ಮೇಲುಕೋಟೆ ಡೇರಿ: ಹೈಕೋರ್ಟ್ ಆದೇಶದಂತೆ ಚುನಾವಣಾ ಫಲಿತಾಂಶ ಪ್ರಕಟ

| Published : Feb 13 2024, 12:50 AM IST

ಮೇಲುಕೋಟೆ ಡೇರಿ: ಹೈಕೋರ್ಟ್ ಆದೇಶದಂತೆ ಚುನಾವಣಾ ಫಲಿತಾಂಶ ಪ್ರಕಟ
Share this Article
  • FB
  • TW
  • Linkdin
  • Email

ಸಾರಾಂಶ

ಮೇಲುಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದಿದ್ದ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್-ರೈತಸಂಘ-10, ಜೆಡಿಎಸ್ ಬೆಂಬಲಿತ-2 ಆಯ್ಕೆಯಾಗಿದ್ದು, ಡೇರಿಯ ಆಡಳಿತ ಕಾಂಗ್ರೆಸ್-ರೈತಸಂಘದ ತೆಕ್ಕೆ ಸೇರಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮೇಲುಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸುವಂತೆ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣಾಧಿಕಾರಿ ಆನಂದನಾಯ್ಕ ಚುನಾವಣಾ ಫಲಿತಾಂಶ ಪ್ರಕಟಿಸಿದರು.

ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್-ರೈತಸಂಘ-10, ಜೆಡಿಎಸ್ ಬೆಂಬಲಿತ-2 ಆಯ್ಕೆಯಾಗಿದ್ದು, ಡೇರಿಯ ಆಡಳಿತ ಕಾಂಗ್ರೆಸ್-ರೈತಸಂಘದ ತೆಕ್ಕೆ ಸೇರಿದೆ.

ಡೇರಿ ಆಡಳಿತ ಮಂಡಳಿ ಚುನಾವಣೆಗೆ ಕಳೆದ ಜ.11ರಂದು ನಿಗಧಿಯಾಗಿತ್ತು, ಡೇರಿಯಲ್ಲಿ ಒಟ್ಟು 354 ಷೇರುದಾರರಿದ್ದು ಇವರಲ್ಲಿ 231 ಅರ್ಹ ಮತದಾರರು, 128 ಅನರ್ಹ ಮತದಾರಿದ್ದರು. ಅನರ್ಹ ಮತದಾರರು ಹೈಕೋರ್ಟ್ ಮೊರೆಹೋಗಿ ಮತದಾನದ ಹಕ್ಕುಪಡೆದುಕೊಂಡಿದ್ದರು. ಈ ವೇಳೆ ಅನರ್ಹ ಮತದಾರರ ಮತಗಳನ್ನು ಪ್ರತ್ಯೇಕ ಬ್ಯಾಲೆಟ್ ಬಾಕ್ಸ್‌ನಲ್ಲಿ ಇರಿಸಿ ಚುನಾವಣೆ ಫಲಿತಾಂಶವನ್ನು ಪ್ರಕಟಿಸದಂತೆ ಕೋರ್ಟ್ ಸೂಚನೆ ನೀಡಿತ್ತು.

ಅದರಂತೆ ಕಳೆದ 11 ರಂದು ನಡೆದ ಚುನಾವಣೆಯಲ್ಲಿ ಅರ್ಹರು ಮತ್ತು ಅನರ್ಹರು ಇಬ್ಬರು ಮತಲಾಯಿಸಿದ್ದರು. ಅನರ್ಹರ ಮತಗಳನ್ನು ಪ್ರತ್ಯೇಕ ಬ್ಯಾಲೆಟ್ ಬಾಕ್ಸ್‌ನಲ್ಲಿ ಇರಿಸಲಾಗಿತ್ತು. ಬಳಿಕ ಅನರ್ಹರಿಗೆ ನೀಡಿರುವ ಮತದಾನದ ಹಕ್ಕನ್ನು ರದ್ದುಪಡಿಸುವಂತೆ ಎದುರಾಳಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.1ರಂದು ಹೈಕೋರ್ಟ್ ಅನರ್ಹರ ಮತವನ್ನು ರದ್ದುಪಡಿಸಿ ಅರ್ಹ ಮತದಾರರ ಮತಗಳನ್ನು ಮಾತ್ರ ಎಣಿಕೆ ಮಾಡುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಆನಂದನಾಯ್ಕ ಅವರು ಸೋಮವಾರ ಅರ್ಹ ಮತದಾರ ಚಲಾಹಿಸಿದ್ದ ಮತ ಪೆಟ್ಟಿಗೆಯನ್ನು ಮಾತ್ರ ಹೊಡೆದು ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.

ಕೆ.ರಾಮಚಂದ್ರು, ಅಣ್ಣಯ್ಯ, ಎಂ.ಎಸ್.ಈರೇಗೌಡ, ಎಂ.ಎನ್.ಕುಮಾರ್, ನಟರಾಜು, ಬಲರಾಮ, ಮಂಜುಳ, ಕೆ.ಎನ್.ರಾಮಪ್ರಿಯ, ಲಲಿತ, ಗೀತಾ ಹಾಗೂ ಎಂ.ಎನ್.ನಂದಕುಮಾರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.

ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.

ಮನ್ಮುಲ್ ನಿರ್ದೇಶಕ ಕೆ.ರಾಮಚಂದ್ರ ಮಾತನಾಡಿ, ಡೇರಿ ಚುನಾವಣೆಯಲ್ಲಿ 10 ಮಂದಿ ಕಾಂಗ್ರೆಸ್-ರೈತಸಂಘ ಬೆಂಬಲಿತರು ಆಯ್ಕೆಯಾಗಿದ್ದಾರೆ. ಸಹಕಾರ ಕಾಯ್ದೆ ಡಾ.ವೈದ್ಯನಾಥ್ ವರದಿ 5 ವರ್ಷದಲ್ಲಿ 2 ವಾರ್ಷಿಕ ಮಹಾಸಭೆ ಹಾಜರಾಗಬೇಕು, 180 ದಿನ ಹಾಲು ಹಾಕಬೇಕು, ಸಂಘದಲ್ಲಿ ವ್ಯವಹಾರ ನಡೆಸಿದವರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗುತ್ತಿದೆ. ಅದರಂತೆ ಸಹಕಾರ ಇಲಾಖೆಯ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಾಗಿಲ್ಲ ಎಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್-ರೈತಸಂಘ ಪಕ್ಷದ ಮುಖಂಡರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.