ಸಾರಾಂಶ
ಪುರಸಭೆಗೆ ಬಂದಿರುವ ಅನುದಾನದಲ್ಲಿ ಶಾಸಕರಿಗ ಕ್ರಿಯಾ ಯೋಜನೆ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ಕಾಂಗ್ರೆಸ್ ಸದಸ್ಯರು ಹಟ ಹಿಡಿದರು. ಇದಕ್ಕೆ ಒಪ್ಪದ ಶಾಸಕರು ಹಾಗೂ ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆದರು. ಇದರಿಂದ ಸಾಮಾನ್ಯ ಸಭೆ ರದ್ದಾಯಿತು.
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಇಲ್ಲಿನ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನಕ್ಕೆ, ಶಾಸಕರ ನೇತೃತ್ವದಲ್ಲಿ ಕ್ರಿಯಾ ಯೋಜನೆ ರೂಪಿಸಲು ಕರೆಯಲಾಗಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ, ಸದಸ್ಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಕೃಷ್ಣನಾಯ್ಕ ಸಭಾತ್ಯಾಗ ಮಾಡಿದ ಘಟನೆ ಜರುಗಿದೆ.ಸಭೆ ಆರಂಭವಾಗುತ್ತಿದಂತೆಯೇ ಸದಸ್ಯರು ಕಳೆದ 8 ತಿಂಗಳ ಹಿಂದಿನ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಬೇಕು ಎಂದು ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ, ಚುನಾವಣೆಗಳು ಬಂದಿದ್ದ ಕಾರಣ ಸಾಧ್ಯವಾಗಿಲ್ಲ, ಮುಂದಿನ ಸಭೆಯಲ್ಲಿ ಮಂಡಿಸುತ್ತೇವೆ ಎಂದು ಹೇಳಿದಾಗ, ಸದಸ್ಯರು ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿದ್ದ ಶಾಸಕ ಕೃಷ್ಣನಾಯ್ಕ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿನ ವಿವಿಧ ಕಡೆಗಳಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ 15ನೇ ಹಣಕಾಸು ಯೋಜನೆಯಲ್ಲಿ ₹1.52 ಕೋಟಿ ಜತೆಗೆ ಎಸ್‌ಎಫ್‌ಸಿ ಅಡಿಯಲ್ಲಿ ₹58 ಲಕ್ಷ ಅನುದಾನ ಬಂದಿದೆ. ಈ ಕುರಿತು ನಿಯಮಗಳ ಪ್ರಕಾರ ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ಹೇಳಿದಾಗ, ನಮ್ಮ ಪುರಸಭೆಗೆ ಬಂದಿರುವ ಅನುದಾನದಲ್ಲಿ ನೀವು ಕ್ರಿಯಾ ಯೋಜನೆ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ಕಾಂಗ್ರೆಸ್ ಸದಸ್ಯರು ಹಟ ಹಿಡಿದರು. ಇದಕ್ಕೆ ಒಪ್ಪದ ಶಾಸಕರು ಹಾಗೂ ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆದರು. ಇದರಿಂದ ಸಾಮಾನ್ಯ ಸಭೆ ರದ್ದಾಯಿತು.15ನೇ ಹಣಕಾಸು ಯೋಜನೆಯಲ್ಲಿ ₹1.52 ಕೋಟಿ, ಎಸ್‌ಎಫ್‌ಸಿ ಅಡಿಯಲ್ಲಿ ₹58 ಲಕ್ಷ ಅನುದನ ಬಂದಿದೆ. ಈ ಕುರಿತು ಕ್ರಿಯಾ ಯೋಜನೆ ಮಾಡಲು ಸಾಮಾನ್ಯ ಸಭೆ ಕರೆಯಲಾಗಿತ್ತು. ಸದಸ್ಯರು ಶಾಸಕರ ನಡುವೆ ಒಪ್ಪಿಗೆ ಇಲ್ಲದ ಕಾರಣ ಸಭೆ ರದ್ದಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ಹೇಳಿದರು.