ಸಾರಾಂಶ
ಹೊಸಪೇಟೆ: ನಗರದಲ್ಲಿ ನಗರಸಭೆ ಆಸ್ತಿ ಹಾಗೂ ಸರ್ಕಾರಿ ಜಾಗ ಹಾಗೂ ಉದ್ಯಾನಗಳನ್ನು ಗುರುತಿಸಿ ತಂತಿ ಬೇಲಿ ಹಾಕಿ ಸಂರಕ್ಷಣೆ ಮಾಡಬೇಕಿದೆ. ಸರ್ಕಾರಿ ಜಾಗಗಳನ್ನು ಗುರುತಿಸಿ ಅವುಗಳನ್ನು ಕಾಪಾಡಿಕೊಳ್ಳುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ನಗರಸಭೆ ಆಸ್ತಿಯೇ ಉಳಿಯುವುದಿಲ್ಲ. ಎಲ್ಲವೂ ಒತ್ತುವರಿ ಆಗಲಿದೆ. ಈ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ನಗರಸಭೆಯಲ್ಲಿ ಗುರುವಾರ ಅಧ್ಯಕ್ಷೆ ಎ. ಲತಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ 34ನೇ ವಾರ್ಡ್‌ನ ಸದಸ್ಯೆ ಲತಾ ಸಂತೋಷ್ ವಿಷಯ ಪ್ರಸ್ತಾಪಿಸಿ, ಸರ್ಕಾರಿ ಹಾಗೂ ನಗರಸಭೆ ಜಾಗಗಳನ್ನು ಗುರುತಿಸಬೇಕಿದೆ. ಇನ್ನು ಉದ್ಯಾನವನಗಳನ್ನು ಕೂಡ ಉಳಿಸಬೇಕಿದೆ. ಈ ಬಗ್ಗೆ 2023ರ ಜುಲೈ 24ರಂದು ನಡೆದ ಸಾಮಾನ್ಯ ಸಭೆಯಲ್ಲೂ ಚರ್ಚಿಸಲಾಗಿದೆ. ಹೀಗಿದ್ದರೂ ಇದುವರೆಗೆ ನಗರಸಭೆ ಆಸ್ತಿಗಳನ್ನು ಗುರುತಿಸುವ ಕೆಲಸ ಆಗಿಲ್ಲ. ಈ ಬಗ್ಗೆ ವಿಸ್ತೃತ ವರದಿಯೇ ಇನ್ನೂ ಸಂಬಂಧಿಸಿದ ಅಧಿಕಾರಿಗಳು ನಗರಸಭೆಗೆ ಸಲ್ಲಿಸಿಲ್ಲ ಎಂದರು.ಇದಕ್ಕೆ ನಗರಸಭೆ ಸರ್ವ ಸದಸ್ಯರು ಧ್ವನಿಗೂಡಿಸಿ ಕೂಡಲೇ ನಗರಸಭೆ ಆಸ್ತಿ ಗುರುತಿಸುವ ಕೆಲಸ ಆಗಬೇಕು. ಈ ಕಾರ್ಯಕ್ಕಾಗಿ ತಂತಿಬೇಲಿ ಹಾಕಲು ಎಂಜಿನಿಯರ್ ಸೆಕ್ಷನ್‌ಗೆ ಸೂಚಿಸಬೇಕು ಎಂದರು.
ಈ ವೇಳೆ ಸದಸ್ಯ ಎಲ್.ಎಸ್. ಆನಂದ ಮಾತನಾಡಿ, ಎಂಜಿನಿಯರ್ ಸೆಕ್ಷನ್‌ನವರು ತಂತಿಬೇಲಿ ಹಾಕಲು ಹೋಗಿದ್ದರು. ಆದರೆ, ಇದುವರೆಗೆ ನಗರಸಭೆ ಕಂದಾಯ ಇಲಾಖೆಯಿಂದ ಸಹಕಾರವೇ ದೊರೆತಿಲ್ಲ. ಬಿಲ್ ಕಲೆಕ್ಟರ್‌ಗಳು ಇದುವರೆಗೆ ಸರ್ಕಾರಿ ಜಾಗಗಳನ್ನೇ ಗುರುತಿಸಲು ಮುಂದಾಗಿಲ್ಲ. ಈ ಹಿಂದಿನ ಪೌರಾಯುಕ್ತರ ಬಳಿ ಎಂಜಿನಿಯರ್ ವಿಭಾಗದ ಅಧಿಕಾರಿಗಳೇ ಬಿಲ್ ಕಲೆಕ್ಟರ್‌ಗಳು ಈ ವಿಷಯದಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಅವಲತ್ತುಕೊಂಡಿದ್ದಾರೆ. ಈ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಮೊದಲು ಸರ್ಕಾರಿ ಜಾಗ ಉಳಿಸಲು ಬಿಲ್ ಕಲೆಕ್ಟರ್‌ಗಳು ಸಹಕಾರ ನೀಡಬೇಕು ಎಂದರು.ಇದಕ್ಕೆ ಸದಸ್ಯರಾದ ಕೆ. ಗೌಸ್, ಗುಜ್ಜಲ ರಾಘವೇಂದ್ರ, ಶೇಕ್ಷಾವಲಿ, ತಾರಿಹಳ್ಳಿ ಜಂಬುನಾಥ, ಜೀವರತ್ನಂ, ಹನುಮಂತಪ್ಪ(ಬುಜ್ಜಿ), ಮುನ್ನಿಕಾಸಿಂ ಕೂಡ ಬೆಂಬಲ ಸೂಚಿಸಿದರು. ಸರ್ಕಾರಿ ಜಮೀನು ಉಳಿಸುವ ಕಾರ್ಯ ಆಗಲಿ ಎಂದು ಆಗ್ರಹಿಸಿದರು.
ಪೌರಾಯುಕ್ತ ಎರಗುಡಿ ಶಿವಕುಮಾರ ಮಾತನಾಡಿ, ಕಂದಾಯ ಇಲಾಖೆಯವರು 40 ಜಾಗಗಳನ್ನು ಸದ್ಯ ಗುರುತಿಸಿದ್ದಾರೆ. ನಗರಸಭೆ ಆಸ್ತಿ ನಗರದಲ್ಲಿ ಸಾಕಷ್ಟಿದೆ. ಈಗ ಶೇ. 25ರಷ್ಟು ಮಾತ್ರ ಗುರುತಿಸಿದ್ದಾರೆ. ಇನ್ನೂ ಉಳಿದ ಜಾಗ ಗುರುತಿಸುವ ಕಾರ್ಯಕ್ಕೆ ಬಿಲ್ ಕಲೆಕ್ಟರ್‌ಗಳನ್ನು ನಿಯೋಜನೆ ಮಾಡಲಾಗುವುದು. ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಹಾಕಲಾಗುವುದು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದರೆ ಕಠಿಣ ಕ್ರಮಕ್ಕೂ ಸೂಚಿಸಲಾಗುವುದು. ಒಟ್ಟಾರೆಯಾಗಿ ನಗರಸಭೆ ಆಸ್ತಿ ಉಳಿಸಿ ತಂತಿಬೇಲಿ ಹಾಕಲಾಗುವುದು ಎಂದರು.ಶಾಸಕರ ಪತ್ರದ ಬಗ್ಗೆ ಬಿಸಿ ಬಿಸಿ ಚರ್ಚೆ: ಶಾಸಕ ಎಚ್.ಆರ್. ಗವಿಯಪ್ಪ ಅವರು 2023ರ ಅಕ್ಟೋಬರ್ 7ರಂದು ನಗರಸಭೆಗೆ ಪತ್ರ ಬರೆದು ಎಂ. ಲೋಕರಾಜ್ ಎಂಬವರು ಬಡವರಾಗಿದ್ದು, ಮೀರ್‌ಆಲಂ ಟಾಕೀಸ್ ಬಳಿ ನಂದಿನಿ ಪಾರ್ಲರ್ ಹಾಕಿಕೊಂಡು ಸ್ವಂತ ಉದ್ಯೋಗ ಕೈಗೊಳ್ಳಲು ಅನುಮತಿ ನೀಡಬೇಕು ಎಂದು ಬರೆದಿರುವ ಪತ್ರದ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ನಾಂದಿಯಾಯಿತು. ಬಿಜೆಪಿ ಸದಸ್ಯರು ಈ ಬಗ್ಗೆ ಪರಿಶೀಲನೆ ನಡೆಸಿ, ಶಾಸಕರ ಜತೆಗೆ ಚರ್ಚಿಸಿ ಕ್ರಮ ವಹಿಸೋಣ ಎಂದು ಪಟ್ಟುಹಿಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಶಾಸಕರ ಬಗ್ಗೆ ಗೌರವ ಇರಲಿ, ಅವರು ಕೋರಿದ್ದಾರೆ. ನಾವು ಪರವಾನಗಿ ನೀಡೋಣ ಎಂದು ಒತ್ತಾಯಿಸಿದರು.
ಆಗ ಬಿಜೆಪಿ ಸದಸ್ಯ ತಾರಿಹಳ್ಳಿ ಜಂಬುನಾಥ ಇದಕ್ಕೆ ಕೋರಂಗೆ ಹಾಕೋಣ, ಧ್ವನಿಮತದೊಂದಿಗೆ ಪಾಸು ಮಾಡೋಣ. ಶಾಸಕರು ನಗರಸಭೆ ಸದಸ್ಯರ ಜತೆಗೆ ಸಭೆ ನಡೆಸಲಿ, ನಮ್ಮ ಜತೆಗೂ ಚರ್ಚಿಸಲಿ ಎಂದರು. ಆಗ ಪ್ರತಿಯಾಗಿ ಕಾಂಗ್ರೆಸ್ ಸದಸ್ಯ ಗುಜ್ಜಲ ರಾಘವೇಂದ್ರ ನಾವು ಕೂಡ ಸಿದ್ಧರಿದ್ದೇವೆ. ಈ ಬಗ್ಗೆ ಮತ ಹಾಕೋಣ ಎಂದರು. ಆಗ ಕೆಲ ಸದಸ್ಯರು ಈ ಬಗ್ಗೆ ಧ್ವನಿಮತಕ್ಕೆ ಹಾಕುವುದು ಬೇಡ. ಶಾಸಕರ ಜತೆಗೆ ಅಧ್ಯಕ್ಷರು ಚರ್ಚಿಸಿ ನಿರ್ಣಯಿಸಲಿ ಎಂದರು. ಇದಕ್ಕೆ ಸ್ಥಾಯಿ ಸಮಿತಿ ಸದಸ್ಯ ಸಂತೋಷ್ ಕುಮಾರ ಕೂಡ ಸಮ್ಮತಿಸೂಚಿಸಿದರು. ಆಗ ಪೌರಾಯುಕ್ತರು ಅಧ್ಯಕ್ಷರು ಶಾಸಕರ ಜತೆಗೆ ಚರ್ಚಿಸಿ ಹದಿನೈದು ದಿನದೊಳಗೆ ನಿರ್ಣಯಿಸಲಿದ್ದಾರೆ ಎಂದರು.ನಗರದಲ್ಲಿ ವಾಲ್ಮೀಕಿ ಸಮಾಜ ದೊಡ್ಡ ಸಮಾಜವಾಗಿದ್ದು, ಈಗಿರುವ ರುದ್ರಭೂಮಿ ಏಳುಕೇರಿಗಳಿಗೆ ಚಿಕ್ಕದಾಗುತ್ತದೆ. ಹಾಗಾಗಿ ನಗರಸಭೆಯಿಂದ 10 ಎಕರೆ ಜಾಗ ನೀಡಬೇಕು ಎಂದು ಒತ್ತಾಯಿಸಿದರು. ಆಗ ಸದಸ್ಯರಾದ ರಾಘವೇಂದ್ರ ಗುಜ್ಜಲ, ತಾರಿಹಳ್ಳಿ ಜಂಬುನಾಥ, ಬುಜ್ಜಿ ಸೇರಿದಂತೆ ಉಳಿದ ಸದಸ್ಯರು ಕೂಡ ಧ್ವನಿಗೂಡಿಸಿದರು. ಪೌರಾಯುಕ್ತರು ಈ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಿದರು.
ನಗರದಲ್ಲಿ ಶೌಚಾಲಯಗಳ ನಿರ್ಮಾಣ, ವಿವಿಧ ಅಭಿವೃದ್ಧಿ ಕಾಮಗಾರಿಗಳು, ನಗರಸಭೆ ಮಳಿಗೆಗಳ ಬಾಡಿಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.