ಸಮಗ್ರ ತೋಟಗಾರಿಕೆಗೆ ಮೇಳ ದಾರಿದೀಪ: ಡಿಸಿ ಜಾನಕಿ

| Published : Dec 24 2024, 12:45 AM IST

ಸಮಗ್ರ ತೋಟಗಾರಿಕೆಗೆ ಮೇಳ ದಾರಿದೀಪ: ಡಿಸಿ ಜಾನಕಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಹಾಗೂ ತೋಟಗಾರಿಕೆಗೆ ಪ್ರಧಾನವಾದ ಬಾಗಲಕೋಟೆ ಜಿಲ್ಲೆಗೆ ತೋಟಗಾರಿಕೆ ವಿಶ್ವವಿದ್ಯಾಲಯ ರೈತರ ಬಾಳಿಗೆ ಮುನ್ನುಡಿ ಬರೆದಿದ್ದು, ಈ ಭಾಗದ ರೈತರಿಗೆ ತೋಟಗಾರಿಕೆ ಮೇಳ ದಾರಿದೀಪವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷಿ ಹಾಗೂ ತೋಟಗಾರಿಕೆಗೆ ಪ್ರಧಾನವಾದ ಬಾಗಲಕೋಟೆ ಜಿಲ್ಲೆಗೆ ತೋಟಗಾರಿಕೆ ವಿಶ್ವವಿದ್ಯಾಲಯ ರೈತರ ಬಾಳಿಗೆ ಮುನ್ನುಡಿ ಬರೆದಿದ್ದು, ಈ ಭಾಗದ ರೈತರಿಗೆ ತೋಟಗಾರಿಕೆ ಮೇಳ ದಾರಿದೀಪವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ತೋವಿವಿಯ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ನಡೆದ ತೋಟಗಾರಿಕೆ ಮೇಳ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕೈಗಾರಿಕಾ ಪ್ರಗತಿಗೆ ಜಗತ್ತಿನ ನಾನಾ ಭಾಗದ ಕೈಗಾರಿಕಾ ಪ್ರತಿನಿಧಿಗಳನ್ನು ಆಹ್ವಾನಿಸಿ ಔದ್ಯೋಗಿಕ ಮೇಳ ಮಾಡಿದಂತೆ ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದಂತೆ ಯುವ ರೈತರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಹೊಸದಾಗಿ ತೋಟಗಾರಿಕೆ ಮಾಡುವ ಯುವ ರೈತರಿಗೆ ಪ್ರತಿಯೊಂದು ಬೆಳೆಗಳಲ್ಲಿ ಕುತೂಹಲ ಇರುವುದರಿಂದ ಈ ಮೇಳಕ್ಕೆ ಆಗಮಿಸಿ ತಮಗೆ ಇಷ್ಟವಾದ ಹಣ್ಣು, ತರಕಾರಿ ಹಾಗೂ ಹೂವು ಬೆಳೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇಂತಹ ಸದಾವಕಾಶವನ್ನು ಯುವ ರೈತರು ಹಾಗೂ ಈ ಭಾಗದ ಕೃಷಿಕರು ಉಪಯೋಗಿಸಿಕೊಂಡು ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಮೇಳದಲ್ಲಿ ಕೃಷಿ ಯಂತ್ರೋಪಕರಣ, ವಿವಿಧ ಪ್ರಾತ್ಯಕ್ಷಿಕೆಗಳ ಮಾಹಿತಿ ಪಡೆದುಕೊಳ್ಳಲು ತೋಟಗಾರಿಕೆ ಮೇಳ ಸಹಕಾರಿಯಾಗಿದೆ. ಕಳೆದ ಬಾರಿಗಿಂತ ಎರಡು ಪಟ್ಟು ಆಕರ್ಷಣೀಯವಾಗಿದೆ. ಜಿಲ್ಲಾ ಪಂಚಾಯತಿ ವತಿಯಿಂದ ನರೇಗಾ ಯೋಜನೆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿ, ಇಂದಿನ ಆಧುನಿಕ ಮಾದರಿಯ ಜೊತೆಗೆ ಹಳೆ ಪದ್ಧತಿಗಳನ್ನು ಕೃಷಿ ಹಾಗೂ ತೋಟಗಾರಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಸ್ನಾತಕೋತ್ತರ ಪದವಿ ಪಡೆದ ಯುವಕರು ಕೃಷಿ ಮತ್ತು ತೋಟಗಾರಿಕೆಯತ್ತ ಮುಖ ಮಾಡಲು ಮುಂದಾಗಬೇಕು ಎಂದು ಹೇಳಿದರು.

ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿ, ಡಿಸೆಂಬರ್‌ 23 ರಂದು ಚೌದರಿ ಚರಣಸಿಂಗ್ ಜನ್ಮ ದಿನಾಚರಣೆ ಅಂಗವಾಗಿ ಸುಸ್ಥಿರ ಕೃಷಿಗಾಗಿ ರೈತರನ್ನು ಸಬಲೀಕರಣಗೊಳಿಸುವುದು ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷ ರಾಷ್ಟ್ರೀಯ ರೈತ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಮನುಷ್ಯನಿಗೂ ಆಹಾರ, ಆರೋಗ್ಯ ಹಾಗೂ ಆದಾಯ ಅವಶ್ಯವಾಗಿದೆ. ಈ ಮೂರು ಸಿಗುವಂತಹದ್ದು, ಜೊತೆಗೆ ಮಾನಸಿಕ ನೆಮ್ಮದಿ ಕೃಷಿ ಮತ್ತು ತೋಟಗಾರಿಕೆಯಿಂದ ಸಾಧ್ಯ ಎಂದು ತಿಳಿಸಿದರು.

ರೈತರ ಕುಟುಂಬದ ಯುವಕರು ತಮ್ಮ ಹಿರಿಯರ ಜಮೀನನ್ನು ಬಿಟ್ಟು ಆಹಾರ ಆದಾಯ ಅರಸಿ ನಗರದತ್ತ ಗುಳೆ ಹೋಗುವುದನ್ನು ಬಿಡಬೇಕು. ಗೌರವಯುತವಾದ ಹಾಗೂ ಅನ್ನದಾತ ಎನಿಸಿಕೊಳ್ಳಲು ಕೃಷಿ ಹಾಗೂ ತೋಟಗಾರಿಕೆಯತ್ತ ಒಲವು ತೋರಬೇಕು ಎಂದು ಸಲಹೆ ನೀಡಿದರು. ತೋವಿವಿಯ ಡಾ.ಟಿ.ಬಿ.ಅಳ್ಳೊಳ್ಳಿ ತೋಟಗಾರಿಕೆ ಮೇಳದ ವರದಿ ಓದಿದರು. ಈ ಸಂದರ್ಭದಲ್ಲಿ ವಿವಿಧ ಪ್ರಕಟಣೆಗಳ ಬಿಡುಗಡೆ ಜೊತೆಗೆ ಮೇಳಕ್ಕೆ ಧನಸಹಾಯ ಮಾಡಿದ ಪ್ರಾಯೋಜಿತರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಯುಕೆಪಿ ಪ್ರಧಾನ ವ್ಯವಸ್ಥಾಪಕ ವಿಠಲರಾವ್, ನಬಾರ್ಡ್‌ ಪ್ರಾದೇಶಿಕ ಕಚೇರಿಯ ಅಸಿಸ್ಟಂಟ್ ಮ್ಯಾನೇಜರ್ ಸುಪ್ರಿಯಾ ಮೋಹಿನಿ, ತೋವಿವಿಯ ಡೀನ್ ಲಕ್ಷ್ಮೀನಾರಾಯಣ, ಕುಲಸಚಿತ ಮಹಾದೇವ ಮುರಗಿ, ವಿಶ್ರಾಂತ ಕುಲಪತಿ ಡಾ.ಕೆ.ಎಂ.ಇಂದಿರೇಶ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಅನಿತಾ, ಡಾ.ಎನ್.ಕೆ.ಹೆಗಡೆ, ಡಾ.ತಮ್ಮಯ್ಯ, ಬಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಅಜಯಕುಮಾರ ಸರನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫಲಶ್ರೇಷ್ಠ ರೈತರಿಗೆ ಪುರಸ್ಕಾರ: ಎಸ್.ಎಂ.ನಾಗರಾಜ (ಬೆಂಗಳೂರು ಗ್ರಾಮಾಂತರ), ರಾಮಚಂದ್ರ ರೆಡ್ಡಿ (ಬೆಂಗಳೂರು ನಗರ), ಗೀತಾ ರಾಮೇಗೌಡ (ರಾಮನಗರ), ಬಿ.ಎಲ್.ಪಂಕಜ (ತುಮಕೂರು), ಸಂತೋಷ ಸರನಾಡಗೌಡರ (ಕೊಪ್ಪಳ), ಗೋಲಿವಾಸು ಚೌದರಿ (ರಾಯಚೂರು), ಶೇಖರಪ್ಪ ವಿ (ಬಳ್ಳಾರಿ), ಕೆ.ಈರಣ್ಣ (ವಿಜಯನಗರ) ರೈತರನ್ನು ಸನ್ಮಾನಿಸಲಾಯಿತು.