ಮಕ್ಕಳ ಆಟದ ಮೈದಾನ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆದರ್ಶ ಶಾಲೆಯ ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಯಳಂದೂರು
ಮಕ್ಕಳ ಆಟದ ಮೈದಾನ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆದರ್ಶ ಶಾಲೆಯ ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಬಳಿ ಇರುವ ಆದರ್ಶ ಶಾಲೆಯ ಮೈದಾನ ಮಳೆ ಬಂದರೆ ನೀರು ನಿಂತು ಮಕ್ಕಳು ತಿರುಗಾಡಲು ಮತ್ತು ಆಟವಾಡಲು ತೊಂದರೆಯಾಗುತ್ತಿದ್ದರಿಂದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಎರಡೂವರೆ ಲಕ್ಷ ರುಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಕೈಗೆತ್ತಿಕೊಂಡಿತ್ತು.
ಆದರೆ ಇಲಾಖೆ ತಾಂತ್ರಿಕ ಅಭಿಯಂತಕ ಅಧಿಕಾರಿವರ್ಗ ತುಂಡು ಗುತ್ತಿಗೆಯನ್ನು ಗುತ್ತಿಗೆದಾರನಿಗೆ ನೀಡಿ ಕಳಪೆ ಕಾಮಗಾರಿ ನಡೆಸಿದ್ದರಿಂದ ಮಳೆ ಬಂದರೆ ಸಾಕು ಮೈದಾನವೆಲ್ಲ ಕೆರೆಯಂತೆ ನೀರು ನಿಂತು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ.ಮಕ್ಕಳ ಕಣ್ಣೀರು:
ಶಾಲೆಗೆ ಶುಭ್ರವಾಗಿ ಬರುವ ಮಕ್ಕಳು ಈ ಕೊಚ್ಚೆ ಆವರಣದಲ್ಲಿ ತಿರುಗಾಡಿ ಜಾರಿ ಬಿದ್ದು ಬಟ್ಟೆಗಳು ಗಲೀಜು ಹಾಗುವುದರಿಂದ ಶಾಲೆ ವಿದ್ಯಾರ್ಥಿಗಳು ಮನೆಗೆ ಹಿಂತಿರುಗುತ್ತಿದ್ದಾರೆ. ಗುತ್ತಿಗೆ ಪಡೆದ ಗುತ್ತಿಗೆದಾರ ತನ್ನ ಲಾಭಕ್ಕಾಗಿ ಸರ್ಕಾರದಿಂದ ನೀಡುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಬೇಕಾಬಿಟ್ಟಿ ಮಣ್ಣು ಹಾಕಿ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆಸಿ ಕೈ ತೊಳೆದುಕೊಂಡಿದ್ದಾನೆ.ಆದರೆ ಅಧಿಕಾರಿ ವರ್ಗ ಮಾತ್ರ ಗುತ್ತಿಗೆದಾರ ನೀಡುವ ಕಮಿಷನ್ ದುರಾಸೆಗೆ ಕಾಮಗಾರಿಯ ಬಿಲ್ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಸಾಥ್ ನೀಡಿದ್ದಾರೆ.
ಶಾಸಕರಿಗೂ ದೂರು:ಆದರ್ಶ ಶಾಲೆ ಆವರಣದಲ್ಲಿ ಕಾಮಗಾರಿವು ಕಳಪೆ ನಡೆದಿದೆ ಎಂದು ವಿದ್ಯಾರ್ಥಿ ಪೋಷಕರು ಶಾಸಕ ಎ. ಆರ್. ಕೃಷ್ಣಮೂರ್ತಿ ಅವರ ಗಮನಕ್ಕೆ ತಂದಿದ್ದು ಶಾಸಕರು ಕೂಡ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ.
ನಮ್ಮ ಶಾಲೆ ಆವರಣದಲ್ಲಿ ಗುಂಡಿಗಳಿಗೆ ಸರಿಯಾಗಿ ಮಣ್ಣು ಹಾಕಿಲ್ಲ ರೋಲರ್ ಮಿಷನ್ ನಿಂದ ಸಮತಟ್ಟವಾಗಿ ಕೆಲಸ ಮಾಡಿಲ್ಲ. ಇದರಿಂದ ಶಾಲೆ ಆವರಣದಲ್ಲಿ ಮಳೆ ನೀರಿನ ತೊಂದರೆ ಉಂಟಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿ ವರ್ಗ ಸಮಸ್ಯೆ ಬಗೆಹರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ.ನೊಂದ ವಿದ್ಯಾರ್ಥಿಗಳು ಮೆಳ್ಳಹಳ್ಳಿ ಆದರ್ಶ ಶಾಲೆ.
ಮಳೆ ಬಂದಿದ್ದರಿಂದ ರೋಲರ್ ಮಾಡೋದಕ್ಕೆ ಆಗಿಲ್ಲ ಶಾಸಕರು ಈಗಾಗಲೇ ಸೂಚನೆ ನೀಡಿದ್ದಾರೆ ಕಾಮಗಾರಿ ಗುಣಮಟ್ಟ ಮಾಡುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗುವುದು.ಚಂದ್ರಶೇಖರ್ ಎಇಇ, ಜಿಪಂ, ಯಳಂದೂರು.