ಅಭಿಪ್ರಾಯ ಭೇದ ನಮ್ಮೊಳಗೆ ಸಹಜ. ಆದರೆ ನನ್ನ ಸುದೀರ್ಘ ಅವಧಿಯಲ್ಲಿ ಅಂತಹ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿ ಕ್ರಮ ಕೈಗೊಳ್ಳುತ್ತಾ ಬಂದಿದ್ದೇನೆ ಎಂದು ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ತಿಳಿಸಿದರು.

ಶಿರಸಿ: ಸಹಕಾರಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಸದಸ್ಯರ ಕಲ್ಯಾಣ ಸದುದ್ದೇಶ ಇಂದು ಆದ್ಯತೆಯ ವಿಷಯವಾಗಿ ಪರಿಗಣಿತವಾಗದೆ ರಾಜಕೀಯಪ್ರೇರಿತ ನಿರಾಧಾರ ಆರೋಪ, ವೈಯಕ್ತಿಕ ದ್ವೇಷ ಹಾಗೂ ವಿವಿಧ ಸ್ವರೂಪ ಬಂಡವಾಳಶಾಹಿಗಳ ಲಾಭಕ್ಕೆ ತುತ್ತಾಗಿ ನಲುಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಹೇಳಿದರು.

ಮಂಗಳವಾರ ನಗರದ ಟಿಆರ್‌ಸಿ ಸಭಾಭವನದಲ್ಲಿ ನಡೆದ ಟಿಆರ್‌ಸಿಯ ೧೧೩ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿಪ್ರಾಯ ಭೇದ ನಮ್ಮೊಳಗೆ ಸಹಜ. ಆದರೆ ನನ್ನ ಸುದೀರ್ಘ ಅವಧಿಯಲ್ಲಿ ಅಂತಹ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿ ಕ್ರಮ ಕೈಗೊಳ್ಳುತ್ತಾ ಬಂದಿದ್ದೇನೆ ಎಂದರು.

ನಮ್ಮ ಸಂಘದ ಅಭಿವೃದ್ಧಿ ಮತ್ತು ಇತರ ಸಹಕಾರ ಸಂಘದಲ್ಲಿ ತಮ್ಮ ವೈಫಲ್ಯವನ್ನು ಮರೆಮಾಚಿಕೊಳ್ಳಲು ಕೆಲವರು ನನ್ನ ಮೇಲೆ ಗಂಭೀರ ಸ್ವರೂಪದ ಆಪಾದನೆ ಮಾಡುತ್ತಾ ಅಪಪ್ರಚಾರದಲ್ಲಿ ತೊಡಗಿರುವುದರಿಂದ ನಮ್ಮ ಸದಸ್ಯರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಬಗ್ಗೆ ಸದಸ್ಯರು ಎಚ್ಚರಿಕೆ ವಹಿಸಬೇಕು ಎಂದರು.ಅನಗತ್ಯ ನಿರಾಧಾರ ವೈಯಕ್ತಿಕ ದ್ವೇಷದಿಂದ ನಮ್ಮ ಮೇಲೆ ವಿನಾಕಾರಣ ಪ್ರಕರಣ ದಾಖಲಿಸುವುದು, ನನ್ನ ವೈಯಕ್ತಿಕ ಖಾತೆ ಮಾಹಿತಿಗಳನ್ನು ಮೂರನೇ ವ್ಯಕ್ತಿಗಳಿಗೆ ನೀಡುವುದು ಹಾಗೂ ನ್ಯಾಯಾಲಯದಲ್ಲಿ ದಾವೆ ಹೂಡುವುದು, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ನನಗೆ ತೊಂದರೆ ಉಂಟುಮಾಡುವುದಕ್ಕೆ ಆ ಸಂಘದ ಆರ್ಥಿಕ ಸಂಪನ್ಮೂಲ ಬಳಕೆ ಮಾಡಿಕೊಳ್ಳುತ್ತಿರುವುದು ಕೂಡ ಅವ್ಯವಹಾರವೇ ಆಗಿರುತ್ತದೆ ಎಂಬುದನ್ನು ಸಹಕಾರಿ ಕ್ಷೇತ್ರದವರು ಅರಿತುಕೊಳ್ಳಬೇಕೆಂದರು.ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಹೆಗಡೆ ಕಡವೆ ಹಾಗೂ ಟಿಆರ್‌ಸಿ ನಿರ್ದೇಶಕರು ಹಾಗೂ ಪತ್ರಕರ್ತ ನಾಗರಾಜ ಮತ್ತಿಗಾರ ಹಾಗೂ ಬೆಟ್ಟ ಭೂಮಿ ಪುಸ್ತಕದ ಲೇಖಕರು ಗಣೇಶ ಮುರೇಗಾರ ಪುಸ್ತಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ನಾಗರಾಜ ಮತ್ತಿಗಾರ ಹಾಗೂ ಗಣೇಶ ಮುರೇಗಾರ ಅವರನ್ನು ಗೌರವಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ ೧೦ರೊಳಗಿನ ರ‍್ಯಾಂಕ್ ಪಡೆದ ನಮ್ಮ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.ಸಭೆಯಲ್ಲಿ ಟಿಆರ್‌ಸಿ ಉಪಾಧ್ಯಕ್ಷರಾದ ವಿಶ್ವಾಸ ಪುಂಡಲೀಕ ಬಲ್ಸೆ ಚವತ್ತಿ ಹಾಗೂ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಟಿಆರ್‌ಸಿ ಮುಖ್ಯಕಾರ್ಯನಿರ್ವಾಹಕ ಕಿರಣ ಶ್ರೀಪಾದ ಭಟ್ ಮಾವಿನಕೊಪ್ಪ ವಾರ್ಷಿಕ ವರದಿ ವಾಚಿಸಿದರು. ಜಿ.ಜಿ. ಹೆಗಡೆ ಕುರುವಣಿಗೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಮಹಿಳಾ ಸಿಬ್ಬಂದಿ ಪ್ರಾರ್ಥಿಸಿದರು. ನಿರ್ದೇಶಕರಾದ ವಿ.ಜಿ. ಹೆಗಡೆ ಸೋಮ್ನಳ್ಳಿ ವಂದಿಸಿದರು.