ಸಾರಾಂಶ
ಪಿಡಬ್ಲ್ಯುಡಿ ಎಂಜಿನಿಯರ್ ರವಿ ನಾಯ್ಕಗೆ ತರಾಟೆ/ ಸದಸ್ಯೆಯರಿಂದ ಉಪಾಧ್ಯಕ್ಷರ ತರಾಟೆಕನ್ನಡಪ್ರಭ ವಾರ್ತೆ ಹೊಸಪೇಟೆ
ಹೊಸಪೇಟೆ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಒಕ್ಕೂರಲಿನಿಂದ ಸಮ್ಮತಿ ಸೂಚಿಸಿದರು.ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ನಗರ ವಾಪ್ತಿಯಲ್ಲಿ ಪ್ರಸ್ತುತ 2.5 ಲಕ್ಷ ಜನಸಂಖ್ಯೆ ಇದೆ. ಮುಂದಿನ ವರ್ಷ 3 ಲಕ್ಷ ಗಡಿ ದಾಟಲಿದೆ. ವಿಸ್ತೀರ್ಣ, ಆದಾಯ ಸೇರಿದಂತೆ ಎಲ್ಲದರಲ್ಲೂ ಅರ್ಹತೆ ಹೊಂದಿರುವ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಹಿಸಿ ಕೊಡಲು ಸರ್ವ ಸದಸ್ಯರು ತೀರ್ಮಾನಿಸಿದರು.
ಮಹಾನಗರ ಪಾಲಿಕೆಗಾಗಿ ಹತ್ತಿರದ ಊರುಗಳನ್ನು ಸೇರಿಸಿಕೊಳ್ಳಬಹುದು. ಆದರೆ ಅವರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಲ್ಲಿ ಯಾವುದೇ ಅಡತಡೆಗಳು ಇರುವುದಿಲ್ಲ ಎಂದು ಪೌರಾಯುಕ್ತ ಶಿವುಕುಮಾರ್ ಯರಗುಡಿ ಸಭೆಗೆ ತಿಳಿಸಿದರು.ಪಿಡಬ್ಲ್ಯೂಡಿ ಅಧಿಕಾರಿ ರವಿ ನಾಯ್ಕಗೆ ತರಾಟೆ:
ನಗರಸಭೆ ವಾಪ್ತಿಯಲ್ಲಿ ನಡೆಯುವ ಯಾವುದೇ ಕಾಮಗಾರಿಗಳನ್ನು ನಡೆಸುವ ಮುನ್ನ ನಗರಸಭೆಯಿಂದ ಎನ್ಓಸಿಯನ್ನು ಪಡೆಯಬೇಕು. ಆದರೆ, ನಗರಸಭೆ ಸದಸ್ಯರ ಗಮನಕ್ಕೆ ಇಲ್ಲದೇ ಪಿಡಬ್ಲ್ಯುಡಿ ಇಲಾಖೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿಗಳು ನಡೆದಿವೆ. ಇದು ವಾರ್ಡ್ ಸದಸ್ಯರಿಗೆ ಗಮನಕ್ಕೆ ಇರುವುದಿಲ್ಲಎಂದುಪಿಡಬ್ಲ್ಯುಡಿ ಎಇಇ ರವಿ ನಾಯ್ಕ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಅಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, "ನಗರಸಭೆ ಆಸ್ತಿಯನ್ನು ನೀವು ಹಾಳು ಮಾಡುತ್ತಿದ್ದಿರಿ, ಅಪೂರ್ಣ ಕಾಮಗಾರಿಗಳನ್ನು ನಡೆಸುತ್ತಿದ್ದಿರಿ, ಇದಕ್ಕೆ ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ಕಟ್ಡಡ ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಎಇಇ ರವಿ ನಾಯ್ಕ ಅವರು, ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ, ಎಲೆಕ್ಟ್ರಿಕ್ ಕೆಲಸ ಮಾತ್ರ ಬಾಕಿ ಇದೆ. ಇದನ್ನು ಶೀಘ್ರ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರ ಮಾಡಲಾಗುವುದು ಎಂದರು.
ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ಸಾಕ್ಷಿಯಾಗಿದೆ. ಕೂಡಲೇ ನಗರದ ಪ್ರಮುಖ ರಸ್ತೆಗಳಲ್ಲಿ ವೈಜ್ಞಾನಿಕವಾಗಿ ರೋಡ್ ಬ್ರೇಕರ್ ಗಳನ್ನು ಪಿಡಬ್ಲ್ಯುಡಿ ಅಳವಡಿಸಬೇಕು ಎಂದು ಅಧ್ಯಕ್ಷ ರೂಪೇಶ್ ಕುಮಾರ್ ಸೂಚಿಸಿದರು.ವಿದ್ಯುತ್ ಕಂಬ ಬದಲಿಸಿ:
ವಿವಿಧ ವಾರ್ಡ್‌ಗಳಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಶೀಘ್ರ ಬದಲಿಸಬೇಕು. ಜೊತೆಗೆ ಸಾರ್ವಜನಿಕರಿಗೆ ಕಂಟಕ ಪ್ರಾಯವಾಗಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಸ್ಥಳಾಂತರ ಮಾಡಬೇಕು ಎಂದು ಸದಸ್ಯರಾದ ಕೆ. ಗೌಸ್ ಹಾಗೂ ಮುನ್ನಿಕಾಸಿಂ ಸೇರಿದಂತೆ ಇತರರು ಜೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು.ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಮನೆಗಳಿಗೆ ಜೆಸ್ಕಾಂ ಮೀಟರ್ ಅಳವಡಿಸಿ ಕೊಡುತ್ತಿಲ್ಲ. ಇದಕ್ಕೆ ತಾಂತ್ರಿಕ ಕಾರಣಗಳನ್ನು ಹೇಳುತ್ತಿದೆ. ಮನೆ ನಿರ್ಮಾಣ ಮಾಡಿಕೊಂಡವರು ಕತ್ತಲು ಮನೆಯಲ್ಲಿ ಇರಬೇಕಾ? ಅವರಿಗೆ ಕೂಡಲೇ ಮೀಟರ್ ಅಳವಡಿಸಿಕೊಳ್ಳಲು ಅನುವು ಮಾಡಿಕೊಡಿ ಎಂದು ಅಧ್ಯಕ್ಷ ರೂಪೇಶ್ ಕುಮಾರ್ ತಾಕೀತು ಮಾಡಿದರು.
ಸ್ಲಂ ಮನೆಗಳಿಗೆ ಹಣ ಕೊಡಿ:ಸ್ಲಂ ಬೋರ್ಡ್‌ಗಳಿಂದ ಮಂಜೂರಾಗಿರುವ ಮನೆಗಳು ಅಪೂರ್ಣಗೊಂಡಿವೆ. ಇದಕ್ಕಾಗಿ ಸಾರ್ವಜನಿಕರು, ಸಾಲಸೋಲ ಮಾಡಿ ಬೋರ್ಡ್ ಗೆ ಡಿಡಿ ಹಣವನ್ನು ಪಾವತಿಸಿದ್ದಾರೆ. ಮನೆಯೂ ಇಲ್ಲ, ಇತ್ತ ಹಣವೂ ಇಲ್ಲ ಎಂದು ಸದಸ್ಯರು ಸ್ಲಂ ಬೋರ್ಡ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕಾಗಿ ಶೀಘ್ರವೇ ಸ್ಲಂ ಬೋರ್ಡ್ ಅಧಿಕಾರಿಗಳೊಂದಿಗೆ ಪ್ರತೇಕ ಸಭೆ ಆಯೋಜಿಸಲಾಗುವುದು ಎಂದು ಅಧ್ಯಕ್ಷ ರೂಪೇಶ್ ತಿಳಿಸಿದರು.
ನಗರದ ಮಟನ್ ಮಾರ್ಕೆಟ್ ಕಟ್ಟಲು ಈಗಾಗಲೇ ನಗರಸಭೆ ಒಂದು ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಈಗ ಶಾಸಕ ಎಚ್. ಆರ್. ಗವಿಯಪ್ಪನವರು ಈ ಕಾಮಗಾರಿ ನಿಲ್ಲಿಸಲು ತಿಳಿಸಿದ್ದಾರೆ. ಡಿಎಂಎಫ್ ಹಾಗೂ ಕೆಎಂಇಆರ್‌ಸಿ ಅನುದಾನ ಬೇರೆ ಕಡೆ ವರ್ಗಾಯಿಸಬಹುದು. ನಗರಸಭೆ ಅನುದಾನ ಅಭಿವೃದ್ಧಿಗೆ ಬಳಕೆ ಮಾಡಬೇಕು, ಈ ಕಾಮಗಾರಿ ಹಿಂದಿನ ಆದೇಶದಂತೆ ನಡೆಸಬೇಕು ಎಂದು ಸದಸ್ಯೆ ಮುಮ್ತಾಜ್ ಬೇಗಂ ಕೋರಿದರು. ಇದಕ್ಕೆ ಸರ್ವ ಸದಸ್ಯರು ಬೆಂಬಲ ಸೂಚಿಸಿದರು.ಉಪಾಧ್ಯಕ್ಷ ರಮೇಶ್ ಗುಪ್ತಾ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ ಮತ್ತಿತರರಿದ್ದರು.
ಮಹಿಳಾ ಸದಸ್ಯರಿಂದ ಉಪಾಧ್ಯಕ್ಷರಿಗೆ ತರಾಟೆ:ಸದಸ್ಯೆಯರಿಗೂ ಸಾಮಾನ್ಯ ಸಭೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದು ಸದಸ್ಯೆ ಮುನ್ನಿ ಖಾಸಿಂ ಕೋರಿದರು. ಈ ವೇಳೆ ಉಪಾಧ್ಯಕ್ಷರು, ಸಭೆ ಮುಗಿಯುತ್ತಿದೆ, ಏನೂ ಮಾತನಾಡುತ್ತೀರಿ? ಎನ್ನುತ್ತಲೇ ಮಹಿಳಾ ಸದಸ್ಯೆಯರು ಒಗ್ಗೂಡಿ ಉಪಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಎಚ್ಚೆತ್ತುಕೊಂಡ ಅವರು, "ಅಕ್ಕಂದೀರಾ, ಬಾಯಿ ತಪ್ಪಿನಿಂದ ಹೀಗಾಗಿದೆ. ವಿಷಾದಿಸುವೆ " ಎನ್ನುತ್ತಲೇ ಎಲ್ಲರೂ ನಗು ನಗುತ್ತಲೇ ಸಭೆಯಿಂದ ಹೊರ ಬಂದರು.