ಪಟ್ಟಣದಲ್ಲಿ ಬಿಡಾಡಿ ದನಗಳು ಹಗಲು ರಾತ್ರಿ ಎನ್ನದೇ ನಡು ರಸ್ತೆಯಲ್ಲೇ ಮಲಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರು ಜೀವ ಭಯದಲ್ಲಿ ಓಡಾಡುವಂತಾಗಿದೆ.

ಕವಿತಾಳ: ಪಟ್ಟಣದಲ್ಲಿ ಬಿಡಾಡಿ ದನಗಳು ಹಗಲು ರಾತ್ರಿ ಎನ್ನದೇ ನಡು ರಸ್ತೆಯಲ್ಲೇ ಮಲಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರು ಜೀವ ಭಯದಲ್ಲಿ ಓಡಾಡುವಂತಾಗಿದೆ.

ಪಟ್ಟಣದ ಶಿವಯೋಗಿ ಶಿವಪ್ಪ ತಾತನ ಮಠದ ಹತ್ತಿರ, ಕನಕದಾಸ ವೃತ್ತ, ತ್ರಯಂಬಕೇಶ್ವರ ವಾಣಿಜ್ಯ ಸಂಕಿರಣ ಹಾಗೂ ಪ್ರೌಢಶಾಲೆಯ ಮುಂದೆ ಜಾನುವಾರುಗಳು ರಸ್ತೆಯಲ್ಲಿ ಬೀಡು ಬಿಡುತ್ತಿವೆ.

ರಸ್ತೆ ವಿಭಜಕದಲ್ಲಿ ವಿದ್ಯುತ್ ಕಂಬ ಅಳವಡಿಸದ ಕಾರಣ ಬೀದಿ ದೀಪಗಳ ವ್ಯವಸ್ಥೆ ಸರಿಯಿಲ್ಲದಿರುವುದರಿಂದ ರಾತ್ರಿ ಕತ್ತಲಿನಲ್ಲಿ ರಸ್ತೆಯಲ್ಲಿ ಮಲಗಿದ ಜಾನುವಾರುಗಳು ವಾಹನ ಸವಾರರಿಗೆ ಕಾಣಿಸದೆ ಅಪಘಾತಗಳು ಸಂಭವಿಸುತ್ತಿವೆ.

ದ್ವಿಚಕ್ರ ವಾಹನ ಸವಾರರು ಜಾನುವಾರುಗಳಿಗೆ ಗುದ್ದಿ, ರಸ್ತೆಗೆ ಬಿದ್ದು ಕೈ-ಕಾಲುಗಳಿಗೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ ಎಂದು ವಿನಾಯಕ ಕುಲಕರ್ಣಿ ಆರೋಪ ಮಾಡಿದರು.

ರಾತ್ರಿ ವೇಳೆ ಜಾನುವಾರಗಳು ಕಾಣಿಸದೆ ಬಸ್ ಮತ್ತಿತರ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಜಾನುವಾರು ಮಾಲೀಕರಿಗೆ ದಂಡ ಕಟ್ಟಿದ್ದೇವೆ ಎಂದು ಬಸ್ ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಬಿಡಾಡಿ ದನಗಳಿಂದ ತೀವ್ರ ಸಮಸ್ಯೆಯಾಗಿದೆ, ಯಾವುದೇ ಅನಾಹುತ ಸಂಭವಿಸುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ರಸ್ತೆಯಲ್ಲಿ ಅಲೆಯುವ ಬಿಡಾಡಿ ದನಗಳನ್ನು ಕೂಡಲೇ ವಶಕ್ಕೆ ಪಡೆದು ಗೋಶಾಲೆಗೆ ಸ್ಥಳಾಂತರಿಸಬೇಕು ಎಂದು ಭೀಮ್ ಆರ್ಮಿ ಹೋಬಳಿ ಘಟಕದ ಅಧ್ಯಕ್ಷ ಆಜಪ್ಪ ಬುಳ್ಳಾಪುರ ಆಗ್ರಹಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ದನಗಳ ಹಾವಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿಗೆ ಪತ್ರ ಬರೆಯಲಾಗುವುದು ಎಂದು ಕವಿತಾಳ ಠಾಣೆ ಪಿಎಸ್ಐ ಅಜ್ಮಿರ್ ತಿಳಿಸಿದ್ದಾರೆ.

--------

ಕವಿತಾಳ ಪಟ್ಟಣದ ಮುಖ್ಯ ರಸ್ತೆಯಲ್ಲೇ ಬಿಡಾಡಿದನಗಳು ಬೀಡು ಬಿಟ್ಟಿರುವುದು.