ಪತ್ರಕರ್ತನ ಬರಹ ಮೊನಚು ಕಳೆದುಕೊಳ್ಳಬಾರದು

| Published : Jul 21 2025, 12:00 AM IST

ಸಾರಾಂಶ

ಜಾಪ್ರಭುತ್ವದ ಶಕ್ತಿಶಾಲಿ ಅಂಗವಾಗಿ ಪತ್ರಿಕೋದ್ಯಮ ಬೆಳೆದುನಿಂತಿದೆ.

ಕನ್ನಡಪ್ರಭ ವಾರ್ತೆ ಹುಣಸೂರು ಪತ್ರಕರ್ತನ ಬರಹಗಳು ಮೊನಚುತನ ಕಳದುಕೊಂಡರೆ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ 2025ನೇ ಸಾಲಿನ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವದ ಶಕ್ತಿಶಾಲಿ ಅಂಗವಾಗಿ ಪತ್ರಿಕೋದ್ಯಮ ಬೆಳೆದುನಿಂತಿದೆ. ಪತ್ರಕರ್ತನೊಬ್ಬ ಸದಾಕಾಲ ಎಚ್ಚರದಿಂದಲೇ ಕಾರ್ಯ ನಿರ್ವಹಿಸಬೇಕು. ಅಪ್ಪಿತಪ್ಪಿ ಕ್ಷಣಕಾಲ ಮೈಮರೆತರೆ ನಿಮ್ಮನ್ನು ಬಳಸಿಕೊಂಡವರೇ ಮಾರಿ ಬಿಡುತ್ತಾರೆ. ನಿಮ್ಮ ಲೇಖನ ಮೊನಚುತನ ಕಳಕೊಂಡರೆ ಸಮಾಜ ಅಪಾಯಕ್ಕೆ ಸಿಲುಕುತ್ತದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವು ಕಾರ್ಯ ನಿರ್ವಹಿಸಬೇಕು. ಆಡಳಿತಶಾಹಿ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ಹಿಡಿಯಬೇಕು. ಗ್ಯಾರಂಟಿ ಯೋಜನೆಗಳಿಗಾಗಿ ಈಗಾಗಲೇ ರಾಜ್ಯ ಸರ್ಕಾರ 7.5 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಇದನ್ನು ತೀರಿಸುವವರ್ಯಾರು? ಮಂತ್ರಿಗಳೇ, ಶಾಸಕರೇ ಅಥವಾ ಅಧಿಕಾರಿಗಳೇ? ಜನಸಾಮಾನ್ಯರು ದುಡಿದು ತೀರಿಸಬೇಕಾಗುತ್ತದೆ. ಇದನ್ನು ಪ್ರಶ್ನಿಸುವ, ಖಂಡಿಸುವ ಸಾಮಾಜಿಕ ಕಾಳಜಿ ಪತ್ರಕರ್ತರಲ್ಲಿ ಇರಬೇಕಿದೆ ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ. ರಾಘವೇಂದ್ರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ತಾಪಂ ಇಒ ಕೆ. ಹೊಂಗಯ್ಯ, ಜಿಲ್ಲಾ ಸಂಘದ ಗ್ರಾಮಾಂತರ ಉಪಾಧ್ಯಕ್ಷ ಎಚ್‌.ಎಸ್‌. ವೆಂಕಟಪ್ಪ, ಗ್ರಾಮಾಂತರ ಕಾರ್ಯದರ್ಶಿ ದಾ.ರಾ. ಮಹೇಶ್, ಕಾರ್ಯಕಾರಿ ಸಮಿತಿ ಸದಸ್ಯ ಹನಗೋಡು ನಟರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್ ಮೊದಲಾದವರು ಇದ್ದರು.ಈ ವೇಳೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಪತ್ರಕರ್ತರಾದ ಹನಗೋಡು ದೀಪು ಮತ್ತು ರಘು ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಎಚ್.ಎಸ್. ಸಚ್ಚಿತ್ ತಮ್ಮ ತಂದೆಯವರ ಸ್ಮರಣಾರ್ಥ ನೀಡುವ ಎಚ್.ಆರ್. ಶ್ರೀನಿವಾಸ್ ಗ್ರಾಮೀಣಾಭಿವೃದ್ಧಿ ಲೇಖನ ಪ್ರಶಸ್ತಿಯನ್ನು ಕೆ.ಆರ್. ನಗರ ತಾಲೂಕಿನ ವಿನಯ್ ದೊಡ್ಡಕೊಪ್ಪಲು ಅವರಿಗೆ ಪ್ರದಾನ ಮಾಡಲಾಯಿತು.