(ಕಡ್ಡಾಯ) ಮಳೆಗೆ ಮೆನೆ ಕುಸಿತ: ವಿಕಲಾಂಗ ವ್ಯಕ್ತಿ ಸಾವು

| Published : Aug 21 2024, 01:47 AM IST

ಸಾರಾಂಶ

ಮಳೆಯಿಂದ ಗೋಡೆ ಕುಸಿದು ವಿಕಲಾಂಗ ವ್ಯಕ್ತಿ ಮೃತಪಟ್ಟ ಚಿಕ್ಕಂಗಳ ಗ್ರಾಮಕ್ಕೆ ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಪ್ರವೀಣ್, ಪಿಎಸ್‌ಐ ಪವನ್ ಕುಮಾರ್ ಭೇಟಿ ನೀಡಿದ್ದರು.

ಕನ್ನಡಪ್ರಭ ವಾರ್ತೆ ಕಡೂರು

ತಾಲೂಕಿನಾದ್ಯಂತ ಸೋಮವಾರ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡು ತಾಲೂಕಿನ ಚಿಕ್ಕಂಗಳ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು ವಿಕಲಾಂಗ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಗ್ರಾಮದ ಗೋಪಾಲಗೌಡ(65) ಮೃತಪಟ್ಟವರು. ವಿಕಲಾಂಗರಾಗಿದ್ದ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಭಾರಿ ಮಳೆಗೆ ಮಧ್ಯರಾತ್ರಿ ಮನೆಯ ಗೋಡೆ ಕುಸಿದು ಪರಿಣಾಮ ಮೃತಪಟ್ಟಿದ್ದಾರೆ.ಯರದಕೆರೆಯಲ್ಲಿ ಒಂದು ಮನೆ ಕುಸಿದಿದ್ದು, ಶ್ರೀರಾಂಪುರದಲ್ಲಿ ಸುಮಾರು ಹತ್ತು ಮನೆಗಳಿಗೆ ನೀರು ನುಗ್ಗಿದೆ. ಕೆ.ಎಂ.ರಸ್ತೆ ಹಾದು ಹೋಗಿರುವ ಲಕ್ಷ್ಮೀಪುರ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ.

ರಸ್ತೆಯ ಪಕ್ಕದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ನೀರು ಮುಂದೆ ಹೋಗದೆ ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದರು.

ಸೋಮವಾರ ಸಂಜೆ 4.45ರ ಸುಮಾರಿಗೆ ಆರಂಭವಾದ ಮಳೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ವಾಹನ ಸವಾರರು ಅಂಗಡಿ ಮುಂಗಟ್ಟುಗಳ ಬಳಿ ನಿಂತು ಹೊರಡುವಂತಾಯಿತು.

ಉತ್ತಮ ಮಳೆಯಾದ ಕಾರಣ ಎಂ.ಕೋಡಿಹಳ್ಳಿ ಕೆರೆ, ತಂಗಲಿ ಕೆರೆ ಸೇರಿದಂತೆ ತಾಲೂಕಿನ ಅನೇಕ ಕೆರೆಗಳು ತುಂಬುತ್ತಿವೆ. ಚಿಕ್ಕಂಗಳ ಗ್ರಾಮಕ್ಕೆ ತಹಶೀಲ್ದಾರ್ ಪೂರ್ಣಿಮಾ, ಪಿಎಸ್‌ಐ ಪವನ್ ಕುಮಾರ್ ಭೇಟಿ ನೀಡಿದ್ದರು.