ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಿಡುಗಡೆ ಹಾಗೂ ರೈತ ಹೋರಾಟಗಾರರ ಮೇಲಿರುವ ಚಳವಳಿ ಸಂಬಂಧಿತ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗದಗ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಗದಗ
ರೈತ ಹೋರಾಟಗಾರರ ಮೇಲಿರುವ ಚಳವಳಿ ಸಂಬಂಧಿತ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗದಗ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಎಂ.ಜಯನಗೌಡ್ರ ಮಾತನಾಡಿ, ರೈತರು ತಮ್ಮ ಜೀವನಾಧಾರವಾದ ನೀರು, ಕೃಷಿ, ಬೆಳೆಗಳಿಗೆ ನ್ಯಾಯಯುತ ಬೆಲೆ ಹಾಗೂ ರೈತರ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. 2013ರಲ್ಲಿ ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ ನೀರಾವರಿ ಯೋಜನೆ ಹಾಗೂ ಕಳಸಾ-ಬಂಡೂರಿ ನೀರಿನ ವಿಚಾರವಾಗಿ ನಡೆದ ರೈತ ಹೋರಾಟದ ಸಂದರ್ಭ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಚಳವಳಿಗೆ ಸಂಬಂಧಿಸಿದ ಹಳೆಯ ಪ್ರಕರಣದ ಹಿನ್ನೆಲೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿರುವುದು ರೈತ ಸಮುದಾಯದಲ್ಲಿ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಮಹದಾಯಿ ನೀರು ಕರ್ನಾಟಕದ ರೈತರ, ವಿಶೇಷವಾಗಿ ಉತ್ತರ ಕರ್ನಾಟಕದ ಜನರ ದೀರ್ಘಕಾಲದ ಬೇಡಿಕೆಯಾಗಿದೆ. ಈ ವಿಚಾರದಲ್ಲಿ ರೈತರ ಪರವಾಗಿ ಧ್ವನಿ ಎತ್ತಿ, ಸರ್ಕಾರಗಳ ಗಮನ ಸೆಳೆಯಲು ನಡೆದ ಹೋರಾಟಗಳ ಸಂದರ್ಭದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಕೇವಲ ಕಾನೂನು ಪ್ರಕರಣಗಳಾಗಿ ನೋಡುವುದಕ್ಕಿಂತ, ಅವುಗಳ ಹಿಂದಿರುವ ರೈತರ ಹಕ್ಕುಗಳ ಹೋರಾಟದ ಹಿನ್ನೆಲೆ ಸಹ ಪರಿಗಣಿಸುವುದು ಅಗತ್ಯವಾಗಿದೆ.
ರೈತ ಹೋರಾಟಗಾರರ ಮೇಲೆ ದಾಖಲಾಗಿರುವ ಹಳೆಯ ಪ್ರಕರಣಗಳನ್ನು ಮಾನವೀಯ ಹಾಗೂ ರೈತಪರ ದೃಷ್ಟಿಕೋನದಿಂದ ಪರಿಶೀಲಿಸುವ ಅಗತ್ಯವಿದೆ. ಅದೇ ರೀತಿ 2013ರ ಮಹದಾಯಿ ನೀರಾವರಿ ಹೋರಾಟ ಸೇರಿ ವಿವಿಧ ರೈತ ಚಳುವಳಿಗಳ ಸಂದರ್ಭದಲ್ಲಿ ರೈತ ಹೋರಾಟಗಾರರ ಮೇಲೆ ದಾಖಲಾಗಿರುವ ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಿ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ವೇಳೆ ರೈತ ಸಂಘಟನೆಯ ರವಿ ವಗ್ಗನವರ, ನಾಗರಾಜ ಕಳ್ಳಳ್ಳಿ, ಶಂಕರಗೌಡ ಪಾಟೀಲ, ರಾಮಣ್ಣ ಕಮ್ಮಾರ, ಶರಣಪ್ಪ ಕಮ್ಮಾರ, ಗೂಳಪ್ಪ ಗುಡದೂರ, ಸಂಜೀವ ಹುಡೇದ, ಈಶ್ವರ ಗದಗಿನ, ಈಶ್ವರ ದೊಡ್ಡವಾಡ, ಮಂಜು ವಡ್ಡರ, ಗಿರೀಶ ಹೊಸಮನಿ, ಮಂಜುನಾಥಗೌಡ ರಾಮನಗೌಡರ, ಈರಪ್ಪ ಶಿದ್ನೆಕೊಪ್ಪ, ರಾಮಣ್ಣ ಗಡ್ಡಳ್ಳಿ, ಅನಿಲ ಕರ್ಣೆ, ದ್ಯಾಮಣ್ಣ ಮಸಾಲಿ, ಬಸವರಾಜ ಮರಾಠ, ಸಂತೋಷ ಮಠದ, ಅಬ್ದುಲ್ ದೊಡ್ಡಮನಿ ಸೇರಿ ರೈತರು ಇದ್ದರು.