ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೋತಿಗಳ ಹಾವಳಿ ಹಿನ್ನೆಲೆಯಲ್ಲಿ ತಾಲೂಕಿನ ವಸಂತಪುರ ಗ್ರಾಮಕ್ಕೆ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ವಲಯ ಅರಣ್ಯಧಿಕಾರಿಗಳನ್ನು ಸಂಪರ್ಕಿಸಿ ಕೋತಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಸೂಚಿಸಿದರು.ತಾಲೂಕಿನ ಮೇಲುಕೋಟೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ವಸಂತಪುರ ಗ್ರಾಮಕ್ಕೆ ಕೆಲವು ದಿನಗಳ ಹಿಂದೆ ಕೋತಿಗಳ ಹಿಂಡು ಆಗಮಿಸಿ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದವು. ರಸ್ತೆಯಲ್ಲಿ ನಡೆದುಕೊಂಡು ಹೋಗುವ ಗ್ರಾಮಸ್ಥರ ಮೇಲೆ ದಾಳಿ ಮಾಡಿ ಕಚ್ಚಿ ಪರಚುತ್ತಿದ್ದವು.
ಅಲ್ಲದೇ, ಮನೆಗಳ ಹೆಂಚುಗಳನ್ನು ಕಿತ್ತು ಒಡೆದು ಹಾಕಿ, ಮನೆಯೊಳಗೆ ನುಗ್ಗಿ ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಎತ್ತಿಕೊಂಡು ಹೋಗುತ್ತಿವೆ. ತೆಂಗಿನ ಮರಗಳಲ್ಲಿ ಎಳನೀರು ಬಿಡದೆ ದಾಂಧಲೆ ನಡೆಸುತ್ತಿದ್ದವು.ಕೋತಿಗಳ ಹಾವಳಿಯಿಂದಾಗಿ ಗ್ರಾಮದ ರಸ್ತೆಗಳಲ್ಲಿ ಜನರು ಓಡಾಡಲು ಭಯ ಪಡುವ ಜೊತೆಗೆ ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿ ಊಟಕ್ಕೂ ತೊಂದರೆ ನೀಡಿ ಬಿಸಿಯೂಟದ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು.
ಗ್ರಾಮದ ಅಗತ್ಯ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೂ ಕೋತಿಗಳ ಕಾಟ ಹೆಚ್ಚಾಗಿತ್ತು. ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಶಾಸಕರ ಮುಂದೆ ತಮ್ಮ ಸಂಕಷ್ಟಕವನ್ನು ಹೇಳಿಕೊಂಡು ಕೋತಿಗಳ ಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ಮನೆಗಳ ದರ್ಶನ ಮಾಡಿಸಿದರು.ನಂತರ ಶಾಸಕ ಎಚ್.ಟಿ.ಮಂಜು ಕೋತಿಗಳಿಂದ ಹಾನಿಗೀಡಾಗಿರುವ ಮನೆಗಳನ್ನು ಪರಿಶೀಲಿಸಿದರು. ಸಹಜವಾಗಿ ಕೋತಿಗಳು ಅರಣ್ಯ ಪ್ರದೇಶದಿಂದ ಆಗಮಿಸಿ ಗ್ರಾಮದಲ್ಲಿ ತಂಗಿವೆ. ಕೋತಿಗಳ ಹಾವಳಿ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಆಗಮಿಸಿ ಕಣ್ಣಾರೆ ಕಂಡಿದ್ದೇನೆ. ಇಲ್ಲಿ ಬೀಡುಬಿಟ್ಟಿರುವ ಕೋತಿಗಳ ಹಿಂಡನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಮೊಬೈಲ್ ಮೂಲಕ ಅರಣ್ಯಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಈ ವೇಳೆ ತಾಪಂ ಇಒ ಕೆ.ಸುಷ್ಮಾ, ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಪಂ ಸದಸ್ಯ ಕೆಂಪೇಗೌಡ, ಮುಖಂಡರಾದ ದೇವರಾಜೇಗೌಡ, ಚಂದ್ರು, ರಾಮಕೃಷ್ಣ, ಮಂಜು, ದೇವೇಗೌಡ ಸೇರಿದಂತೆ ಹಲವರಿದ್ದರು.