ಛಾಯಾಗ್ರಹಣದಿಂದ ನೆನಪು ಜೀವಂತ: ಅನ್ನಪೂರ್ಣ

| Published : Aug 31 2025, 02:00 AM IST

ಸಾರಾಂಶ

ಛಾಯಾಗ್ರಹಣದ ಮೂಲಕ ಜೀವನದಲ್ಲಿನ ನೆನಪುಗಳನ್ನು ಹಾಗೂ ಇತಿಹಾಸದ ಘಟನೆಗಳನ್ನು ಜೀವಂತವಾಗಿಡಬಹುದು.

೧೮೬ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಸಂಡೂರು

ಛಾಯಾಗ್ರಹಣದ ಮೂಲಕ ಜೀವನದಲ್ಲಿನ ನೆನಪುಗಳನ್ನು ಹಾಗೂ ಇತಿಹಾಸದ ಘಟನೆಗಳನ್ನು ಜೀವಂತವಾಗಿಡಬಹುದು ಎಂದು ಶಾಸಕಿ ಅನ್ನಪೂರ್ಣ ಈ ತುಕಾರಾಂ ಅಭಿಪ್ರಾಯಪಟ್ಟರು.

ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಸಂಡೂರು ಫೋಟೊಗ್ರಾಫರ್ಸ್ ಹಾಗೂ ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ೧೮೬ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಪೂರ್ವಜರ ನೆನಪುಗಳು, ಅವರ ಉಡುಗೆಗಳು, ಆಭರಣಗಳೊಂದಿಗೆ ನಮ್ಮನ್ನು ಮರುಜೋಡಿಸುವವರು ಛಾಯಾಗ್ರಾಹಕರು. ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಶಿಕ್ಷಣ ತಜ್ಞರನ್ನು ಕರೆಯಿಸಿ, ಅವರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘದ ಕಾರ್ಯ ಶ್ಲಾಘನೀಯವಾಗಿದೆ. ಉತ್ತಮ ಮಾರ್ಗದರ್ಶನ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ. ಶೋಭಾರಾಣಿ ಮಾತನಾಡಿ, ಛಾಯಾಗ್ರಾಹಕರು ನಮ್ಮ ನೆನಪುಗಳನ್ನು ಕಟ್ಟಿಕೊಡುವವರು. ಛಾಯಾಚಿತ್ರಗಳಿಂದ ನಮ್ಮ ಬಾಲ್ಯ, ಕಾಲೇಜು ದಿನಗಳನ್ನು, ಜೀವನದ ಅಮೂಲ್ಯವಾದ ಘಟನೆಗಳನ್ನು ನೆನಪು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರಲ್ಲದೆ, ವಿದ್ಯೆಯಿಂದ ಗೌರವ ಬರುತ್ತದೆ. ವಿದ್ಯಾರ್ಥಿಗಳು ಸುತ್ತಲಿನ ಆಕರ್ಷಣೆಗಳಿಗೆ ಒಳಗಾಗಿ ತಪ್ಪು ಹೆಜ್ಜೆ ಇಡಬಾರದು ಎಂದರು.

ನಿರಂತರ ಶ್ರಮದಿಂದ ಸಾಧನೆ ಸಾಧ್ಯವಾಗುತ್ತದೆ. ಸಾಧನೆ ತ್ಯಾಗವನ್ನು ಬಯಸುತ್ತದೆ. ವಿದ್ಯಾರ್ಥಿಗಳು ತಂದೆ-ತಾಯಿಗಳನ್ನು ಗೌರವಿಸಬೇಕು. ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಆದರೆ, ನಮ್ಮಲ್ಲಿ ಸಾಧಿಸುವ ಕಿಚ್ಚಿರಬೇಕು ಎಂದು ಉಪಸ್ಥಿತರಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಪ್ರಭು ಸ್ವಾಮೀಜಿ ಮಾತನಾಡಿ, ಸಂಡೂರಿನ ದಿವಂಗತ ಎಂ.ವೈ. ಘೋರ್ಪಡೆಯವರು ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರಾಗಿದ್ದರು. ತಾಲೂಕಿನ ದರೋಜಿ ಕರಡಿ ಧಾಮ ವಿಶ್ವಾದ್ಯಂತ ಹೆಸರಾಗಲು ಅವರು ತೆಗೆದು ಛಾಯಾಚಿತ್ರಗಳು ಕಾರಣವಾಗಿವೆ. ಇತಿಹಾಸವನ್ನು ಕಟ್ಟಿಕೊಡುವವರು ಛಾಯಾಗ್ರಾಹಕರು. ಸಂಡೂರಿನ ಪರಿಸರ ಛಾಯಾಗ್ರಾಹಕರಿಗೆ ಹೇಳಿ ಮಾಡಿಸಿದಂತಿದೆ. ವಿದ್ಯಾರ್ಥಿಗಳಲ್ಲಿ ನಾವು ಪರಿಸರ ಆಸಕ್ತಿ, ವೈಜ್ಞಾನಿಕ ಮನೋಭಾವ ಹಾಗೂ ಕೋಮು ಸೌಹಾರ್ದತೆಯನ್ನು ಬೆಳೆಸಬೇಕಿದೆ ಎಂದರು.

ಅಂತಾರಾಷ್ಟ್ರೀಯ ಶಿಕ್ಷಣ ತಜ್ಞ ಎ.ಎಚ್. ಸಾಗರ್ ಉಪನ್ಯಾಸ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎ. ಕಾಶಪ್ಪ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಕ್ಯಾಮೆರಾ ಆವಿಷ್ಕಾರಕ್ಕೆ ಕಾರಣರಾದ ಮಹನೀಯರು, ತಮ್ಮ ಸಂಘ ಬೆಳೆದುಬಂದ ಬಗೆ ಹಾಗೂ ಸಂಘದ ಜನಪರ ಕಾರ್ಯಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಛಾಯಾಗ್ರಾಹಕರ ಸಂಘದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ. ವಿನಯ್‌ಕುಮಾರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ನಾಡಗೌಡ ಚಂದ್ರಮೋಹನ್, ತಾಲೂಕು ಸಂಘದ ಗೌರವಾಧ್ಯಕ್ಷ ಟಿ. ಜಿಲಾನ್, ಉಪಾಧ್ಯಕ್ಷರಾದ ಚಿದಾನಂದ, ಕೊಟ್ರೇಶ, ಖಜಾಂಚಿ ಪರಶುರಾಮ ಮದ್ದಾನಿ, ಸಂಘಟನಾ ಕಾರ್ಯದರ್ಶಿಗಳಾದ ಕೆ. ಸಾಧಿಕ್, ರಾಮಕೃಷ್ಣ, ಶಿವಮೂರ್ತಿ, ರಾಜಾರಾವ್, ಕೆ. ನಿಂಗನಗೌಡ, ಸದಸ್ಯರು ಹಾಗೂ ಅವರ ಕುಟುಂಬ ವರ್ಗದವರು, ವಿವಿಧ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.ದಸರಾ ಉದ್ಘಾಟನೆ: ಸಮರ್ಥನೆ

ದಸರಾ ಉತ್ಸವದ ಉದ್ಘಾಟಕರ ಕುರಿತು ಎದ್ದಿರುವ ವಿವಾದವನ್ನು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದ ಪ್ರಭು ಸ್ವಾಮೀಜಿ, ನಮ್ಮದು ಅನೇಕತೆಯಲ್ಲಿ ಏಕತೆ ಕಾಣುವ ದೇಶ. ಈ ಹಿಂದೆ ಮುಸಲ್ಮಾನರ ಆಡಳಿತಾವಧಿಯಲ್ಲಿಯೂ ದಸರಾ ಉತ್ಸವವು ಅದ್ಧೂರಿಯಾಗಿ ನಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಕೂಡಾ ಚಾಮುಂಡಿ ಬೆಟ್ಟದ ಕೆಳಗೆ ಮುಸ್ಲಿಂ ಅಂಗರಕ್ಷಕರಿಗೆ ಮಸೀದಿಯನ್ನು ಕಟ್ಟಿಸಿಕೊಟ್ಟು ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ್ದರು. ಪ್ರಾರ್ಥನೆ ಹಾಗೂ ನಮಾಜು ಒಂದೆಯಾಗಿದೆ. ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಸರಿಯಾದ ಕ್ರಮವಾಗಿದೆ ಎಂದು ಸಮರ್ಥಿಸಿದರು.