ಗ್ಯಾರಂಟಿ ಯೋಜನೆಯಿಂದ ಪುರುಷರ ಹೊರೆ ಇಳಿಕೆ: ಸಚಿವ ವೈದ್ಯ

| Published : Sep 05 2024, 12:31 AM IST

ಸಾರಾಂಶ

ಹಿಂದೆಲ್ಲ ಹೆಣ್ಣುಮಕ್ಕಳು ಎಲ್ಲದಕ್ಕೂ ಗಂಡುಮಕ್ಕಳ ಬಳಿ ಹಣ ಕೇಳುತ್ತಿದ್ದರು. ಆದರೆ ಈಗ ಗ್ಯಾರಂಟಿ ಯೋಜನೆಯಿಂದಾಗಿ ಹೆಣ್ಣುಮಕ್ಕಳು ಹಣ ಕೇಳುವುದು ತಪ್ಪಿದೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ಮುಂಡಗೋಡ: ಗ್ಯಾರಂಟಿ ಯೋಜನೆ ಕೇವಲ ಹೆಣ್ಣುಮಕ್ಕಳಿಗಾಗಿ ನೀಡಿದ ಯೋಜನೆಯಲ್ಲ, ಬದಲಾಗಿ ಕುಟುಂಬದ ನಿರ್ವಹಣೆ ಹಾಗೂ ಆರ್ಥಿಕ ಸುಧಾರಣೆಗೆ ಅನುಕೂಲವಾಗಲಿ ಎಂದು. ಇವುಗಳಿಂದ ಪುರುಷರ ಹೊರೆ ಕಡಿಮೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

ಬುಧವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆಲ್ಲ ಹೆಣ್ಣುಮಕ್ಕಳು ಎಲ್ಲದಕ್ಕೂ ಗಂಡುಮಕ್ಕಳ ಬಳಿ ಹಣ ಕೇಳುತ್ತಿದ್ದರು. ಆದರೆ ಈಗ ಗ್ಯಾರಂಟಿ ಯೋಜನೆಯಿಂದಾಗಿ ಹೆಣ್ಣುಮಕ್ಕಳು ಹಣ ಕೇಳುವುದು ತಪ್ಪಿದೆ. ಹೀಗಾಗಿ ಪುರುಷರು ಈ ಯೋಜನೆ ಬಗ್ಗೆ ಅಸಡ್ಡೆ ಮಾಡಬಾರದು ಎಂದರು.

ಸರ್ಕಾರ ಬಂದು ೬ ತಿಂಗಳೊಳಗೆ ಜನರ ಕಷ್ಟ ಅರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜನಪರವಾದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನುಡಿದಂತೆ ನಡೆದಿದ್ದಾರೆ. ಕೆಲವು ವರ್ಷದಿಂದ ಕೊರೋನಾ, ಬೆಲೆ ಏರಿಕೆ ಸೇರಿದಂತೆ ಸಾಕಷ್ಟು ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಜನರ ಸಂಕಷ್ಟವನ್ನು ಪರಿಹರಿಸುವ ದೃಷ್ಟಿಯಿಂದ ವಿರೋಧ ಪಕ್ಷದ ಸಾಕಷ್ಟು ವಿರೋಧದ ನಡುವೆ ಜನಪರವಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ವಿಳಂಬವಾಗಿರಬಹುದು, ಬಿಟ್ಟರೆ ಇನ್ನಾವುದೇ ತೊಂದರೆ ಇಲ್ಲ ಎಂದರು.

ಗ್ಯಾರಂಟಿ ಯೋಜನೆ ತಿರಸ್ಕರಿಸಿದ ೧೮೦೦ ಜನ: ಜಿಲ್ಲೆಯ ಸುಮಾರು ೧೮೦೦ ಜನ ಉಳ್ಳವರು ತಮಗೆ ಗ್ಯಾರಂಟಿ ಯೋಜನೆ ಬೇಡ ಎಂದು ಸ್ವಯಂಪ್ರೇರಿತವಾಗಿ ಬರೆದುಕೊಟ್ಟಿದ್ದಾರೆ. ಅದೇ ರೀತಿ ಇನ್ನುಳಿದ ಶ್ರೀಮಂತರು ಕೂಡ ಗ್ಯಾರಂಟಿ ಯೋಜನೆ ಬೇಡವೆಂದು ಹೇಳಿ, ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು. ಯಾರು ಏನೇ ಹೇಳಿದರೂ ಗ್ಯಾರಂಟಿ ಯೋಜನೆ ಮಾತ್ರ ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನಾ ಸಮಿತಿಯಿಂದ ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಿಸುವ ಕೆಲಸವಾಗಬೇಕಿದೆ. ಮನೆ ಮನೆಗೆ ಭೇಟಿ ನೀಡಿ ಗ್ಯಾರಂಟಿ ತಲುಪಿಸುವ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆ ಅಗತ್ಯವಿಲ್ಲದವರ ಮಾಹಿತಿ ಕಲೆ ಹಾಕಬೇಕು ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಗ್ಯಾರಂಟಿ ಯೋಜನೆಯ ಬಡ ಫಲಾನುಭವಿಗಳ ಸಮಸ್ಯೆ ಪರಿಹಾರಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಸಾರ್ವಜನಿಕ ಜೀವನ ಅಷ್ಟು ಸುಲಭವಲ್ಲ. ಶ್ರಮವಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ, ಗ್ಯಾರಂಟಿ ಯೋಜನಾ ಸಮಿತಿಯ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಗ್ಯಾರಂಟಿ ಯೋಜನೆ ಸಮಿತಿಯ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ, ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ, ತಹಸೀಲ್ದಾರ್ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಕೃಷ್ಣ ಹಿರೇಹಳ್ಳಿ, ಎಂ.ಎನ್. ದುಂಡಸಿ, ಜ್ಞಾನದೇವ ಗುಡಿಯಾಳ ಉಪಸ್ಥಿತರಿದ್ದರು. ಮಹ್ಮದ್‌ ರಫೀಕ್ ಮೀರಾ ನಾಯ್ಕ ಸ್ವಾಗತಿಸಿದರು. ಗ್ಯಾರಂಟಿ ಸಮಿತಿ ಸದಸ್ಯ ಧರ್ಮರಾಜ ನಡಗೇರಿ ವಂದಿಸಿದರು.