ಪುರಸಭೆಗೆ ಸೇರಿದ ಆಸ್ತಿಗಳು ಒತ್ತುವರಿಯಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪುರಸಭೆ ಸದಸ್ಯ ಎ.ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಸಂತೆ ಹಾಗೂ ದಿನವಹಿ ಸುಂಕದ ಹರಾಜು ಪ್ರಕ್ರಿಯೆ ವಿಳಂಬವಾಗಿರುವುದರಿಂದ ಪುರಸಭೆಗೆ ಸುಮಾರು ₹3 ಲಕ್ಷ ಆದಾಯ ನಷ್ಟವಾಗಿದೆ. ಕೂಡಲೇ ಟೆಂಡರ್ ಕರೆದು ಹರಾಜು ನಡೆಸಬೇಕು ಎಂದು ಒತ್ತಾಯಿಸಿದರು. ಕಸ ಸಂಗ್ರಹಣೆಗೆ ಬಳಸುವ ಎರಡು ಟಿಪ್ಪರ್ ವಾಹನಗಳು ದುರಸ್ತಿಗೆ ಬಂದಿದ್ದರೂ ಅವುಗಳನ್ನು ಸರಿಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಅಗತ್ಯವಿದ್ದರೆ ಸದಸ್ಯರೇ ದುರಸ್ತಿ ವೆಚ್ಚ ಭರಿಸಲು ಸಿದ್ಧವಿದ್ದೇವೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಪುರಸಭೆಗೆ ಸೇರಿದ ಆಸ್ತಿಗಳು ಒತ್ತುವರಿಯಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪುರಸಭೆ ಸದಸ್ಯ ಎ.ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ವೇಲಾಪುರಿ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ಮಾತನಾಡಿ, ಹೊಳೆಬೀದಿಯ ಕೋಳಿ ಅಂಗಡಿ ಹಿಂಭಾಗದಲ್ಲಿರುವ ಸುಮಾರು 1,200 ಚದರ ಅಡಿ ಪುರಸಭೆ ಜಾಗ ಸಂಪೂರ್ಣ ಒತ್ತುವರಿಯಾಗಿದ್ದು, ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ವಶಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪುರಸಭೆಯ ಆಡಳಿತ ದಿಕ್ಕುತಪ್ಪಿದ್ದು, ಸಾರ್ವಜನಿಕರಿಗೆ ನಿರೀಕ್ಷಿತ ಸೇವೆಗಳು ದೊರೆಯುತ್ತಿಲ್ಲ ಎಂದರು.ಸದಸ್ಯ ಜಗದೀಶ್ ಮಾತನಾಡಿ, ಸಂತೆ ಹಾಗೂ ದಿನವಹಿ ಸುಂಕದ ಹರಾಜು ಪ್ರಕ್ರಿಯೆ ವಿಳಂಬವಾಗಿರುವುದರಿಂದ ಪುರಸಭೆಗೆ ಸುಮಾರು ₹3 ಲಕ್ಷ ಆದಾಯ ನಷ್ಟವಾಗಿದೆ. ಕೂಡಲೇ ಟೆಂಡರ್ ಕರೆದು ಹರಾಜು ನಡೆಸಬೇಕು. ಇತ್ತೀಚೆಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗುತ್ತಿದ್ದು, ನೀರು ಪೂರೈಕೆಯ ಅವಧಿಯನ್ನು ಒಂದು ಗಂಟೆ ಹೆಚ್ಚಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಕಸ ಸಂಗ್ರಹಣೆಗೆ ಬಳಸುವ ಎರಡು ಟಿಪ್ಪರ್ ವಾಹನಗಳು ದುರಸ್ತಿಗೆ ಬಂದಿದ್ದರೂ ಅವುಗಳನ್ನು ಸರಿಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಅಗತ್ಯವಿದ್ದರೆ ಸದಸ್ಯರೇ ದುರಸ್ತಿ ವೆಚ್ಚ ಭರಿಸಲು ಸಿದ್ಧವಿದ್ದೇವೆ ಎಂದರು.ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಸದಸ್ಯರ ಅವಧಿ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲಕ್ಕೂ ಮುನ್ನ ಗುಂಡಿಬಿದ್ದ ರಸ್ತೆಗಳು ಹಾಗೂ ಹಾಳಾಗಿರುವ ಸ್ಲ್ಯಾಬ್‌ಗಳನ್ನು ದುರಸ್ತಿಗೊಳಿಸಬೇಕು. ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಔಷಧಿ ಸಿಂಪಡಣೆ ಮಾಡುವಂತೆ ಸೂಚಿಸಿದರು.ಸದಸ್ಯ ಶೈಲೇಶ್ ಮಾತನಾಡಿ, ಹೊಳೆಬೀದಿಯಲ್ಲಿರುವ ಪುರಸಭೆ ಆಸ್ತಿಗೆ ಸಂಬಂಧಿಸಿದಂತೆ ಪೆಟ್ಟಿಗೆ ಅಂಗಡಿ ತೆರವುಗೊಳಿಸಿರುವ ಕ್ರಮದ ಬಗ್ಗೆ ಪ್ರಶ್ನಿಸಿ ಸುಮಾರು 4,800 ಚದರ ಅಡಿ ಜಾಗವು 1962ರಿಂದಲೂ ಪುರಸಭೆ ಆಸ್ತಿಯಾಗಿದ್ದು, ಅದನ್ನು ಅತಿಕ್ರಮಣ ಎಂದು ಪರಿಗಣಿಸಿರುವುದು ಅರ್ಥವಾಗುತ್ತಿಲ್ಲ. ಮೊದಲು ಪುರಸಭೆಯ ಎಲ್ಲ ಆಸ್ತಿಗಳನ್ನು ಗುರುತಿಸುವ ಕಾರ್ಯ ನಡೆಯಬೇಕು ಎಂದು ಆಗ್ರಹಿಸಿದರು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಅಕ್ರಂ ಶರೀಫ್, ಪುರಸಭೆ ಆಸ್ತಿಯನ್ನು ಯಾರು ಒತ್ತುವರಿ ಮಾಡಿಕೊಂಡಿದ್ದರೂ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸದಸ್ಯರ ಸಲಹೆ ಮತ್ತು ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು. ತಾಪಂ ಮತ್ತು ಪುರಸಭೆ ಆಸ್ತಿಗಳ ಗಡಿಗಳನ್ನು ಅಳತೆ ಮಾಡಿ ಸ್ಪಷ್ಟವಾಗಿ ಗುರುತಿಸಬೇಕು. ಹೊಳೆಬೀದಿಯ ಜಾಗದ ವಿವಾದದ ಕುರಿತು ಮಾಹಿತಿ ಇಲ್ಲದಿದ್ದು, ತಾವು ಸ್ವತಃ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶೀಘ್ರದಲ್ಲೇ 23 ವಾರ್ಡ್‌ಗಳಲ್ಲೂ ಔಷಧಿ ಸಿಂಪಡಣೆ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾಂವಿ ಸೇರಿದಂತೆ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.