ಮುಖ್ಯ ರಸ್ತೆ ಅತಿಕ್ರಮಣ ತಡೆಗೆ ಸದಸ್ಯರ ಆಗ್ರಹ

| Published : Sep 21 2024, 01:50 AM IST

ಸಾರಾಂಶ

ವಾಹನ ಸಂಚಾರಕ್ಕೆ, ವಾಹನ ನಿಲುಗಡೆಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಸಂಡೂರು: ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಪುರಸಭೆಯ ನೂತನ ಅಧ್ಯಕ್ಷ ಎಸ್. ಸಿರಾಜ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿಯ ಪಾದಚಾರಿ ರಸ್ತೆ, ರಸ್ತೆ, ಉದ್ಯಾನ ಅತಿಕ್ರಮಣ ತಡೆ, ಕೊಳವೆಬಾವಿಗಳಿಗೆ ಪೈಪ್‌ಲೈನ್ ಅಳವಡಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.ಸದಸ್ಯ ಕೆ. ಹರೀಶ್ ಮುಂತಾದ ಸದಸ್ಯರು ಮಾತನಾಡಿ, ಪಟ್ಟಣದ ವಿಜಯ ವೃತ್ತದಿಂದ ಎಪಿಎಂಸಿವರೆಗಿನ ಮುಖ್ಯ ರಸ್ತೆ ಪಕ್ಕದ ಪಾದಚಾರಿ ಮಾರ್ಗವಲ್ಲದೆ, ರಸ್ತೆಯ ಅರ್ಧ ಭಾಗವನ್ನು ತಳ್ಳುಗಾಡಿಗಳು, ಹಣ್ಣು ತರಕಾರಿ ಅಂಗಡಿಗಳು ಅತಿಕ್ರಮಿಸುತ್ತಿವೆ. ಇದರಿಂದ ವಾಹನ ಸಂಚಾರಕ್ಕೆ, ವಾಹನ ನಿಲುಗಡೆಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಪಾದಚಾರಿ ರಸ್ತೆ ಮತ್ತು ರಸ್ತೆಯ ಅತಿಕ್ರಮಣ ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸದಸ್ಯ ಬ್ರಹ್ಮಯ್ಯ ಮಾತನಾಡಿ, ಏರ್‌ಟೆಲ್ ಮುಂದಿನ ಪಾರ್ಕ್‌ನಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಪಾರ್ಕ್‌ಗಳು ಒತ್ತುವರಿಯಾಗುತ್ತಿದೆ. ಅತಿಕ್ರಮಣ ತಡೆಯದಿದ್ದರೆ, ಪಾರ್ಕ್‌ಗಳ ಜಾಗದಲ್ಲಿ ಮನೆಗಳು ತಲೆ ಎತ್ತಲಿವೆ. ಖಾಲಿ ಇರುವ ಜಾಗಗಳಲ್ಲಿ ಗಿಡ ನೆಡಲು ತಿಳಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಅಧಿಕಾರಿ ಅನ್ನಪೂರ್ಣ, ಈಗಾಗಲೇ ಪಾರ್ಕ್‌ನಲ್ಲಿ ವಾಹನ ನಿಲ್ಲಿಸುವವರಿಗೆ ನೋಟಿಸ್ ನೀಡಿದ್ದೇವೆ ಎಂದರು. ನಂತರ ಮಾತನಾಡಿದ ಅಧ್ಯಕ್ಷರು, ನಾನೂ ಬರುತ್ತೇನೆ. ವಾರ್ಡ್ ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ವಾಹನಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳೋಣ ಎಂದರು.

ಸದಸ್ಯರಾದ ಅಬ್ದುಲ್ ಮುನಾಫ್, ಕೆ.ಹರೀಶ್, ಎ.ಪೊಂಪಣ್ಣ, ಸಂತೋಷ್ ಮುಂತಾದವರು ಮಾತನಾಡಿ, ಹಲವೆಡೆ ಕೊಳವೆಬಾವಿ ತೋಡಿಸಲಾಗಿದೆ. ಆದರೆ, ಪೈಪ್‌ಲೈನ್ ಮಾಡಿಲ್ಲ. ೬ನೇ ವಾರ್ಡಿನಲ್ಲಿ ನೀರು ಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಮಾಡಿಲ್ಲ ಎಂದು ಆರೋಪಿಸಿದರು.

ಅಧ್ಯಕ್ಷರು ಮಾತನಾಡಿ, ಕೊಳವೆಬಾವಿಗಳು ಇರುವ ಕಡೆಗಳಲ್ಲಿ ಪೈಪ್‌ಲೈನ್ ಅಳವಡಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಪೂರ್ಣವಾಗುವವರೆಗೆ, ಬಾಡಿಗೆ ಆಧಾರದ ಮೇಲೆ ಟೌನ್ ಹಾಲನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನೀಡುವುದು, ಪುರಸಭೆ ನಿಧಿ, ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಶ್ರವಣ ಸಾಧನ, ತ್ರಿಚಕ್ರವಾಹನ ನೀಡುವ ವಿಷಯವನ್ನು ಸರ್ವ ಸದಸ್ಯರ ಗಮನಕ್ಕೆ ತರುವುದು, ವಿವಿಧ ಟೆಂಡರ್‌ಗಳಿಗೆ ಅನುಮೋದನೆ ನೀಡುವುದು, ಕೆಲ ಟೆಂಡರ್‌ಗಳನ್ನು ಮರು ಟೆಂಡರ್ ಮಾಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ರಾಜ್ಯ ಪೌರ ನೌಕರರ ಸಂಘದ ಮುಖಂಡರು ಅಧ್ಯಕ್ಷರಿಗೆ ಮನವಿ ಸಲ್ಲಿಸಿ, ಪೌರ ಕಾರ್ಮಿಕರ ಕುಂದು ಕೊರತೆಗಳನ್ನು ಚರ್ಚಿಸಲು ಪೌರ ಕಾರ್ಮಿಕರ ಯೂನಿಯನ್ ಕಚೇರಿಯನ್ನು ಹೊಸದಾಗಿ ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷೆ ಎಂ.ಸಿ. ಲತಾ, ಮುಖ್ಯಾಧಿಕಾರಿ ಕೆ. ಜಯಣ್ಣ, ಸದಸ್ಯರಾದ ಅನಿತಾ ವಸಂತಕುಮಾರ್, ಈರೇಶ್ ಶಿಂಧೆ, ಎಲ್.ಹೆಚ್. ಶಿವಕುಮಾರ್, ಕೆ.ವಿ. ಸುರೇಶ್, ಅಶೋಕ್, ಹನುಮೇಶ, ಮಾಳಗಿ ರಾಮಪ್ಪ, ದುರ್ಗಮ್ಮ, ಆಶಾ ನರಸಿಂಹ, ಯರೆಮ್ಮ, ಲಕ್ಷ್ಮಿದೇವಿ, ದೀಪಾ, ತಿಪ್ಪಮ್ಮ ಮುಂತಾದ ಸದಸ್ಯರು, ಅಧಿಕಾರಿಗಳಾದ ಅರುಣ್ ಪಾಟೀಲ್, ಹಗರಿ ಪ್ರಭುರಾಜ್, ಭಾಸ್ಕರ್, ಸಿಬ್ಬಂದಿ ಉಪಸ್ಥಿತರಿದ್ದರು.