ಪಕ್ಷದ ಬಲವರ್ಧನೆಗೆ ಸದಸ್ಯತ್ವ ನೋಂದಣಿ ಆಗತ್ಯ

| Published : Jan 19 2025, 02:19 AM IST

ಸಾರಾಂಶ

ಬೂತ್, ಪಂಚಾಯತಿ, ಹೋಬಳಿ ಮಟ್ಟಗಳಲ್ಲಿ ನೋಂದಣಿ ಅಭಿಯಾನವನ್ನು ಕೈಗೊಂಡಿದ್ದು ತಾಲ್ಲೂಕಿನ ವಿವಿಧ ಹೋಬಳಿ ಮತ್ತು ಪಂಚಾಯತಿಗಳಲ್ಲಿ ಜೆಡಿಎಸ್ ಪಕ್ಷಕ್ಕೆ ನೋಂದಣಿಯನ್ನು ಮಾಡಿಸುವುದರ ಮೂಲಕ ಪಕ್ಷಕ್ಕೆ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕು. ಪಕ್ಷ ಸಂಘಟನೆಯಲ್ಲಿ ಸದಸ್ಯತ್ವ ನೋಂದಣಿ ಪ್ರಮುವಾದ ಪಾತ್ರವಹಿಸುತ್ತದೆ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕಳೆದ ವಿಧಾನಸಭಾ ಸೋಲಿಗೆ ಯಾರನ್ನೂ ದೂಷಿಸುವುದಿಲ್ಲ, ಸೋಲಿನಿಂದ ಪಾಠ ಕಲಿತಿದ್ದು ಮುಂಬರುವ ಜಿಪಂ., ತಾಪಂ ಚುನಾವಣೆಗೆ ಸಿದ್ಧಗೊಳ್ಳುವಂತೆ ಮಾಜಿ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಕಾರ್ಯಕರ್ತರಿಗೆ ಮನವಿ ಮಾಡಿದರು.

ನಗರದ ಹೊರವಲಯದ ಜೆಕೆ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸೋಲು ಗೆಲುವನ್ನು ಒಂದೇ ರೀತಿ ಅರ್ಥೈಸಿಕೊಂಡಿದ್ದು ಗೆದ್ದಾಗ ಹಿಗ್ಗಲಿಲ್ಲ, ಸೋತಾಗ ಕುಗ್ಗಲಿಲ್ಲ ನಾನು ನಿಮಗಾಗಿ ಜೆಕೆ ಭವನವನ್ನು ನಿರ್ಮಿಸಿದ್ದು ಸೋಲಿನ ಹತಾಶೆಯಲ್ಲಿ ನಾನು ಕ್ಷೇತ್ರದ ಮತದಾರರನ್ನು ನನಗೆ ಬೆನ್ನೆಲುಬಾಗಿ ನಿಂತ ಮುಖಂಡರು ಹಾಗೂ ಕಾರ್ಯಕರ್ತರ ಬೆನ್ನಿಗೆ ಸದಾ ಇರುತ್ತೇನೆಂದರು.

ಸದಸ್ಯತ್ವ ನೋಂದಣಿ ಅಭಿಯಾನ

ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿರ ಸೂಚನೆಯಂತೆ ಬೂತ್, ಪಂಚಾಯತಿ, ಹೋಬಳಿ ಮಟ್ಟಗಳಲ್ಲಿ ನೋಂದಣಿ ಅಭಿಯಾನವನ್ನು ಕೈಗೊಂಡಿದ್ದು ತಾಲ್ಲೂಕಿನ ವಿವಿಧ ಹೋಬಳಿ ಮತ್ತು ಪಂಚಾಯತಿಗಳಲ್ಲಿ ಜೆಡಿಎಸ್ ಪಕ್ಷಕ್ಕೆ ನೋಂದಣಿಯನ್ನು ಮಾಡಿಸುವುದರ ಮೂಲಕ ಪಕ್ಷಕ್ಕೆ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ. ಪಕ್ಷಕ್ಕೆ ನಾನು ಒಬ್ಬ ಕಾರ್ಯಕರ್ತನಾಗಿದ್ದು ನಿಮ್ಮೆಲ್ಲರ ಸಹಕಾರ, ಶ್ರಮದಿಂದ ನಾನು ಎರಡು ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆಂದರು.

ಸದಸ್ಯತ್ವ ನೋಂದಣಿ, ಬೂತ್ ಮಟ್ಟದಿಂದ ಸದಸ್ಯತ್ವದ ಮಾಹಿತಿ ನೀಡುವುದು ಪ್ರಮುಖವಾದುದ್ದು ಪಕ್ಷ ಸಂಘಟನೆಯಲ್ಲಿ ಸದಸ್ಯತ್ವ ನೋಂದಣಿ ಪ್ರಮುವಾದ ಪಾತ್ರವಹಿಸುತ್ತದೆ. ಪಕ್ಷದ ಚಿಹ್ನೆಯು ಸಹ ಸದಸ್ಯತ್ವ ನೋಂದಣಿಯ ಆಧಾರಮೇಲೆ ನಿರ್ಧಾರವಾಗುತ್ತದೆ ಎಂದರು.

ಬೂತ್‌ ಸಮಸ್ಯೆ ಪರಿಹರಿಸಿ

ತಾಲೂಕು ಮಟ್ಟದಲ್ಲಿ ೨೭೨ ಬೂತುಗಳಿದ್ದು ಪ್ರತಿ ಬೂತ್ ಮಟ್ಟದಲ್ಲಿ ೪ ಪ್ರಮುಖರಿದ್ದಾರೆ. ೧೬ ಇತರೇ ಜನರನ್ನು ಸೇರಿಸಿಕೊಂಡು ಬೂತ್ ಮಟ್ಟದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಸದಸ್ಯತ್ವ ನೋಂದಣಿ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆ, ಹೋಬಳಿ, ಪಂಚಾಯತಿ ವಿವರಗಳನ್ನು ನಮೂದಿಸಿಕೊಂಡು ಅವುಗಳನ್ನು ಪಕ್ಷದ ತಾಲ್ಲೂಕು ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರೆಡ್ಡಿ ಖುದ್ದು ಭೇಟಿ ನೀಡಿ ಇಲ್ಲವೆ ತಾವುಗಳೇ ಜೆಕೆ ಭವನದ ಕಚೇರಿಗೆ ತಲುಪಿಸಬೇಕೆಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಸ್ಲಿಂರಿಗೆ ಶೇಕಡಾ ೪ ಮೀಸಲಾತಿಯನ್ನು ನೀಡಿದ್ದರು. ಆದರೆ ಬಿಜೆಪಿಯವರು ಅದನ್ನು ತೆಗೆದು ಹಾಕಿದರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಮತದಾರರಿಗೆ ಮಂಕುಬೂದಿಯನ್ನು ಎರಚಿ ಗ್ಯಾರಂಟಿಗಳ ಹೆಸರಿನಲ್ಲಿ ಮತಗಳನ್ನು ಸೆಳೆದು ಈಗ ಶಕ್ತಿಯೋಜನೆಯನ್ನು ಮಾತ್ರ ನೀಡುತ್ತಿದ್ದಾರೆಂದರು.

ಕೊಟ್ಟು ಕಿತ್ತುಕೊಳ್ಳುವ ತಂತ್ರ

ಮಹಿಳೆಯರಿಗೆ ೨ ಸಾವಿರ ನೀಡುತ್ತಿದ್ದು ಮನೆಯ ಯಜಮಾನನಿಂದ ೪ ಸಾವಿರವನ್ನು ಕಿತ್ತುಕೊಳ್ಳಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡಿಸೇಲ್, ದಿನಸಿ ಪದಾರ್ಥಗಳು, ವಿದ್ಯುತ್‌ದರ, ಬಸ್ ಟಿಕೆಟ್‌ದರ, ನೋಂದಣಿಶುಲ್ಕ, ಸ್ಟಾಂಪ್ ಡ್ಯೂಟಿ ಇತ್ಯಾದಿಗಳನ್ನು ಹೆಚ್ಚಿಸಿಕೊಂಡು ಹೋಗಿ ಕೇವಲ ೨ಸಾವಿರ ಮಹಿಳೆಯರಿಗೆ ಕಣ್ಣೊರೆಸುವ ತಂತ್ರಗಾರಿಕೆಯಾಗಿ ೩-೪ ತಿಂಗಳಿಗೊಮ್ಮೆ ಹಾಕುತ್ತಿದ್ದಾರೆಂದರು.

ಪಕ್ಷ ಸಂಘಟನೆಗೆ ಶ್ರಮಿಸಿ

ಕೊಂಗನಹಳ್ಳಿ ಶಿವಾರೆಡ್ಡಿ ಮಾತನಾಡಿ ಸಂಘಟನೆಯು ಕೇವಲ ಸಭೆಗೆ ಮಾತ್ರ ಸೀಮಿತಗೊಳ್ಳಬಾರದು, ಗೇಟ್‌ನಿಂದ ಹೊರಗಡೆ ಹೋದರು ಪಕ್ಷ ಸಂಘಟನೆಗೆ ಸದಾ ಸಿದ್ಧರಾಗಿದ್ದು ನಮ್ಮ ಪಕ್ಷದವನ್ನು ಬಲಪಡಿಸಲು ಹಾಗೂ ಕಾರ್ಯಕರ್ತರ ಹಿತಕಾಯಲು ಎಲ್ಲ ನಾಯಕರುಗಳು ಹಾಗೂ ಮುಖಂಡರುಗಳು ಸಿದ್ಧರಾಗಿರಬೇಕೆಂದರು.

ಸಮದ್, ಗುಡೇ ಶ್ರೀನಿವಾಸರೆಡ್ಡಿ, ಟಮೇಟೋ ಗೌಸ್, ಕೃಷ್ಣಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರೆಡ್ಡಿ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಸಿ.ಎನ್.ವೆಂಕಟೇಶ್, ದೊಡ್ಡಹಳ್ಳಿ ಗೋಪಾಲಕೃಷ್ಣ, ಮಧು, ಜನಾರ್ಧನ್, ಸುಬ್ರಮಣಿ, ಮಲ್ಲಿಕಾರ್ಜುನಗೌಡ, ವೆಂಕಟರಮಣಪ್ಪ, ಕಂಗಾನಹಳ್ಳಿ ನಾರಾಯಣಪ್ಪ, ಕೊತ್ತೂರುಬಾಬು, ಕೃಷ್ಣಮೂರ್ತಿ, ದೇವಳಂ ಶಂಕರ್, ಅಲ್ಲು, ಅಲ್ಲಾಬಕಾಷ್, ಮಂಜುನಾಥ್, ಕೊಂಗನಹಳ್ಳಿ ಶಿವಾರೆಡ್ಡಿ, ಶ್ರೀನಿವಾಸರೆಡ್ಡಿ, ಚಂದ್ರಾರೆಡ್ಡಿ, ಭಾಸ್ಕರ್ ರೆಡ್ಡಿ, ನಾರಾಯಣಸ್ವಾಮಿ, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. .