ನವರಾತ್ರಿ ಉತ್ಸವದ ಜೊತೆಗೆ ಚೆಲುವನಾರಾಯಣಸ್ವಾಮಿಯ ಪುರಾಣೋತ್ಸವ ಸಹ ನಡೆಯುತ್ತಿದೆ. 12 ದಿನಗಳ ಕಾಲ ಪ್ರತಿಸಂಜೆ ಉತ್ಸವ ನಡೆದ ನಂತರ ಯದುಗಿರಿ ಮಹಾತ್ಮೆಯನ್ನು ಪಾರಾಯಣ ಮಾಡಲಾಗುತ್ತದೆ. ಕೊನೆ ದಿನ ಮಹಾಶಾತ್ತುಮೊರೈಸಹ ನಡೆಯಲಿರುವುದು ವಿಶೇಷವಾಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿ ನವರಾತ್ರಿ ಮಹೋತ್ಸವದ ಅಂಗವಾಗಿ ಅ.16 ರಿಂದ 19ರವರೆಗೆ ನವರಾತ್ರಿ ಸಂಗೀತ-ನೃತ್ಯೋತ್ಸವ ಆಯೋಜಿಸಲಾಗಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಹರಿಕಥಾ ವಿದ್ವಾಂಸ ಶಿವಾರ ಉಮೇಶ್ ತಂಡದಿಂದ ಭಕ್ತಿಸುಧೆ ಜೊತೆಗೆ ನಾಲ್ಕು ದಿನಗಳ ಕಾಲ ಪ್ರಖ್ಯಾತ ವಿದ್ವಾಂಸರಿಂದ ಸಂಗೀತ-ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಚೆಲುವನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದರು.

ಅ.16 ರಂದು ಬೆಂಗಳೂರಿನ ತಂಡದಿಂದ ದಶಾವತಾರ ರೂಪಕ, ಅ.17ರಂದು ಪಾಂಡವಪುರ ವಿಜಯ ಬಿಇಡಿ ಕಾಲೇಜಿನ 200 ವಿದ್ಯಾರ್ಥಿಗಳಿಂದ ಭಕ್ತಿಪ್ರದಾನ ನೃತ್ಯ ಕಾರ್ಯಕ್ರಮ, ಅ.18ರಂದು ಮ್ಯಾಂಡಲಿನ್ ಮಾಂತ್ರಿಕ ಯು.ಶ್ರೀನಿವಾಸ್ ಶಿಷ್ಯ ಬೆಂಗಳೂರು ವಿಷ್ಣುವೆಂಕಟೇಶ್ ತಂಡದಿಂದ ಮ್ಯಾಂಡಲಿನ್ ಕಚೇರಿ, ಅ.19ರಂದು ಖ್ಯಾತ ವಿದ್ವಾಂಸ ಶಿವಾರ ಉಮೇಶ್ ತಂಡ ಭಕ್ತಿಸುಧೆ ಹರಿಸಲಿದೆ. ಉದ್ಘಾಟಣೆಯ ದಿನ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪ್ರೊ.ಕೃಷ್ಣೇಗೌಡ, ಧರ್ಮೇಂದ್ರ ಭಾಗವಹಿಸಲಿದ್ದಾರೆ ಎಂದರು.

ಯದುಗಿರಿ ಮಹಾತ್ಮೆಯ ಪುರಾಣೋತ್ಸವ:

ನವರಾತ್ರಿ ಉತ್ಸವದ ಜೊತೆಗೆ ಚೆಲುವನಾರಾಯಣಸ್ವಾಮಿಯ ಪುರಾಣೋತ್ಸವ ಸಹ ನಡೆಯುತ್ತಿದೆ. 12 ದಿನಗಳ ಕಾಲ ಪ್ರತಿಸಂಜೆ ಉತ್ಸವ ನಡೆದ ನಂತರ ಯದುಗಿರಿ ಮಹಾತ್ಮೆಯನ್ನು ಪಾರಾಯಣ ಮಾಡಲಾಗುತ್ತದೆ. ಕೊನೆ ದಿನ ಮಹಾಶಾತ್ತುಮೊರೈಸಹ ನಡೆಯಲಿರುವುದು ವಿಶೇಷವಾಗಿದೆ.

ಅದ್ಧೂರಿ ಜಂಬೂಸವಾರಿ ಸಿದ್ಧತೆ:

ಮೇಲುಕೋಟೆಯಲ್ಲಿ ವೈಭವದಿಂದ ವಿಜಯದಶಮಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ವ್ಯವಸ್ಥಾಪನಸಮಿತಿ ಸದಸ್ಯ ಕಾಡೇನಹಳ್ಳಿ ಸತೀಶ್, ಯದುವಂಶದ ಕುಲದೈವ ಚೆಲುವನಾರಾಯಣಸ್ವಾಮಿಯವರ ವಿಜಯದಶಮಿ ಜಂಬೂಸವಾರಿಯನ್ನು ಸ್ಮರಣೀಯವಾಗಿ ಅದ್ಧೂರಿಯಾಗಿ ನಡೆಯುವಂತೆ ಸಿಧ್ದತೆ ಮಾಡಲಾಗುತ್ತಿದೆ ಎಂದರು.

ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಗೆ ಸಾವಿರಾರು ವರ್ಷದಿಂದ ನಡೆದು ಬಂದಂತೆ ಮಹಾರಾಜರ ಅಲಂಕಾರವಿರಲಿದೆ. ವಿಶೇಷ ತೋಮಾಲೆಗಳಿಂದ ಅಲಂಕರಿಸಲಾಗುತ್ತದೆ. ಚೆಲುವನಾರಾಯಣಸ್ವಾಮಿ ಅಶ್ವವಾಹನದಲ್ಲಿ ಬನ್ನೀಪೂಜೆಗೆ ಸಂಜೆ 5.30ಕ್ಕೆ ತೆರಳುವ ವೇಳೆ ದೇವಾಲಯದ ಬಳಿ ಪೊಲೀಸ್ ವಂದನೆಗೆ ಜಿಲ್ಲಾಧಿಕಾರಿಗಳ ಮೂಲಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ವಿಜಯದಶಮಿ ಜಂಬೂಸವಾರಿ ಮಹೋತ್ಸವಕ್ಕೆ ಮೈಸೂರು ಶಿವಶಂಕರ್ ತಂಡದ ಜೈಕನಾಟಕ ಬ್ರಾಸ್ ಬ್ಯಾಂಡ್ ವಿಶೇಷಬ್ಯಾಂಡ್, ಮಂಗಳವಾದ್ಯದ ಜೊತೆಗೆ ಸ್ಕೈಶಾಟ್ ಮುಂತಾದ ಬಾಣಬಿರುಸುಗಳನ್ನೂ ವ್ಯವಸ್ಥೆ ಮಾಡಲಾಗಿದೆ.

ಉತ್ಸವದಲ್ಲಿ ಹುಲಿವಾನದ ಖ್ಯಾತ ತಮಟೆ ಕಲಾವಿದ ಹೆಚ್.ದಿಲೀಪ್ ತಂಡದ ತಮಟೆಮೇಳ, ಯಗ್ಗಡಹಳ್ಳಿ ಹೊನ್ನೇಗೌಡ ತಂಡದ ಯಕ್ಷಗಾನ ಗೊಂಬೆಗಳು ಮತ್ತು ದೊಡ್ಡ ಹನುಮಾನ್ ಕದಲಗೆರೆ ರಾಮೇಗೌಡರ ತಂಡದ ಡೊಳ್ಳುಕುಣಿತ, ಶಿವಣ್ಣಗೌಡರ ಪಟಾಕುಣಿತ ಮತ್ತು ರಾಜಾ-ರಾಣಿಗೊಂಬೆಗಳ ಜಾನಪದ ಕಲಾತಂಡಗಳೂ ಭಾಗವಹಿಸಲಿವೆ.

ನವರಾತ್ರಿಯ ಪೂರ್ತ ಉತ್ಸವಬೀದಿಗಳು ಮತ್ತು ರಾಜಗೋಪುರಕ್ಕೆ ದೀಪಾಲಂಕಾರ ಮಾಡಲಾಗಿದೆ. ಎಲ್ಲಾ ಉತ್ಸವಗಳಿಗೆ ವಿಶೇಷಮಂಗಳವಾದ್ಯ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.