ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಟನ್ ಕಬ್ಬಿನ ದರ ಹೆಚ್ಚಿಸುವಂತೆ ಒತ್ತಾಯಿಸಿ ನಗುವನಹಳ್ಳಿ ಗ್ರಾಮಸ್ಥರು ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ನಗುವನಹಳ್ಳಿಯ ಸರ್ಕಾರಿ ಶಾಲೆಗೆ ಸಚಿವರು ಭೇಟಿ ನೀಡಿದ ವೇಳೆ ಮಾಹಿತಿ ತಿಳಿದ ಗ್ರಾಮದ ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎನ್.ವಿ ಚಲುವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಜೆಡಿಎಸ್ ಮುಖಂಡ ಎನ್.ಶಿವಸ್ವಾಮಿ ಹಾಗೂ ಗ್ರಾಪಂ ಮಾಜಿ ಸದಸ್ಯ ಚಿಕ್ಕಪಾಳ್ಯ ಪುರುಷೋತ್ತಮ ನೇತೃತ್ವದಲ್ಲಿ ಮನವಿ ಪತ್ರ ನೀಡಿದರು.

ಹಲವು ವರ್ಷಗಳಿಂದ ಕಬ್ಬಿನ ಬೆಲೆ ಹೆಚ್ಚಿಸಲು ಸರ್ಕಾರ ಮೀನಮೇಷ ಎಣಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಸೇರಿದಂತೆ ಎಲ್ಲಾ ವಸ್ತುಗಳು ದುಬಾರಿಯಾಗಿವೆ. ಕಬ್ಬು ಬೆಳೆಯಲು ರೈತ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದರು.

ಪ್ರಸ್ತುತ ವರೆವಿಗೂ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಿ ರೈತರ ಪರ ಯಾವುದೇ ಹೇಳಿಕೆಗಳು ಬರಲಿಲ್ಲ. ಜೊತೆಗೆ ರೈತರಿಗೆ ರಾಸಾಯನಿಕ ಗೋಬ್ಬರಗಳನ್ನು ಸಬ್ಸಿಡಿ ದರದಲ್ಲಿ ನೀಡುತ್ತಿಲ್ಲ. ಕೂಡಲೇ ಸರ್ಕಾರದ ಮಟ್ಟದಲ್ಲಿ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ಮಾಡಿ ಕಬ್ಬಿಗೆ ವೈಜ್ಞಾನಿಕ ಬೆಲೆ ಹೆಚ್ಚಿಸಿ ಕೊಡಬೇಕು ಎಂದು ಮನವಿ ಸಲ್ಲಿಸಿದರು.


ನಂತರ ಸಚಿವ ರುದ್ರಪ್ಪ ಲಮಾಣಿ ಮನವಿ ಸ್ವೀಕರಿಸಿ ಮಾತನಾಡಿ, ಈ ವಿಚಾರವಾಗಿ ಮುಖ್ಯ ಮಂತ್ರಿಗಳು ಸಭೆ ಕರೆಯಲಿದ್ದಾರೆ. ಕಬ್ಬು ಸೇರಿದಂತೆ ಇತರ ಪದಾರ್ಥಗಳಿಗೆ ಬೆಲೆ ನಿಗಧಿ ಮಾಡುವ ಸಭೆಯಲ್ಲಿ, ನಾನು ಚರ್ಚೆ ಮಾಡಿ ರೈತರ ಪರವಾಗಿ ನಿಲ್ಲುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಭಾರ ಅಧ್ಯಕ್ಷರಾಗಿ ಪ್ರೇಮ ಪುಟ್ಟೇಗೌಡ ಅಧಿಕಾರ ಸ್ವೀಕಾರ

ಪಾಂಡವಪುರ: ಪಟ್ಟಣದ ಟಿಎಪಿಸಿಎಂಎಸ್‌ನ ನೂತನ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷೆ ಪ್ರೇಮ ಕೆ.ಪುಟ್ಟೇಗೌಡ ಅಧಿಕಾರ ಸ್ವೀಕರಿಸಿದರು.ಸಂಘದ ಅಧ್ಯಕ್ಷರಾಗಿದ್ದ ಚಿಕ್ಕಾಡೆ ಗಿರೀಶ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಪ್ರಭಾರಿ ಅಧ್ಯಕ್ಷೆಯಾಗಿ ಹಾಲಿ ಉಪಾಧ್ಯಕ್ಷೆ ಪ್ರೇಮ ಕೆ.ಪುಟ್ಟೇಗೌಡ ಅವರು ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಪ್ರೇಮ ಕೆ.ಪುಟ್ಟೇಗೌಡ, ನಮ್ಮ ನಾಯಕರು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜಣ್ಣ ಅವರ ಆಶೀರ್ವಾದದಿಂದ ನನ್ನ ಪತಿ ಕೆ.ಪುಟ್ಟೇಗೌರು ಈ ಹಿಂದೆ ಸಂಸ್ಥೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರೂ ಇದೀಗ ನಾನು ಸಹ ಉಪಾಧ್ಯಕ್ಷೆಯಾಗಿ, ಇದೀಗ ಪ್ರಭಾರ ಅಧ್ಯಕ್ಷೆಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಎಲ್ಲಾ ನಿರ್ದೇಶಕರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.ಈ ವೇಳೆ ಮಾಜಿ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ನಿರ್ದೇಶಕರಾದ ಸಿ.ಎಸ್.ಗೋಪಾಲಗೌಡ, ವಡ್ಡರಹಳ್ಳಿ ನಿಂಗೇಗೌಡ, ಹಾರೋಹಳ್ಳಿ ಕೃಷ್ಣ, ಪಿ.ಎಲ್.ಆದರ್ಶ, ಕಿರಣ್, ಸ್ವಾಮಿ, ಚಿಟ್ಟಿಬಾಬು, ಹಾಳಯ್ಯ, ಸುನಂದಮ್ಮ, ಎಆರ್ ನಾಗಭೂಷಣ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆ.ಪುಟ್ಟೇಗೌಡ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.