ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವುದರ ಕುರಿತು ಕೂಡಲೇ ಸರ್ವೇ ಮಾಡಿಸಿ ಅವುಗಳನ್ನು ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದಾಗ್ಯೂ ತಾವುಗಳು ಏಕೆ ತೆರವುಗೊಳಿಸುತ್ತಿಲ್ಲ ಎಂಬುದರ ಕುರಿತು ಸಭೆಗೆ ತಿಳಿಸುವಂತೆ ನಗರಸಭೆ ಸದಸ್ಯರು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ಈ ವಿಷಯ ಕುರಿತು ನಗರಸಭೆ ಸದಸ್ಯರು ಪೌರಾಯುಕ್ತರನ್ನು ಪ್ರಶ್ನಿಸಿದಾಗ, ಈಗಾಗಲೇ ಸರ್ವೇ ಕಾರ್ಯವು ಪ್ರಾರಂಭವಾಗಿದೆ ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರೂ, ಕೆಲವು ಸದಸ್ಯರು ಇದನ್ನು ಮತ್ತೆ ಮತ್ತೆ ಪ್ರಶ್ನಿಸಿದಾದರೂ, ಕೆಲವು ಸದಸ್ಯರು ಕೆರೆಗಳ ಸರ್ವೇ ಪೂರ್ಣಗೊಳ್ಳುವವರೆಗೆ ಯಾವುದೇ ಅನುಮೋದನೆ ನೀಡಬಾರದು ಎಂದು ಆಗ್ರಹಿಸಿದರು. ಕೆರೆಗಳನ್ನು ಉಳಿಸುವ ಸಲುವಾಗಿ, ಕೆಲವು ಸದಸ್ಯರು ಕೆರೆಗಳ ಬಳಿಯ ಜಮೀನನ್ನು ಬಫರ್ ಜೋನ್ ಮಾಡಿ ತಂತಿ ಬೇಲಿ ಹಾಕುವಂತೆ ಸಲಹೆ ನೀಡಿದರು.
ಸಾಮಾನ್ಯ ಸಭೆಯಲ್ಲಿ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿ, ನಿರ್ಣಯ ತೆಗೆದುಕೊಳ್ಳಲಾಯಿತು. ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಅನುದಾನದ ಕಾಮಗಾರಿ ಟೆಂಡರ್‌ಗಳಿಗೆ ಅನುಮೋದನೆ ನೀಡಲಾಯಿತು. ಇದರಿಂದ ನಗರದಲ್ಲಿ ಹೊಸ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಹಿಂದಿನ ಕಮಿಟಿ ನಡುವಳಿ ಹಾಗೂ ಕಳೆದ ತಿಂಗಳಿನ ಜಮಾ ಖರ್ಚು ಪತ್ರಿಕೆಗೆ ಮಂಜೂರಾತಿ ನೀಡಲಾಯಿತು.ನಗರದ ಹೊರವಲಯಕ್ಕೆ ಸ್ವಾಗತ ಕಮಾನ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ನಗರಸಭೆಯ ಉಪಾಧ್ಯಕ್ಷರು ಗೈರಾಗಿದ್ದರು. ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.ರನ್ನ ಉತ್ಸವದ ಹೆಸರಲ್ಲಿ ಹಣ ಸುಲಿಗೆ ಆರೋಪ:
ನಗರಸಭೆಯ ಸಾಮಾನ್ಯ ಸಭೆಯಲ್ಲಿ ರನ್ನ ಉತ್ಸವದ ಆಚರಣೆ ಕುರಿತು ಭಾರೀ ಚರ್ಚೆ ನಡೆದಿದೆ. ನಗರಸಭೆ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ ಮಾತನಾಡಿ, ರನ್ನ ಉತ್ಸವದಲ್ಲಿ ಹಣ ಸುಲಿಗೆ ನಡೆಯುತ್ತಿದೆ ಎಂದು ಆರೋಪಿಸಿದರು. ಕಳೆದ ಹಲವು ವರ್ಷಗಳಿಂದ ರನ್ನ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಬಾರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಲಹೆ ನೀಡಿದರು. ಆದರೆ ವರ್ತಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿರುವುದಾಗಿ ಹೇಳಿದರು.ನಗರದ ವರ್ತಕರ ಸಂಘವು ನಗರಸಭೆ ಸದಸ್ಯರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ಈಗಂತೂ ವ್ಯಾಪಾರ ವಹಿವಾಟು ಚನ್ನಾಗಿ ಇಲ್ಲದಿರುವಾಗ, ಉತ್ಸವಕ್ಕೆ ಸಾವಿರಾರು ರು. ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಗುರುಪಾದ ಕುಳಲಿ ಸಭೆಯಲ್ಲಿ ಘರ್ಜಿಸಿದರು.
ಈ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಈ ವಿಷಯ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಗ್ರಾಸವಾಗಿದೆ. ನಗರಸಭೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ವರ್ತಕರ ಮತ್ತು ಇತರರ ಮೇಲೆ ಹಣ ಸುಲಿಗೆಗೆ ಒತ್ತಡ ಹಾಕಬಾರದು ಎಂದು ಎಲ್ಲ ಸದಸ್ಯರ ಪರವಾಗಿ ನಗರ ಸಭೆ ಅಧ್ಯಕ್ಷರ ಮತ್ತು ಪೌರಾಯುಕ್ತರ ಗಮನ ಸೆಳೆದರು. ಇದರ ಮಧ್ಯೆ ಜಮಖಂಡಿ ಉಪ ವಿಭಾಗದ ಅಧಿಕಾರಿಗಳಿಗೆ ಪೋನ್ ಮೂಲಕ ರನ್ನ ಉತ್ಸವದ ಸಭೆಯಲ್ಲಿ ಆಗುವ ಚರ್ಚೆಯ ಬಗ್ಗೆ ವಿವರಿಸಿದರು.