ಚೆಲುವನಾರಾಯಣಸ್ವಾಮಿ ದೇವಾಲಯವನ್ನು ಬೆಳಗಿನ ಐದು ಗಂಟೆಗೆ ಆರಂಭಿಸಿ ಪೂಜಾ ಕೈಂಕರ್ಯಗಳನ್ನು ಮುಕ್ತಾಯಗೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತರಿಗೆ ಅನ್ನದಾನ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

3ನೇ ಶ್ರಾವಣ ಶನಿವಾರ ಮತ್ತು ಭಾನುವಾರದಂದು ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿಯ ದೇವಾಲಯಗಳಿಗೆ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದರ್ಶನ ಪಡೆದರು.

ಎರಡೂ ದಿನಗಳಂದು ಬೆಳಗ್ಗೆಯಿಂದ ರಾತ್ರಿವರೆಗೆ ಸಹಸ್ರಾರು ಭಕ್ತರು ಆಗಮಿಸಿ ಶ್ರಾವಣ ಸಂಭ್ರಮದ ವೇಳೆ ಸ್ವಾಮಿ ದರ್ಶನ ಪಡೆದು ಪುನೀತರಾದರು. ಶನಿವಾರ ಬೆಳಗ್ಗೆ ವಾಹನಗಳ ದಟ್ಟಣೆ ಹೆಚ್ಚಾಗಿ ಪಾರ್ಕಿಂಗ್ ಸ್ಥಳಗಳೆಲ್ಲಾ ತುಂಬಿಹೋದ ಕಾರಣ ಎಸ್.ಇ.ಟಿ.ಪಾಲಿಟೆಕ್ನಿಕ್ ಮೈದಾನದಲ್ಲಿ ಇನ್ಸ್‌ಪೆಕ್ಟರ್ ಆನಂದಗೌಡ ಮಾರ್ಗದರ್ಶನದಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಗ್ ಮಾಡಲಾಗಿತ್ತು.

ಚೆಲುವನಾರಾಯಣಸ್ವಾಮಿ ದೇವಾಲಯವನ್ನು ಬೆಳಗಿನ ಐದು ಗಂಟೆಗೆ ಆರಂಭಿಸಿ ಪೂಜಾ ಕೈಂಕರ್ಯಗಳನ್ನು ಮುಕ್ತಾಯಗೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತರಿಗೆ ಅನ್ನದಾನ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ವಿವಿಧ ಗ್ರಾಮಗಳಿಂದ ಟ್ರ್ಯಾಕ್ಟರ್ ಮೂಲಕ ಬಂದ ದಾನಿಗಳೂ ಸಹ ಭಕ್ತರಿಗೆ ಪ್ರಸಾದವಿನಿಯೋಗ ಮಾಡಿದರು. ಭಾನುವಾರವೂ ದೇವಾಲಯವನ್ನು 6 ಗಂಟೆಗೆ ಆರಂಭಿಸಿ ನಿತ್ಯಪೂಜೆಯನ್ನು ಮುಗಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಇದ್ದರು.

ದೇವರಿಗಾಗಿ ಭಕ್ತರು ಲಕ್ಷಾಂತರರೂ ಕಾಣಿಕೆ ನೀಡಿದರೂ ಚೆಲುವನಾರಾಯಣಸ್ವಾಮಿಗೆ ಈ ವಾರವೂ ತೊಮಾಲೆ ಇರಲಿಲ್ಲ. ದೇವಾಲಯದ ಬಾಗಿಲಿಗೆ ಕನಿಷ್ಠ ತಳಿರು ತೋರಣ ಕಟ್ಟುವ ಕಾರ್ಯವೂ ಆಗಿರಲಿಲ್ಲ.

ಕಳೆದ ವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ವ್ಯವಸ್ಥಾಪನಾ ಸಮಿತಿಯವರು ಮುಂದಿನ ಶ್ರಾವಣ ಶನಿವಾರಗಳಂದು ಚೆಲುವನಾರಾಯಣಸ್ವಾಮಿ ಯೋಗನರಸಿಂಹಸ್ವಾಮಿಗೆ ತೋಮಾಲೆ ಗೋಪುರದ ಬಾಗಿಲಿಗೆ ತಳಿರುತೋರಣ ಕಟ್ಟಲು ನಿರ್ಣಯ ಮಾಡಿ ವ್ಯವಸ್ಥೆ ಮಾಡಲು ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಿದ್ದೇವೆ ಎಂದಿದ್ದರು. ಆದರೆ, ಅಂತಹ ಯಾವುದೇ ವ್ಯವಸ್ಥೆ ಕಂಡು ಬರಲಿಲ್ಲ.

ದೇಗುಲದ ಇಒ ಶೀಲಾ, ದೇವಾಲಯದ ಪಾರುಪತ್ತೇಗಾರರು ಏನಾಗಬೇಕು ಎಂದು ಕಚೇರಿಗೆ ಮನವಿ ನೀಡಿದರೆ ವ್ಯವಸ್ಥೆ ಮಾಡಲು ಅವಕಾಶವಿದೆ. ಆದರೆ, ಧಾರ್ಮಿಕ ಕೈಂಕರ್ಯಗಳ ಉಸ್ತುವಾರಿ ವಹಿಸುವ ಪಾರುಪತ್ತೇಗಾರರು ಶ್ರಾವಣ ಶನಿವಾರಗಳಂದು ದೇವರಿಗೆ ಹಾರ ತರಿಸಲು ಹೇಳದ ಕಾರಣ ಕ್ರಮವಹಿಸಿಲ್ಲ. ಮುಂದಿನ ವಾರ ವ್ಯವಸ್ಥೆ ಮಾಡಲಾಗುತ್ತದೆ ಎಂದರು.