ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಇಲ್ಲಿನ ಪುರಸಭೆಯ ಐವರು ಬಿಜೆಪಿ ಸದಸ್ಯರು ವಿಪ್ ಉಲ್ಲಂಘಿಸಿದ್ದಾರೆ ಎಂದು ಐವರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಜಿಲ್ಲಾ ದಂಡಾಧಿಕಾರಿ ಶಿಲ್ಪಾನಾಗ್ ಅನರ್ಹ ಗೊಳಿಸಿದ್ದಾರೆ.
ಬಿಜೆಪಿ ಚಿಹ್ನೆಯಡಿ ೨೦೧೯ರ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಪುರಸಭೆ ಸದಸ್ಯ ಕಿರಣ್‌ಗೌಡ, ರಮೇಶ್, ರಾಣಿ ಲಕ್ಷ್ಮೀದೇವಿ, ವೀಣಾ ಮಂಜುನಾಥ್, ಹೀನಾ ಕೌಸರ್ ಸದಸ್ಯತ್ವ ಅನರ್ಹಗೊಂಡವರಾಗಿದ್ದಾರೆ. ಬಿಜೆಪಿ ಸದಸ್ಯರಾದ ಪಿ.ಗಿರೀಶ್ ಕುಮಾರ್ ಅವರು ೨೦೨೪ರ ಸೆ.೪ ರಂದು ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರು, ಬಿಜೆಪಿ ನೀಡಿದ ವಿಪ್ ಆದೇಶದ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ ಎಂದು ೨೦೨೪ ಸೆ.೧೨ ರಂದು ಪುರಸಭೆ ಮುಖ್ಯಾಧಿಕಾರಿಗೆ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿ ನಿಯಮ ೧೯೮೭ ರ ಸೆಕ್ಷನ್ ೪(i)(a)(b) ಅಡಿಯಲ್ಲಿ ದೂರು ಸಲ್ಲಿಸಿದ್ದರು.ಇದಾದ ಬಳಿ ಜಿಲ್ಲಾಧಿಕಾರಿಗಳು ಸುದೀರ್ಘ ವಾದಿ ಮತ್ತು ಪ್ರತಿ ವಾದಿಗಳ ಪರ ವಕೀಲರ ವಿಚಾರಣೆ ನಡೆಸಿ ದೂರು ಮತ್ತು ಆಕ್ಷೇಪಣೆ ಹೇಳಿಕೆಗಳನ್ನು ಗಮನಿಸಿ, ಎರಡು ಪಕ್ಷಗಳು ಸಲ್ಲಿಸಿರುವ ದಾಖಲೆಗಳನ್ನು ವಿಶ್ಲೇಷಿಸಿ ಜ.೩೦ರಂದು ತೆರದ ನ್ಯಾಯಾಲಯದಲ್ಲಿ ಕರ್ನಾಟಕ ಸ್ಥಳೀಯ ಪ್ರಾಧಿಕಾರಿಗಳ (ಪಕ್ಷಾಂತರ ನಿಷೇಧ) ಅಧಿ ನಿಯಮ ೧೯೮೭ರ ಸೆಕ್ಷನ್ ೪(೨)(iii) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಐವರು ಪುರಸಭೆ ಸದಸ್ಯರ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. "ಕೈ " ಹಿಡಿದು ಅಧ್ಯಕ್ಷ, ಉಪಾಧ್ಯಕ್ಷರಾದʼಕಮಲ ಕಲಿʼಗಳು! ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತವಿತ್ತು. ಬಿಜೆಪಿಯಲ್ಲಾದ ಕೆಲ ಬೆಳವಣಿಗೆಗಳಿಂದ ಬೇಸತ್ತ ಪುರಸಭೆ ಬಿಜೆಪಿ ಸದಸ್ಯರಾದ ಕಿರಣ್ ಗೌಡ, ಹೀನಾ ಕೌಸೀರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಕೈ ಹಿಡಿದು ಅಧ್ಯಕ್ಷ, ಉಪಾಧ್ಯಕ್ಷರಾಗಿ ನೂರು ದಿನ ಆಡಳಿತ ನಡೆಸಿದ್ದರು.
ಬಿಜೆಪಿ ಸದಸ್ಯರಾದ ಕಿರಣ್ ಗೌಡ, ಹೀನಾ ಕೌಸರ್ ಜೊತೆ ಬಿಜೆಪಿ ಸದಸ್ಯರಾದ ರಮೇಶ್, ವೀಣಾ ಮಂಜುನಾಥ್, ರಾಣಿ ಲಕ್ಷ್ಮೀ ದೇವಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಗೈರಾಗಿದ್ದರು. ಬಿಜೆಪಿಯಲ್ಲಿ ಗೆಲುವು ಸಾಧಿಸಿದ್ದ ಐವರು ಸದಸ್ಯರು ಕಾಂಗ್ರೆಸ್‌ಗೆ ಹೋದ ನಾಲ್ಕು ತಿಂಗಳಲ್ಲೇ ಸದಸ್ಯತ್ವ ಕಳೆದುಕೊಂಡಿದ್ದಾರೆ. ದೂರುದಾರರ ಪರ ಹಿರಿಯ ವಕೀಲರಾದ ಎಂ.ಎಸ್.ಮರಿಯಾದಾಸ್, ಪ್ರತಿ ವಾದಿಗಳ ಪರ ಸಿ.ಎಂ.ಜಗದೀಶ್ ವಾದ ಮಂಡಿಸಿದ್ದರು.ಐವರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿರುವ ಜಿಲ್ಲಾಧಿಕಾರಿಗಳ, ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇವೆ. ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ.-ಕಿರಣ್ ಗೌಡ, ಅನರ್ಹಗೊಂಡ ಸದಸ್ಯ
ಸದಸ್ಯತ್ವ ಅನರ್ಹತೆಗೆ ಕಾರಣಗಳು:೧) ಬಿಜೆಪಿ ಐವರು ಸದಸ್ಯರು ಬಿಜೆಪಿ ನೀಡಿದ ವಿಪ್ ಉಲ್ಲಂಘಿಸಿದ್ದರಿಂದ ಪುರಸಭೆ ಸದಸ್ಯರು ಗುಂಡ್ಲುಪೇಟೆ ಪುರಸಭೆ ಸದಸ್ಯತ್ವದಿಂದ ಅನರ್ಹತೆಗೆ ಒಳಪಟ್ಟಿರುವುದು.೨) ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುವ ಸಮಯದಲ್ಲಿ ಉಪಾಧ್ಯಕ್ಷರ ಆಯ್ಕೆಯಲ್ಲಿ ಪಕ್ಷದ ವಿರುದ್ಧ ಐವರು ಬಿಜೆಪಿ ಸದಸ್ಯರು ಮತ ಹಾಕಿರುತ್ತಾರೆ. ಪುರಸಭೆ ಸದಸ್ಯರಾದ ರಮೇಶ್, ರಾಣಿ ಲಕ್ಷ್ಮೀ ದೇವಿ, ವೀಣಾ ಮಂಜುನಾಥ್ ಉದ್ದೇಶ ಪೂರ್ವಕವಾಗಿ ಗೈರು ಹಾಜರಾಗಿರುವುದು.
೩) ಐವರು ಬಿಜೆಪಿ ಸದಸ್ಯರು ಗೈರು ಹಾಜರಾಗಲು ಕಾರಣಗಳನ್ನು ಪ್ರತಿಪಾದಿಸಿರುವುದು ಸಮಂಜಸವಾಗಿರುವುದಿಲ್ಲ.೪) ದೂರುದಾರರಾದ ಪಿ.ಗಿರೀಶ್, ಕುಮಾರ್ ಎಸ್ ಅವರು ಪ್ರಾಧಿಕಾರದ ಮುಂದೆ ಪ್ರಸ್ತುತ ಪಡಿಸಿರುವ ದಾಖಲೆಗಳ ಪ್ರಕಾರ ಪ್ರತಿವಾದಿಗಳಿಗೆ ವಿಪ್ ನೀಡಿರುವುದು ದೃಢವಾಗಿದೆ.
೫) ಬಿಜೆಪಿ ಐವರು ಸದಸ್ಯರು ಬಿಜೆಪಿ ರಾಜ್ಯಾಧ್ಯಕ್ಷರು ನೀಡಿರುವ ನಿರ್ದೇಶನಕ್ಕೆ ವಿರುದ್ಧವಾಗಿ ಮತ ಚಲಾಯಿಸಿರುವುದು ಹಾಗೂ ಗೈರು ಹಾಜರಾಗಿರುವುದು ದಾಖಲೆಗಳಿಂದ ಸಾಬೀತಾಗಿದೆ.೬) ಐವರು ಬಿಜೆಪಿ ಸದಸ್ಯರು ೨೦೨೫ ರ ಜ.೨೧ ರಂದು ನ್ಯಾಯಾಲಯದ ವಿಚಾರಣೆಯಲ್ಲಿ ನಡೆಯಬೇಕಿದ್ದ ಅಡ್ಡ ಪರೀಕ್ಷೆಗೆ ಗೈರು ಹಾಜರಾಗಿರುವುದು.೭) ೨೦೨೪ರ ಸೆ.೪ ರಂದು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಸಭೆಯ ದಿನಾಂಕದಿಂದ ೧೫ ದಿನಗಳೊಳಗೆ ಬಿಜೆಪಿ ಐವರು ಬಿಜೆಪಿ ಸದಸ್ಯರನ್ನು ಮನ್ನಿಸದ ಕಾರಣ ಸೆಕ್ಷನ್ ೩(೧)(ಬಿ)ರ ಅಡಿಯಲ್ಲಿ ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಯನ್ನು ಆಕರ್ಷಿಸಿರುವುದರಿಂದ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ ೧೯೮೭ ರ ಸೆಕ್ಷನ್ ೩(೧)(ಬಿ) ರನ್ವಯ ಜಿಲ್ಲಾಧಿಕಾರಿ ಹಾಗೂ ದಂಡಾಧಿಕಾರಿಗಳ ಆದೇಶ ಹೊರ ಬಿದ್ದಿದೆ.ದುಷ್ಟರಿಗೆ ಶಿಕ್ಷೆಯಾಗಿದೆ ಎಂದು ಜನ ಹೇಳುತ್ತಿದ್ದಾರೆ: ಪಿ.ಗಿರೀಶ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಶಾಸಕರು, ಸಚಿವರು, ಸಂಸದರು ಇದ್ದಾರೆ ಎಂದು ನಾನಾ ರೀತಿಯ ಒತ್ತಡ ತಂದಿದ್ದೇವೆ ಎಂದು ಹೇಳುತ್ತಿದ್ದ ಐವರು ಸದಸ್ಯರು ಅನರ್ಹಗೊಂಡಿದ್ದಕ್ಕೆ ದುಷ್ಟರಿಗೆ ಶಿಕ್ಷೆಯಾಗಿದೆ ಎಂದು ಪಟ್ಟಣದ ಜನರೇ ಹೇಳುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಸದಸ್ಯ ಪಿ.ಗಿರೀಶ್ ಪ್ರತಿಕ್ರಿಯಿಸಿದ್ದಾರೆ.ಕನ್ನಡಪ್ರಭದೊಂದಿಗೆ ಮಾತನಾಡಿ ನಾನು ಮತ್ತು ಪುರಸಭೆ ಬಿಜೆಪಿ ಸದಸ್ಯ ಕುಮಾರ್ ಎಸ್ ದೂರು ನೀಡಿದೆವು. ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪು ನಮಗೆ ಮೊದಲ ವಿಜಯ ಎಂದರು. ಜಿಲ್ಲಾಧಿಕಾರಿಗಳು ವಾದ, ಪ್ರತಿವಾದ ಆಲಿಸಿ ಕಾನೂನಿನ ಪ್ರಕಾರ ತೀರ್ಪು ನೀಡಿದ್ದಾರೆ. ಜಿಲ್ಲಾಧಿಕಾರಿಗಳ ತೀರ್ಪನ್ನು ಸ್ವಾಗತಿಸುತ್ತೇವೆ. ಬೆನ್ನಿಗೆ ಚೂರಿ ಹಾಕಿ ಹೋದವರಿಗೆ ಈ ತೀರ್ಪಿನಿಂದ ಸ್ಪಷ್ಟವಾದ ಉತ್ತರ ಸಿಕ್ಕಿದೆ. ನಮಗೆ ನ್ಯಾಯ ಸಿಕ್ಕಿದೆ ಎಂದರು.
ವಿಜಯೋತ್ಸವ: ಫೆ.೪ರ ಮಂಗಳವಾರ ಬೆಳಗ್ಗೆ ಪಟ್ಟಣದ ನೆಹರು ಪಾರ್ಕ್‌ನಿಂದ ಪುರಸಭೆ ಕಚೇರಿ ತನಕ ಮೆರವಣಿಗೆ ನಡೆಸಿ ಪುರಸಭೆ ಕಚೇರಿ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜೋತ್ಸವ ಆಚರಿಸಲಾಗುವುದು ಎಂದರು.