ಪಾಂಡವಪುರ ಖಜಾನೆಯಿಂದ ತಂದ ಅಮೂಲ್ಯ ಮುತ್ತುಮುಡಿ ಹಾಗೂ ಮುತ್ತಗಳ ಹಾರಗಳೊಂದಿಗೆ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿ ಸಂಜೆ ವೈಭವದ ಉತ್ಸವ ನೆರವೇರಿಸಲಾಯಿತು. ಮಹೂರ್ತ ಪಠಣದ ನಂತರ ತೆಪ್ಪಮಂಟಪದಲ್ಲಿ ಶ್ರೀದೇವಿ- ಭೂದೇವಿ ಸಮೇತನಾದ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಭವ್ಯ ಅಲಂಕೃತ ತೆಪ್ಪೋತ್ಸವ ಮಂಟಪದಲ್ಲಿ ಶ್ರೀಚೆಲುವನಾರಾಯಣಸ್ವಾಮಿಗೆ ಪ್ರಥಮ ತೆಪ್ಪೋತ್ಸವ ಶನಿವಾರ ರಾತ್ರಿ ಸಂಭ್ರಮದಿಂದ ನೆರವೇರಿತು.

ಶ್ರೀಪರಾಭವ ಸಂವತ್ಸರದ ವೈರಮುಡಿ ಬ್ರಹ್ಮೋತ್ಸವಕ್ಕೆ ಮುನ್ನುಡಿಯಾಗಿ ಕಲ್ಯಾಣಿಯಲ್ಲಿ ನಡೆದ ಚೆಲುವನ ಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.

ಪಾಂಡವಪುರ ಖಜಾನೆಯಿಂದ ತಂದ ಅಮೂಲ್ಯ ಮುತ್ತುಮುಡಿ ಹಾಗೂ ಮುತ್ತಗಳ ಹಾರಗಳೊಂದಿಗೆ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿ ಸಂಜೆ ವೈಭವದ ಉತ್ಸವ ನೆರವೇರಿಸಲಾಯಿತು. ಮಹೂರ್ತ ಪಠಣದ ನಂತರ ತೆಪ್ಪಮಂಟಪದಲ್ಲಿ ಶ್ರೀದೇವಿ- ಭೂದೇವಿ ಸಮೇತನಾದ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.

ಕಲ್ಯಾಣಿಯಲ್ಲಿ ಮೂರು ಪ್ರದಕ್ಷಿಣೆ ನಡೆಯುವುದರೊಂದಿಗೆ ಪ್ರಥಮ ತೆಪ್ಪೋತ್ಸವ ರಾತ್ರಿ ಮುಕ್ತಾಯವಾಯಿತು. ಮೇಲುಕೋಟೆ ಪೊಲೀಸರು ಭದ್ರತೆ ನೀಡಿದ್ದರು.

ಕಂಗೊಳಿಸಿದ ಸಹಸ್ರದೀಪೋತ್ಸವ ಕೈಂಕರ್ಯ

ಹಲವು ವರ್ಷಗಳ ನಂತರ ಚೆಲುವನಾರಾಯಣಸ್ವಾಮಿ ಪ್ರಥಮ ತೆಪ್ಪೋತ್ಸವದ ವೇಳೆ ಕಲ್ಯಾಣಿಯ ಸೋಪಾನಗಳ ಮೇಲೆ ಹಣತೆಗಳನ್ನು ಹಚ್ಚಿ ದೀಪೋತ್ಸವ ಆಚರಿಸಲಾಯಿತು. ವಿದ್ವಾನ್ ಶ್ರೀರಂಗಂ ರಾಮಪ್ರಿಯ ನೇತೃತ್ವದಲ್ಲಿ ಕೈಂಕರ್ಯ ಪರರು ಹಾಗೂ ನಾಗರಿಕರು ಹಣತೆಗಳನ್ನು ಹಚ್ಚಿ ಚೆಲುವನಾರಾಯಣಸ್ವಾಮಿಗೆ ದೀಪಾರಾಧನೆಯ ಸೇವೆ ಮಾಡಿದರು.