ಜೆಡಿಎಸ್ ತೊರೆದು ಬಿಜೆಪಿ ಸೇರಿದ ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ

| Published : Dec 01 2024, 01:33 AM IST

ಸಾರಾಂಶ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಎಸ್.ಎಲ್. ಘೊಟ್ನೇಕರ ಅವರಿಗೆ ಬಿಜೆಪಿಯ ಶಾಲು ಹೊದೆಸಿ, ಪಕ್ಷದ ಧ್ವಜ ನೀಡಿ,ಪಕ್ಷಕ್ಕೆ ಸ್ವಾಗತಿಸಿದರು.

ಶಿರಸಿ: ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಲ್. ಘೋಟ್ನೇಕರ ನಗರದ ದೀನ ದಯಾಳ ಭವನದಲ್ಲಿ ಶನಿವಾರ ಜೆಡಿಎಸ್ ತೊರೆದು ತಮ್ಮ ನೂರಾರು ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಎಸ್.ಎಲ್. ಘೊಟ್ನೇಕರ ಅವರಿಗೆ ಬಿಜೆಪಿಯ ಶಾಲು ಹೊದೆಸಿ, ಪಕ್ಷದ ಧ್ವಜ ನೀಡಿ,ಪಕ್ಷಕ್ಕೆ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕಾಗೇರಿ, ಎಸ್.ಎಲ್. ಘೊಟ್ನೇಕರ ಬಿಜೆಪಿ ಸೇರ್ಪಡೆಗೊಂಡಿರುವುದು ಹಳಿಯಾಳ ಕ್ಷೇತ್ರ, ನಮ್ಮ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಬಹಳ ದೊಡ್ಡ ಶಕ್ತಿ ಬಂದಿದೆ. ಎಸ್.ಎಲ್. ಘೊಟ್ನೇಕರ ಹಾಗೂ ಸುನಿಲ ಹೆಗಡೆ ಜೋಡೆತ್ತಿನಂತೆ ಕೆಲಸ ಮಾಡಿ, ಹಳಿಯಾಳ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಮಲ ಅರಳಿಸುತ್ತಾರೆ ಎಂಬ ವಿಶ್ವಾಸವಿದೆ. ಹಿರಿಯರು ಹಾಗೂ ಯುವಕರ ಪಡೆಯು ಬಿಜೆಪಿ ಸೇರ್ಪಡೆಗೊಂಡಿರುವುದು ಬಹಳ ದೊಡ್ಡ ಶಕ್ತಿ ಬಂದಿದೆ ಎಂದರು.ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಬಿಜೆಪಿ ಸರ್ವಸ್ಪರ್ಶಿಯಾಗಿದ್ದು, ಹಿಂದುಳಿದ ಬುಡಕಟ್ಟು ಜನಾಂಗದ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿದೆ. ಅಲ್ಲದೇ ಹಿಂದುಳಿದ ಬುಡಕಟ್ಟು ಜನಾಂಗದ ಮಹಿಳೆಯಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಹಕಾರಿ ಹಾಗೂ ರಾಜಕೀಯ ರಂಗದಲ್ಲಿ ಅತ್ಯಂತ ಹಿರಿತನದ ವ್ಯಕ್ತಿ ಬಿಜೆಪಿ ಸೇರ್ಪಡೆಗೊಂಡಿರುವುದು ಇನ್ನಷ್ಟು ಬಲ ಬಂದಿದೆ ಎಂದರು.ಘೊಟ್ನೇಕರ ಮಾತನಾಡಿ, ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದೆ. ಈಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂದಿದ್ದೇನೆ. ನಾನು ಬಿಜೆಪಿಗೆ ಸೇರ್ಪಡೆಯಾಗುವುದನ್ನು ಸುನೀಲ ಹೆಗಡೆ ಅವರೂ ಸ್ವಾಗತಿಸಿದ್ದಾರೆ. ಸುನೀಲ ಹೆಗಡೆ ಮತ್ತು ನಾನು ಹಳಿಯಾಳ, ಜೋಯಿಡಾ, ದಾಂಡೇಲಿ ಭಾಗಗಳಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಿವೇಕಾನಂದ ವೈದ್ಯ, ಶಿವಾಜಿ ನರಸಾನಿ, ಆರ್.ಡಿ. ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಿತ್ಯಾನಂದ ಗಾಂವ್ಕರ, ರಾಜೇಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ ನಾಯ್ಕ, ಗುರುಪ್ರಸಾದ ಹೆಗಡೆ, ಶ್ರೀಕಾಂತ ಬಳ್ಳಾರಿ, ನಂದನ ಬೋರ್ಕರ್, ರಮೇಶ ನಾಯ್ಕ, ಎಂ.ಜಿ. ಭಟ್ಟ, ಈಶ್ವರ ನಾಯ್ಕ ಮತ್ತಿತರರು ಇದ್ದರು.ಸುನೀಲ ಹೆಗಡೆ ಗೈರುಹಳಿಯಾಳದ ಮಾಜಿ ಶಾಸಕ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದ್ದ ಸುನೀಲ ಹೆಗಡೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಗೈರಾಗಿದ್ದರು. ಹಾಗಾಗಿ ಸುನೀಲ ಹೆಗಡೆ ಮುಂದಿನ ನಡೆಯನ್ನು ಕಾದು ನೋಡಬೇಕಿದೆ.

ಜವಾಬ್ದಾರಿ ನನ್ನದುಕಸ್ತೂರಿರಂಗನ್ ವರದಿ ನೆಪದಲ್ಲಿ ಜನರನ್ನು ತಪ್ಪು ದಾರಿಗೆ ತಳ್ಳುವ ಜನರಿಂದ ಎಚ್ಚರಿಕೆಯಿಂದ ಇರಬೇಕು. ಅರಣ್ಯ ಭೂಮಿ ಅತಿಕ್ರಮ ಹೆಸರಿನಲ್ಲಿ ಜನರಿಗೆ ಸುಳ್ಳು ಹೇಳುತ್ತಿರುವವರಿಂದ ದೂರ ಉಳಿಯಿರಿ. ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡು ಜನರನ್ನು ರಕ್ಷಣೆ ಮಾಡಲು ಕ್ಷೇತ್ರದ ಸಂಸದನಾಗಿ ಶ್ರಮಿಸುತ್ತೇನೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಹಳಿಯಾಳದ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅತಿವೃಷ್ಟಿಯಿಂದ ಜೋಳ, ಭತ್ತ, ಕಬ್ಬು ಹಾಳಾಗಿದೆ. ಆದರೆ ಪರಿಹಾರ ಮಾತ್ರ ನೀಡುತ್ತಿಲ್ಲ. ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿ ಸುಲಿಗೆ ಮಾಡಲಾಗುತ್ತಿದೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ವಾಗ್ದಾಳಿ ನಡೆಸಿದರು.