ಬೇರುಮಟ್ಟದ ಸಂಘಟನೆಗಾಗಿ ಸದಸ್ಯತ್ವ ಅಭಿಯಾನ: ನಿಖಿಲ್‌ ಕುಮಾರಸ್ವಾಮಿ

| Published : Sep 05 2024, 12:36 AM IST

ಬೇರುಮಟ್ಟದ ಸಂಘಟನೆಗಾಗಿ ಸದಸ್ಯತ್ವ ಅಭಿಯಾನ: ನಿಖಿಲ್‌ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಾದ್ಯಂತ ಜೆಡಿಎಸ್ ಬೇರುಮಟ್ಟದಲ್ಲಿ ಸಂಘಟನೆ ಮಾಡಲು ಪಕ್ಷದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ.

ಕೊಪ್ಪಳದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಉತ್ತರ ಕರ್ನಾಟಕದಲ್ಲಿಯೂ ಜೆಡಿಎಸ್‌ಗೆ ಬೆಂಬಲವಿದೆ

ನಿಷ್ಠಾವಂತ ಕಾರ್ಯಕರ್ತರಿಂದ ಪಕ್ಷ ಸಂಘಟನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯಾದ್ಯಂತ ಜೆಡಿಎಸ್ ಬೇರುಮಟ್ಟದಲ್ಲಿ ಸಂಘಟನೆ ಮಾಡಲು ಪಕ್ಷದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಶಿವಶಾಂತ ಮಂಗಲಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಬೂತ್‌ನಲ್ಲಿರುವ ಎಲ್ಲ ಜಾತಿ, ಸಮುದಾಯಗಳನ್ನೊಳಗೊಂಡು ಪಕ್ಷ ಸಂಘಟನೆ ಮಾಡಬೇಕಾಗಿದೆ. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದಕ್ಕಾಗಿ ನಾವೆಲ್ಲರೂ ಶಕ್ತಿಮೀರಿ ಶ್ರಮಿಸಿ, ಸದಸ್ಯತ್ವ ಅಭಿಯಾನದ ಮೂಲಕ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ರಾಜ್ಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಇದ್ದಾರೆ. ಅವರನ್ನು ಸಂಘಟಿಸುವ ಪ್ರಯತ್ನ ಆಗಬೇಕಾಗಿದೆ. ಅದರಲ್ಲೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅವುಗಳನ್ನು ಮನವರಿಕೆ ಮಾಡಿ, ಹೆಚ್ಚು ಸದಸ್ಯತ್ವ ನೋಂದಾಯಿಸಬೇಕಾಗಿದೆ ಎಂದರು.

ರಾಜ್ಯದಲ್ಲಿ ವರ್ಗಾವಣೆ ದಂಧೆ ಮಿತಿಮೀರಿದೆ. ಅದಕ್ಕೆ ಕಡಿವಾಣ ಹಾಕಬೇಕಾಗಿದ್ದ ಸರ್ಕಾರವೇ ಅದರಲ್ಲಿ ಪಾಲುದಾರನಾಗಿದೆ ಎಂದು ಆರೋಪಿಸಿದರು. ಇನ್ನು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಭಾಗಿಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಜೆಡಿಎಸ್ ಮತ್ತು ಬಿಜೆಪಿ ಹೋರಾಟ ಮಾಡುತ್ತಿದೆ. ಹಾಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ದ್ವೇಷ ಇದೆಯಂದಲ್ಲ ಎಂದರು.

ದೇಶದಾದ್ಯಂತ ಗ್ಯಾರಂಟಿ ಯೋಜನೆಗಳು ಏನಾಗಿವೆ ಎನ್ನುವುದು ಗೊತ್ತಾಗುತ್ತಿದೆ. ರಾಜ್ಯದಲ್ಲಿಯೂ ಪರಿಣಾಮಕಾರಿ ಜಾರಿಯಾಗಿಲ್ಲ. ರಾಜ್ಯದಲ್ಲಿ 144 ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿಯೇ ಮುಂದಿದೆ. ಹಾಗೊಂದು ವೇಳೆ ಈಗಲೇ ಚುನಾವಣೆ ನಡೆದರೆ ಮೈತ್ರಿಗೆ 170-180 ಕ್ಷೇತ್ರಗಳಲ್ಲಿ ಜಯ ಸಿಗಲಿದೆ ಎಂದರು.

ದೇವೇಗೌಡರು ಮತ್ತು ಕುಮಾರಸ್ವಾಮಿ ಎಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಅವರು ಎಲ್ಲ ಜಾತಿ ಮತ್ತು ಧರ್ಮದವರನ್ನು ಪ್ರೀತಿಸುತ್ತಾರೆ. ಅವರ ನಾಯಕತ್ವದಲ್ಲಿ ಪಕ್ಷ ಮತ್ತೆ ಬಲಗೊಳ್ಳಲಿದೆ ಎಂದರು.

ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿರುವುದು ಲೋಕಸಭಾ ಚುನಾವಣೆಯಲ್ಲಿಯೇ ಗೊತ್ತಾಗಿದೆ ಎಂದರು.

ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಮಾತನಾಡಿ, ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕಿಂತ ದೇಶದ ರಾಜಕಾರಣಕ್ಕೆ ಹೋಗಿದ್ದಾರೆ. ಅವರು ಅಲ್ಲಿಯೇ ಇರಲಿ, ಮುಂದೊಂದು ದಿನ ಅವರು ದೇಶದ ಪ್ರಧಾನಿಯಾಗಲಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಆಗಲಿದ್ದಾರೆ ಎಂದರು.

ರಾಜ್ಯದಲ್ಲಿ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಸರ್ಕಾರದಲ್ಲಿ ದೊಡ್ಡ ದೊಡ್ಡ ಹಗರಣಗಳೇ ನಡೆಯುತ್ತಿವೆ. ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ರಾಜ್ಯದಲ್ಲಿ ಉತ್ತಮ ಆಡಳಿತ ಇತ್ತು. ರೈತರ ₹25 ಸಾವಿರ ಸಾಲ ಮನ್ನಾ ಮಾಡಿದ್ದರು ಎಂದರು.

ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು. ಹೀಗಾಗಿ, ಸಿವಿಸಿ ಅವರು ಸಜ್ಜಾಗಬೇಕು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಪಕ್ಷ ಸಂಘಟನೆಗೆ ಇಂದಿನಿಂದಲೇ ಕಾರ್ಯಗತವಾಗಬೇಕಾಗಿದೆ. ಹಳ್ಳಿ ಹಳ್ಳಿ ಸುತ್ತಿ ಸಂಘಟನೆ ಮಾಡಬೇಕಾಗಿದೆ. ಸದಸ್ಯತ್ವ ಅಭಿಯಾನವನ್ನು ಪ್ರತಿಯೊಬ್ಬ ಕಾರ್ಯಕರ್ತ ಗಂಭೀರವಾಗಿ ಪರಿಗಣಿಸಿ, ನೋಂದಣಿ ಮಾಡಬೇಕಾಗಿದೆ ಎಂದರು.

ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ, ಶಾಸಕ ಸಿ.ವಿ. ಸುರೇಶಬಾಬು ಮಾತನಾಡಿದರು.

ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ನೇಮಿರಾಜ ನಾಯಕ, ವೀರೇಶ ಮಹಾಂತಯ್ಯಮಠ, ರಾಜು ನಾಯಕ, ದೇವೇಂದ್ರಪ್ಪ ಸಿಂಧನೂರು, ದೇವಪ್ಪ ಕಟ್ಟಿಮನಿ, ಮಲ್ಲನಗೌಡ ಕೋನನಗೌಡ್ರ, ಯಮನಪ್ಪ ಕಟಗಿ, ಪ್ರದೀಪಗೌಡ ಮಾಲಿಪಾಟೀಲ್, ಈಶಪ್ಪ ಮಾದಿನೂರು ಇದ್ದರು. ಶರಣಪ್ಪ ಜಡಿ ಕಾರ್ಯಕ್ರಮ ನಿರೂಪಿಸಿದರು.