು ತಿಳಿಸಿದರು.

ಅರಣ್ಯ ಇಲಾಖೆಗೆ 1:1 ಅನುಪಾತದಲ್ಲಿ 1079 ಹೆಕ್ಟೇರ್ ಅರಣ್ಯೇತರ ಜಾಗ, ಗೊಮಾಳ, ಸರ್ಕಾರಿ ಜಾಗಗಳನ್ನು ನೀಡಬೇಕು. ಈಗಾಗಲೇ ಪಾಂಡವಪುರ ಮತ್ತು ನಾಗಮಂಗಲದಲ್ಲಿ 307 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದ್ದು, ಅರಣ್ಯ ಇಲಾಖೆಯೂ ಸಹ ಸದರಿ ಜಾಗಕ್ಕೆ ಸೂಕ್ತತೆ ಪ್ರಮಾಣ ಪತ್ರ ನೀಡಿದೆ ಎಂದರು.

ಬಾಕಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ ಅರಣ್ಯ ಇಲಾಖೆಗೆ ನೀಡಬೇಕು. ಅಧಿಕಾರಿಗಳು ತಾಲೂಕುವಾರು ತಂಡ ರಚಿಸಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ 15 ದಿನಗಳೊಳಗಾಗಿ ಸೂಕ್ತತೆ ಪ್ರಮಾಣ ಪಡೆಯಬೇಕು. ಉಪ ಮುಖ್ಯಮಂತ್ರಿಗಳು ಪ್ರತಿ 15 ದಿನಗಳಿಗೊಮ್ಮೆ ಮೇಕೆದಾಟು ಯೋಜನೆ ಕುರಿತು ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.

ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಎ.ಸಿ.ಎಫ್. ಎ.ಡಿ.ಎಲ್.ಆರ್ ಮತ್ತು ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಸೂಕ್ತ ಪರ್ಯಾಯ ಜಾಗ ಗುರುತಿಸಬೇಕು. ಅರಣ್ಯೇತರ ಜಾಗವನ್ನು ಗುರುತಿಸುವಾಗ ಸದರಿ ಜಾಗದ ಕುರಿತು ಯಾವುದೇ ಅಕ್ರಮ ಸಕ್ರಮ ಇರಬಾರದು. ಅಧಿಕಾರಿಗಳು ಗುರುತಿಸಿರುವ ಜಾಗ ಸರ್ವೇ ಮತ್ತು ಸ್ಕೆಚ್ ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಾವೇರಿ ನೀರಾವರಿ ನಿಗಮದ ಅಭಿಯಂತರ ರಘುರಾಮನ್, ಅರಣ್ಯ ಇಲಾಖೆಯ ಡಿ.ಎಫ್.ಒ ರಘು ತಾಲೂಕು ಮಟ್ಟದ ಅರಣ್ಯಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.